ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 49.40ರಷ್ಟು ಮತದಾನ

ನಗರದಲ್ಲಿ ಕಾಣದ ಉತ್ಸಾಹ, ಅಡ್ಡಿಯಾದ ಶ್ರಾವಣ ಶುಕ್ರವಾರದ ಪೂಜೆ
Last Updated 4 ಸೆಪ್ಟೆಂಬರ್ 2021, 3:57 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆಗೆ ಶುಕ್ರವಾರ ನಡೆದ ಮತದಾನ ನೀರಸವಾಗಿತ್ತು. ಒಟ್ಟಾರೆ ಶೇ 49.40ರಷ್ಟು ಮಾತ್ರ ಮತದಾನವಾಗಿದೆ.

2013ರಲ್ಲಿ ನಡೆದ ಚುನಾವಣೆಯಲ್ಲಿ ಶೇ 51.41ರಷ್ಟು ಮತದಾನ ಆಗಿತ್ತು. ಸರಾಸರಿ ಶೇ 2ರಷ್ಟು ಮತದಾನ ಕಡಿಮೆಯಾದಂತಾಗಿದೆ.

ಶ್ರಾವಣದ ಕೊನೆಯ ಶುಕ್ರವಾರ ಬಂದಿದ್ದರಿಂದ ಹೆಚ್ಚಿನ ಸಂಖ್ಯೆಯ ಹಿಂದೂ ಮತದಾರರು ಮತಗಟ್ಟೆಯತ್ತ ಸುಳಿಯಲಿಲ್ಲ. ಇದರಿಂದಾಗಿ ಮತದಾನ ಪ್ರಮಾಣ ಕಡಿಮೆಯಾಗಿದೆ ಎಂಬ ವ್ಯಾಖ್ಯಾನ ಕೇಳಿ ಬಂತು.

ನಗರದ ಹಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ 1ರವರೆಗೂ ಕೇವಲ 8ರಷ್ಟು ಮತದಾನವಾಗಿತ್ತು. ಇದು ಅಭ್ಯರ್ಥಿಗಳು ಹಾಗೂ ಜಿಲ್ಲಾಡಳಿತದ ಚಿಂತೆಗೆ ಕಾರಣವಾಯಿತು. ಮಹಿಳೆ ಯರು ಪೂಜೆಯಲ್ಲಿ ನಿರತರಾಗಿದ್ದರು. ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಸಂಖ್ಯಾ ಬಾಹುಳ್ಯ ಹೊಂದಿರುವ ಮುಸ್ಲಿಂ ಸಮುದಾಯದವರು ಶುಕ್ರವಾರವಾದ್ದರಿಂದ ಮಧ್ಯಾಹ್ನದ ನಮಾಜ್‌ ಮಾಡುವು ದಕ್ಕಾಗಿ ಮಸೀದಿಗಳ ಬಳಿ ಸೇರಿದ್ದರು. ಹೀಗಾಗಿ, ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿತ್ತಾದರೂ ಹೆಚ್ಚಿನ ಸಂಖ್ಯೆಯ ಮತದಾರರು ಮಧ್ಯಾಹ್ನದವರೆಗೂ ಮತಗಟ್ಟೆಯತ್ತ ಹೆಜ್ಜೆ ಹಾಕಲಿಲ್ಲ.

ಕೆಲ ಭಾಗಗಳಲ್ಲಿ, ಹಲ್ಲೆ, ವಾಗ್ವಾದ ನಡೆಯಿತು. ಉಳಿದಂತೆ ಬಹುತೇಕ ಕಡೆ ಶಾಂತಿಯುತ ಮತದಾನ ನಡೆಯಿತು. ಪೊಲೀಸ್ ಇಲಾಖೆಯು ಮೂರ್ನಾಲ್ಕು ವಾರ್ಡ್‌ಗೆ ಒಂದರಂತೆ ನಗರ ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ನಿಯೋಜಿಸಿತ್ತು. ಜೊತೆಗೆ, ಆಯಾ ಠಾಣೆಗಳ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಮತಗಟ್ಟೆಗಳ ಬಳಿ ಗಸ್ತು ತಿರುಗಿದರು.

ಅಭ್ಯರ್ಥಿಗಳು ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಬಳಿ ಬಂದಿದ್ದರು. ಆದರೆ, ಮತದಾರರು ಬಾರದೇ ಇದ್ದುದನ್ನು ಗಮನಿಸಿ ಫೋನ್ ಕರೆ ಮಾಡಿ ಮತ ಹಾಕಲು ಬರುವಂತೆ ಕೋರಿದರು. ಸಾಲದೆಂಬಂತೆ ಆಟೊ, ಜೀಪ್, ಕಾರುಗಳನ್ನು ಮನೆಗಳಿಗೆ ಕಳುಹಿಸಿಕೊಟ್ಟರು. ಮತಗಟ್ಟೆ ಏಜೆಂಟರೊಂದಿಗೆ ಚರ್ಚಿಸಿ ಯಾರು ಬಂದಿಲ್ಲವೋ ಅವರ ಮಾಹಿತಿ ಪಡೆದುಕೊಂಡು ತಮ್ಮ ಕಾರ್ಯಕರ್ತರ ಮೂಲಕ ಆಯಾ ಮತದಾರರ ಮನೆಗೆ ಕಳುಹಿಸಿದರು.

ಬಿಜೆಪಿಯ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಬಿಜೆಪಿ ನಗರ ಜಿಲ್ಲಾ ಘಟಕದ
ಅಧ್ಯಕ್ಷ ಸಿದ್ದಾಜಿ ಪಾಟೀಲ ಹಲವು ಮತಗಟ್ಟೆಗಳಿಗೆ ತೆರಳಿ ಮತದಾನದ ವಿವರಗಳನ್ನು ಪಡೆದುಕೊಂಡರು. ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮಾಜಿ ಮೇಯರ್ ಶರಣು ಮೋದಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ ಮೂಲಗೆ ಸೇರಿದಂತೆ ಹಲವು ಮುಖಂಡರು, ಜೆಡಿಎಸ್‌, ಆಮ್ ಆದ್ಮಿ ಪಾರ್ಟಿ, ಎಐಎಂಐಎಂ, ಕರ್ನಾಟಕ ರಾಷ್ಟ್ರಸಮಿತಿ
ಮುಖಂಡರು ತಮ್ಮ ಅಭ್ಯರ್ಥಿಗಳು ಮುನ್ನಡೆ ಸಾಧಿಸಲಿ ರುವ ವಾರ್ಡ್‌ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾರರನ್ನು ಕರೆತರಲು ಯತ್ನಿಸಿದರು.

ಹಿರಿಯರು, ಅಂಗವಿಕಲರಿಂದ ಮತದಾನ: ಕಲಬುರ್ಗಿಯ ನ್ಯೂ ರಾಘವೇಂದ್ರ ಕಾಲೊನಿಯಲ್ಲಿ ನಡೆಯಲು ಸಾಧ್ಯವಾಗದ ಅಶೋಕ ಕುಮಾರ್ ಅವರನ್ನು ಆಟೊದಲ್ಲಿ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಮತಗಟ್ಟೆ ಸಿಬ್ಬಂದಿ ಸಹಾಯಕ್ಕಾಗಿ ಬಂದಿದ್ದ ವ್ಯಕ್ತಿಯನ್ನು ಹೊರಗೆ ನಿಲ್ಲುವಂತೆ ಹೇಳಿದರು. ಅವರಿಗೆ ಮತಯಂತ್ರದ ಬಳಿ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಮಾಡಿ ತಮಗೆ ಬೇಕಾದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ತಿಳಿಸಿದರು. ಇವಿಎಂ ಯಂತ್ರ ಪರಿಶೀಲಿಸಿದ ಅಶೋಕಕುಮಾರ್ ತಮ್ಮ ಮತ ಚಲಾಯಿಸಿದರು. ಮತ ದಾಖಲಾಗಿದ್ದನ್ನು ವಿ.ವಿ. ಪ್ಯಾಟ್ ಯಂತ್ರದಲ್ಲಿ ಖಚಿತಪಡಿಸಿಕೊಂಡ ಸಿಬ್ಬಂದಿ ನಂತರ ಅವರ ಸಹಾಯಕ್ಕಾಗಿ ಬಂದಿದ್ದ ವ್ಯಕ್ತಿಗೆ ಅವರನ್ನು ಕರೆದೊ ಯ್ಯುವಂತೆ ತಿಳಿಸಿದರು.

ವಾರ್ಡ್‌ 24ರ ವ್ಯಾಪ್ತಿಯ ಎಲ್‌ಐಸಿ ಕಚೇರಿಯಲ್ಲಿ 89 ವರ್ಷದ ಶ್ರೀಕೃಷ್ಣ ಮಾದಮಶೆಟ್ಟಿ, 82 ವರ್ಷದ ರಾಧಾಬಾಯಿ ಮಾದಮಶೆಟ್ಟಿ ಅವರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಮತ್ತೆ ಕೆಲವು ಕಡೆ ವೃದ್ಧರನ್ನು ಮೊಮ್ಮಕ್ಕಳು ಹೊತ್ತುಕೊಂಡು ಬಂದರು.

‘ಆಶಾ’ಗಳಿಗೆ ಸಿಗಲಿಲ್ಲ ಊಟ

ಮತಗಟ್ಟೆ ಬಳಿ ಬರುವ ಮತದಾರರಿಗೆ ಸ್ಯಾನಿಟೈಜರ್ ಸೇರಿದಂತೆ ಆರೋಗ್ಯ ಸಂಬಂಧಿ ಸೇವೆಗಳಿಗಾಗಿ ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ಜಿಲ್ಲೆಯ ವಿವಿಧ ಭಾಗಗಳಿಂದ 500 ಆಶಾ ಕಾರ್ಯಕರ್ತೆಯರನ್ನು ಕರೆಸಿಕೊಳ್ಳಲಾಗಿತ್ತು. ಆದರೆ, ಗುರುವಾರ ಸಂಜೆಯೇ ಬಂದ ಅವರಿಗೆ ರಾತ್ರಿ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

‘ಶುಕ್ರವಾರ ಸುಮಾರು 50ರಿಂದ 60 ಆಶಾ ಕಾರ್ಯಕರ್ತೆಯರಿಗೆ ಉಪಾಹಾರ ಹಾಗೂ ಊಟ ಸಿಕ್ಕಿಲ್ಲ. ಅಲ್ಲದೇ, ನಿಯಮಾನುಸಾರ ಕರ್ತವ್ಯ ಮುಗಿಸಿ ತೆರಳುವಾಗ ಅವರಿಗೆ ಪ್ರಯಾಣಭತ್ಯೆ ಹಾಗೂ ದಿನಭತ್ಯೆಯನ್ನೂ ನೀಡಿಲ್ಲ. ಈ ಬಗ್ಗೆ ಹಲವು ಆಶಾಗಳು ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕ ವಿ.ಜಿ. ದೇಸಾಯಿ ತಿಳಿಸಿದರು. ವಾರ್ಡ್‌ ಸಂಖ್ಯೆ 2, 5 , 46, 52, 53, 54, 55ರ ವಿವಿಧ ಮತಗಟ್ಟೆಗಳಲ್ಲಿ ಊಟದ ವ್ಯವಸ್ಥೆ ಇರಲಿಲ್ಲ. ಇವರ ಸ್ಥಿತಿ ನೋಡಲಾರದ ಪೊಲೀಸ್‌ ಸಿಬ್ಬಂದಿಯೇ ತಮಗೆ ಬಂದಿದ್ದ ಊಟದ ಪ್ಯಾಕೆಟ್‌ಗಳನ್ನು ಇವರಿಗೆ ನೀಡಿದರು ಎಂದು ಗೊತ್ತಾಗಿದೆ.

ಎನ್‌.ವಿ. ಶಾಲೆಯಲ್ಲಿ ಸ್ಟ್ರಾಂಗ್ ರೂಮ್

ನಗರದ ನೂತನ ವಿದ್ಯಾಲಯ ಶಾಲೆಯ ಸ್ಟ್ರಾಂಗ್ ರೂಮ್‌ನಲ್ಲಿ ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ. ಇದೇ 6ರಂದು ಬೆಳಿಗ್ಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಮುಕ್ತಾಯವಾಗುವ ನಿರೀಕ್ಷೆ ಇದೆ.

ಸಂಜೆ 6 ಗಂಟೆಗೆ ಎಲ್ಲ 533 ಮತಗಟ್ಟೆಗಳಲ್ಲಿನ ಇವಿಎಂಗಳನ್ನು ಪೊಲೀಸ್ ಭದ್ರತೆಯೊಂದಿಗೆ ಎನ್‌.ವಿ. ಶಾಲೆಗೆ ಸಾಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT