ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಗೆಲುವಿಗೆ ಕೆಲಸ ಮಾಡೋಣ: ಮಂಗಳಾದೇವಿ

Last Updated 16 ಏಪ್ರಿಲ್ 2018, 11:43 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ’ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನನ್ನ ಗುರಿ. ಜೆಡಿಎಸ್‌ನಲ್ಲಿರುವ ತಳಮಟ್ಟದ ಎಲ್ಲ ಕಾರ್ಯಕರ್ತರನ್ನು ಗುರುತಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವುದಾಗಿ’ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಮಂಗಳಾದೇವಿ ಬಿರಾದಾರ ಹೇಳಿದರು.

ಭಾನುವಾರ ತಮ್ಮ ಮನೆಯಲ್ಲಿ ಪಕ್ಷದ ಪ್ರಮುಖ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ’ಕಾರ್ಯ ನಿರ್ವಹಿಸುವುದಾಗಿ ತತ್ವ ಸಿದ್ದಾಂತಗಳ ಸ್ವಚ್ಚ ರಾಜಕಾರಣವೇ ನನ್ನ ಮಂತ್ರ, ಜೆಡಿಎಎಸ್‌ನಲ್ಲಿ ನಾಯಕರ ಕೊರತೆ ಇದ್ದರೂ ಕಾರ್ಯಕರ್ತರ ಭದ್ರ ಬುನಾದಿ ಹೊಂದಿದ್ದು ರಾಜ್ಯದಲ್ಲಿ ಸಮಿಶ್ರ ಸರ್ಕಾರ ಮಾಡಲಿದೆ’ ಎಂದರು.

’ಸುಮಾರು 20 ವರ್ಷಗಳ ಕಾಲ ಬಿಜೆಪಿ ಪಕ್ಷವನ್ನು ಸಂಘಟಿಸಿ ಜಿಲ್ಲೆಯಲ್ಲಿ ಭದ್ರವಾಗಿ ನೆಲೆಯೂರುವಂತೆ ಕೆಲಸ ಮಾಡಿದ್ದೆ. ಹೈಕಮಾಂಡ್ ಆದೇಶದಂತೆ ಜಿಲ್ಲೆಗೆ ಒಬ್ಬ ಮಹಿಳೆ ನಿಯಮವನ್ನು ನಂಬಿಕೊಂಡು ಜನ ಸೇವೆಗೆ ಸಿದ್ದಳಾಗಿದ್ದಾಗ ಪಕ್ಷದ ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷರು ನನ್ನನ್ನು ಕಡೆಗಣಿಸಿದಾಗ ಬೇಸರದಿಂದ ರಾಜಕೀಯ ನಿವೃತ್ತಿ ಪಡೆಯುವ ಚಿಂತನೆ ಮಾಡಿದ್ದೆ’ ಎಂದು ಅವರು ಭಾವುಕರಾದರು.

ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಭಜಂತ್ರಿ ಮಾತನಾಡಿ, ’ಯತ್ನಾಳ ಹಾಗೂ ನಡಹಳ್ಳಿ ಅವರು ಅವಳಿ ಜವಳಿ ಹುಲಿಗಳು ಎಂದಿದ್ದು ನಿಜವಾದ ಮಾತು. ಆದ್ದರಿಂದ ಮುದ್ದೇಬಿಹಾಳ ಮತಕ್ಷೇತ್ರದ ಮತದಾರರು ಇವೆರಡು ಹುಲಿಗಳನ್ನು ಕಾಡಿಗೆ ಕಳುಹಿಸಲು ಸಿದ್ಧರಾಗಬೇಕು. ರಾಮ–ಲಕ್ಷ್ಮಣರಂತೆ ಮುನ್ನಡೆಯೋಣ ಎಂದು ಕುಮಾರಣ್ಣನವರಿಗೆ ಸುಳ್ಳು ಭರವಸೆ ನೀಡಿ ನಂತರ ದಿನಗಳಲ್ಲಿ ಪಕ್ಷವನ್ನು ಕೈಬಿಟ್ಟಿದ್ದು ನೈತಿಕತೆಯಾ?’ ಎಂದು ಎ.ಎಸ್.ಪಾಟೀಲ ನಡಹಳ್ಳಿ ವಿರುದ್ಧ ಹರಿಹಾಯ್ದರು.

ಯುವ ಮುಖಂಡ ಅರುಣ ಪಾಟೀಲ ಮಾತನಾಡಿ, ’ದೇವರ ಹಿಪ್ಪರಗಿ ಕ್ಷೇತ್ರವನ್ನು ಸಿಂಗಾಪೂರ ಮಾಡ್ತೀನಿ, ಮುದ್ದೇಬಿಹಾಳ ಕ್ಷೇತ್ರವನ್ನು ಸಿಲಿಕಾನ ಸಿಟಿ ಮಾಡ್ತೀನಿ ಎಂದು ಹೇಳಿ ಅಲ್ಲಿ 10 ವರ್ಷ ಇಲ್ಲಿ 30 ವರ್ಷಗಳ ಅಧಿಕಾರವನ್ನು ಪಡೆದಿರುವ ಇಬ್ಬರೂ ಶಾಸಕರು ನೈತಿಕತೆ ಇಲ್ಲದವರು. ಇವರಿಗೆ ತಕ್ಕ ಶಾಸ್ತಿ ಮಾಡುವುದಕ್ಕೆ ಜೆಡಿಎಸ್ ಕಾರ್ಯಕರ್ತರು ಪಣತೊಡಬೇಕು’ ಎಂದು ಕರೆ ನೀಡಿದರು.

ಧುರೀಣ ಅರವಿಂದ ಕೊಪ್ಪ ಮಾತನಾಡಿ, ’ಅಭಿವೃದ್ಧಿಯ ಬಗ್ಗೆ ಮಾತನಾಡುವ ಎರಡೂ ರಾಷ್ಟ್ರೀಯ ಪಕ್ಷಗಳೂ ರೈತರಿಗೆ ಹಾಗೂ ಮತದಾರರಿಗೆ ಮೋಸ ಮಾಡುತ್ತಲೇ ಬಂದಿವೆ’ ಎಂದರು.

ಸಭೆಯನ್ನುದ್ದೇಶಿಸಿ ಗೋವಾ ವಿಮೋಚನಾ ಹೋರಾಟಗಾರ ಬಿ.ಎಚ್.ಮಾಗಿ, ಬಸನಗೌಡ ಮಾಡಗಿ ಮಾತನಾಡಿದರು. ಇದೇ ವೇಳೆ ತಾಲ್ಲೂಕಿನ ಕಾಳಗಿ, ಬಳಬಟ್ಟಿ, ಕಾಶಿನಕುಂಟಿ, ವಡವಡಗಿ ಮತ್ತಿತರ ಗ್ರಾಮಗಳ ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್ ತಾಲ್ಲೂಕಾಧ್ಯಕ್ಷ ಈರಸಂಗಪ್ಪಗೌಡ ಪಾಟೀಲ, ಮುಖಂಡರಾದ ಎ.ಡಿ.ಮೋಮಿನ, ಚನ್ನಪ್ಪ ಕಂಠಿ, ಸಂಗಣ್ಣ ಲಕ್ಷಟ್ಟಿ, ರಸೂಲ ದೇಸಾಯಿ, ಪುರಸಭೆ ಸದಸ್ಯ ಶಂಕರ ಕಡಿ, ಶಿವಪುತ್ರಪ್ಪ ನಿಡಗುಂದಿಮಠ, ರಹಮತ್‌ಬಿ ಅತ್ತಾರ, ನಾಗರಾಜ ಮೋಟಗಿ, ಮಹಾದೇವಿ ಬಿರಾದಾರ, ಲಕ್ಷ್ಮೀಬಾಯಿ ಹಡಪದ, ಸಿದ್ದಪ್ಪ ವಾಲಿಕಾರ ಇದ್ದರು. ಭೀಮನಗೌಡ ಕೊಡಗಾನೂರ ನಿರೂಪಿಸಿದರು. ಶಿವನಗೌಡ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT