ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 4 ಲಕ್ಷ ಮೌಲ್ಯದ 450 ಕೆ.ಜಿ ಗಾಂಜಾ ಜಪ್ತಿ

ಅಲ್ಲೂರ್ (ಬಿ) ಗಾಂಜಾ ಪ್ರಕರಣ
Last Updated 30 ಸೆಪ್ಟೆಂಬರ್ 2020, 4:02 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ಅಲ್ಲೂರ್ (ಬಿ) ಗ್ರಾಮದ ಎರಡು ಹೊಲಗಳಲ್ಲಿ ಕಾರ್ಯಾಚರಣೆ ನಡೆಸಿದ ಚಿತ್ತಾಪುರ ಪೊಲೀಸರು ₹4.10 ಲಕ್ಷ ಮೌಲ್ಯದ 450 ಕೆ.ಜಿ ಗಾಂಜಾ ಪತ್ತೆ ಮಾಡಿದ್ದಾರೆ.

ಗ್ರಾಮದ ಸರ್ವೆ ನಂ.431 ಮತ್ತು 432 ಹೊಲಗಳ ಮೇಲೆ ಭಾನುವಾರ ದಾಳಿ ಮಾಡಿದ ಪೊಲೀಸರು ಮಾಲೀಕರಾದ ಹಣಮಂತ ಮಲ್ಲಪ್ಪ ಕಟ್ಟಿ, ಭೀಮರಾಯ ಮಲ್ಲಪ್ಪ ಕಟ್ಟಿ ಎಂಬ ಇಬ್ಬರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ 20(ಎ), 20(ಬಿ) ಅಡಿ ಸೋಮವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆ. ಅತಿ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಚಿತ್ತಾಪುರದ ಪಿಎಸ್‌ಐ ಶ್ರೀಶೈಲ್‌ ಅಂಬಾಟಿ ತಿಳಿಸಿದ್ದಾರೆ.

ಪ್ರಕರಣದ ವಿವರ: ಗಾಂಜಾ ಗಿಡ ಬೆಳೆದ ಹೊಲದ ಮೇಲೆ ಭಾನುವಾರ ಬೆಳಿಗ್ಗೆ ಶಹಾಬಾದ್ ಡಿವೈಎಸ್ಪಿ ವಿ.ಎನ್ ಪಾಟೀಲ ಅವರು ಸಿಪಿಐ ಕೃಷ್ಣಪ್ಪ ಕಲ್ಲದೇವರ್, ಪಿಎಸ್ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸೋಮವಾರ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿದ್ದರು.

ತೊಗರಿ ಹೊಲದಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಗಿಡಗಳನ್ನು ಹುಡುಕಾಡಿ ಕೀಳಲು ಪೊಲೀಸರು ಎರಡು ದಿನ ಹರಸಾಹಸಪಟ್ಟಿದ್ದಾರೆ.ದಾಳಿ ನಡೆಸುವ ಒಂದು ದಿನ ಮುಂಚೆ ಅತಿಯಾಗಿ ಮಳೆಯಾಗಿದ್ದರಿಂದ ಗುಡ್ಡದ ಮೇಲಿನ ಹೊಲಕ್ಕೆ ಹೋಗಲು ಪೊಲೀಸರು ಕಡಿದಾದ ದಾರಿಯಲ್ಲಿ ಮತ್ತು ಕೆಸರಿನಲ್ಲಿ ಬರಿಗಾಲಿನಲ್ಲಿ ನಡೆಯಲು ಬಹಳ ತೊಂದರೆ ಅನುಭವಿಸಿದರು. ಭಾನುವಾರ ರಾತ್ರಿ ಕೆಲವು ಪೊಲೀಸರು ಹೊಲದಲ್ಲಿ ಉಳಿದು ಕಾವಲಿದ್ದರು ಎಂದು ತಿಳಿದು ಬಂದಿದೆ.

ಗಾಂಜಾ ಗಿಡಗಳನ್ನು ಕೀಳಲು ಮತ್ತು ಪೊಲೀಸ್ ಠಾಣೆಗೆ ಸಾಗಿಸಲು ಗ್ರಾಮಸ್ಥರ ಸಹಕಾರ ಸಿಗಲಿಲ್ಲ. ಬೇರೆ ಊರಿನಿಂದ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವ ಅನಿವಾರ್ಯತೆ ಒದಗಿತ್ತು.

ಎಎಸ್ಐ ಚಂದ್ರಾಮಪ್ಪ, ಸಿಬ್ಬಂದಿ ಬಲವಂತರೆಡ್ಡಿ, ಶ್ರೀಮಂತ, ಶರಣಪ್ಪ, ವೀರಭದ್ರಪ್ಪ, ಮೇಲಗಿರಿ, ಮಹೇಶ ರೆಡ್ಡಿ, ಶಿವಯ್ಯ ಸ್ವಾಮಿ, ಅಯ್ಯಣ್ಣ, ಮಲ್ಲೇಶಿ, ಮಲ್ಲಿಕಾರ್ಜುನ, ಬಾದಷಹಾ, ಮಲ್ಲಿನಾಥ, ಸುರೇಶ, ಶಾಂತಕುಮಾರ, ಅಜರುದ್ದಿನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT