ಹಳಗನ್ನಡ ಬದಲು ಆಧುನಿಕಪೂರ್ವ ಕನ್ನಡ ಎನ್ನಿ: ಸಂಶೋಧಕ ಪ್ರೊ.ಬಸವರಾಜ ಕಲ್ಗುಡಿ

7

ಹಳಗನ್ನಡ ಬದಲು ಆಧುನಿಕಪೂರ್ವ ಕನ್ನಡ ಎನ್ನಿ: ಸಂಶೋಧಕ ಪ್ರೊ.ಬಸವರಾಜ ಕಲ್ಗುಡಿ

Published:
Updated:
Prajavani

ಕಲಬುರ್ಗಿ: ‘ಹಳಗನ್ನಡವನ್ನು ಹಳಗನ್ನಡ ಎಂದು ಹೇಳುವುದಕ್ಕಿಂತ ಆಧುನಿಕಪೂರ್ವ ಕನ್ನಡ ಎಂದು ಹೇಳುವುದು ಹೆಚ್ಚು ಸೂಕ್ತ ಮತ್ತು ಆಧುನಿಕಪೂರ್ವ ಕನ್ನಡ ಎಂದೇ ಅದನ್ನು ಅಧ್ಯಯನ ಮಾಡಬೇಕು’ ಎಂದು ಸಂಶೋಧಕ ಪ್ರೊ.ಬಸವರಾಜ ಕಲ್ಗುಡಿ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಶಾಸ್ತ್ರೀಯ ಕನ್ನಡ ಪಠ್ಯಗಳ ಅನುಸಂಧಾನ’ ಕುರಿತ ಐದು ದಿನಗಳ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಕನ್ನಡ ಬದಲು ಇಂಗ್ಲಿಷ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ಇದೇಕೆ ಹೀಗೆ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಹಳಗನ್ನಡಕ್ಕೆ ನಾಲಿಗೆ ಹೊರಳುವುದಿಲ್ಲ, ಅದರ ಬದಲು ಇಂಗ್ಲಿಷ್ ವಾಸಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು. ಅವರಿಗೆ ತಿಳಿವಳಿಕೆ ನೀಡಿ ವಿಷಯವನ್ನು ಬದಲಾಯಿಸಬೇಕಾಯಿತು. ಆದ್ದರಿಂದ ಹಳಗನ್ನಡವನ್ನು ಆಧುನಿಕಪೂರ್ವ ಕನ್ನಡ ಎಂದೇ ಓದುವುದು ಒಳಿತು’ ಎಂದು ತಿಳಿಸಿದರು.

‘ಶಾಸ್ತ್ರೀಯ ಕನ್ನಡ ಎಂದರೆ ಹಳಗನ್ನಡವಲ್ಲ. ಶಾಸ್ತ್ರೀಯ ಅಂದರೆ ಶ್ರೇಷ್ಠವಾದದ್ದು ಮತ್ತು ಪರಂಪರೆಗೆ ಹತ್ತಿರವಾದದ್ದು. ಹಳಗನ್ನಡ, ಶಿಷ್ಠ, ಮೌಖಿಕ, ಜಾನಪದ, ಸಾಹಿತ್ಯ ಎಲ್ಲವೂ ಶಾಸ್ತ್ರೀಯವಾಗಿವೆ. ಶಿಷ್ಠ ಮತ್ತು ಮೌಖಿಕದ ಮಧ್ಯೆ ಬಹಳ ವ್ಯತ್ಯಾಸವಿಲ್ಲ. ಕುಮಾರವ್ಯಾಸನ ಕಾವ್ಯಗಳನ್ನು ಅನಕ್ಷರಸ್ಥರು ಕೂಡ ಹಾಡುತ್ತಾರೆ. ದ.ರಾ.ಬೇಂದ್ರೆ, ಸಿದ್ದಲಿಂಗಯ್ಯ ಅವರ ಹೆಸರು ಗೊತ್ತಿಲ್ಲದ ಅನೇಕರು ಅವರ ಹಾಡುಗಳನ್ನು ಹಾಡುತ್ತಾರೆ. ಹೀಗಾಗಿ ಸಂಶೋಧನಾ ವಿದ್ಯಾರ್ಥಿಗಳು ಶಾಸ್ತ್ರೀಯ ಪರಿಕಲ್ಪನೆಯನ್ನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಾಹಿತ್ಯದ ವಿದ್ಯಾರ್ಥಿಗಳು ಶಬ್ದಕೋಶವನ್ನು ಇಟ್ಟುಕೊಂಡು ಓದಲು ಆರಂಭಿಸಬೇಕು. ಇಲ್ಲವಾದಲ್ಲಿ ಓದು ತಾಂತ್ರಿಕವಾಗುತ್ತದೆ. ಛಂದಸ್ಸು, ರಗಳೆ, ಷಟ್ಪದಿ, ವೃತ್ತಗಳನ್ನು ಅರ್ಥೈಸಿಕೊಂಡು ಓದಿದಾಗ ಮಾತ್ರ ಹಳಗನ್ನಡ ಸುಲಭವಾಗಿ ಅರ್ಥವಾಗುತ್ತದೆ’ ಎಂದು ಹೇಳಿದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಮಾತನಾಡಿ, ‘ಅಧ್ಯಯನ ಕೇಂದ್ರದ ವತಿಯಿಂದ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕಾವ್ಯ, ಕೃತಿಗಳ ಅಧ್ಯಯನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಯುವಪೀಳಿಗೆಯಲ್ಲಿ ಹಳಗನ್ನಡ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ’ ಎಂದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಮ್ಮಟದ ಸಂಚಾಲಕ ಡಾ.ಎಂ.ಬೈರಪ್ಪ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !