ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಐದು ಗ್ರಾಮಗಳು ಜಲಾವೃತ

76 ಮಿ.ಮೀ ಮಳೆ; ಮನೆಗಳಿಗೆ ನುಗ್ಗಿದ ನೀರು
Last Updated 17 ಸೆಪ್ಟೆಂಬರ್ 2020, 9:02 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಬುಧವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿದು ಎಲ್ಲೆಡೆ ಪ್ರವಾಹ ಪರಿಸ್ಥಿತಿ ಉಂಟು ಮಾಡಿದೆ.

ಚಿಂಚೋಳಿ ಹೋಬಳಿ ವಲಯದಲ್ಲಿ ಸುರಿದ ಮಳೆಯಿಂದ ತಾಲ್ಲೂಕಿನ ಕೊಳ್ಳೂರು, ನಾಗಾಈದಲಾಯಿ, ಕಲ್ಲೂರು ರೋಡ್, ದೇಗಲಮಡಿ, ಚಿಕ್ಕಲಿಂಗದಳ್ಳಿ ಮತ್ತು ಚಂದಾಪುರ ಗ್ರಾಮಗಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಉಂಟು ಮಾಡಿದೆ.

ಪ್ರವಾಹದಿಂದ ಅಲ್ಲಲ್ಲಿ ಜಾನುವಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದವು. ವಿದ್ಯುತ್ ಪರಿವರ್ತಕಗಳು, ಮನೆಯ ಮುಂದೆ ನಿಲ್ಲಿಸಿದ ವಿವಿಧ ವಾಹನಗಳು, ಹೊಲಗಳಲ್ಲಿ ಕೊಯ್ಲು ಮಾಡಿಟ್ಟ ಉದ್ದಿನ ಕಾಡಿನ ಮೂಟೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.

ತಾಲ್ಲೂಕಿನ ಕುಸ್ರಂಪಳ್ಳಿ ಸುತ್ತಲೂ ಸುರಿದ ಮಳೆಯ ನೀರು ಕೊಳ್ಳೂರು ಗ್ರಾಮಕ್ಕೆ ನುಗ್ಗಿ ತುರ್ತು ಪರಿಸ್ಥಿತಿ ಉಂಟು ಮಾಡಿದೆ. ಗ್ರಾಮದ ಅರ್ಧದಷ್ಟು ಮನೆಗಳಿಗೆ ನೀರು ನುಗ್ಗಿದೆ ಎಂದು ಶಿವಕುಮಾರ ಪವಾಡಶೆಟ್ಟಿ ಹಾಗೂ ಆಕಾಶ ಕೊಳ್ಳೂರು ತಿಳಿಸಿದ್ದಾರೆ.

ನಾಗಾಈದಲಾಯಿ ಗ್ರಾಮದಲ್ಲಿ ಹೊಸ ಊರು ಮತ್ತು ಹಳೆ ಊರಿನ ಮಧ್ಯೆ ಹಳ್ಳು ಉಕ್ಕೇರಿ ಹರಿದಿದೆ. ಇದರಿಂದ ನೂರಾರು ಮನೆಗಳಿಗೆ ನೀರು ನುಗ್ಗಿದೆ ಎಂದು ಯುವ ಮುಖಂಡ ನೆಲ್ಲಿ ಮಲ್ಲಿಕಾರ್ಜುನ ಮತ್ತು ಉದಯಕುಮಾರ ಪಾಟೀಲ ಪ್ರಜಾವಾಣಿಗೆ ತಿಳಿಸಿದ್ದಾರೆ.ಕಲ್ಲೂರು ರೋಡ್ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟು ಮಾಡಿದೆ ಎಂದು ಬಿಜೆಪಿ ಮುಖಂಡರಾದ ವೀರಾರೆಡ್ಡಿ ಪಾಟೀಲ ಮತ್ತು ವಿಶ್ವನಾಥ ಈದಲಾಯಿ ತಿಳಿಸಿದ್ದಾರೆ.

ದೇಗಲಮಡಿ ಗ್ರಾಮದಲ್ಲಿ ಪ್ರವಾಹ ನೀರು ಮನೆಗೆ ನುಗ್ಗಿ ಆಹಾರ ಧಾನ್ಯ ಹಾಳು ಮಾಡಿದೆ. ನ್ಯಾಯಬೆಲೆ ಅಂಗಡಿಗೆ ನೀರು ನುಗ್ಗಿದ್ದರಿಂದ ಬಡವರಿಗೆ ಹಂಚಲು ದಾಸ್ತಾನು ಮಾಡಿದ್ದ ಅಕ್ಕಿ ನೀರಿಗೆ ಆಹುತಿಯಾಗಿದೆ ಎಂದು ಯುವ ಮುಖಂಡ ಅವಿನಾಶ ಗೋಸುಲ್ ಮತ್ತು ರಂಗನಾಥ ಮುತ್ತಂಗಿ ತಿಳಿಸಿದ್ದಾರೆ.

ಚಿಂಚೋಳಿ ಪಟ್ಟಣದ ವೀರೇಂದ್ರ ಪಾಟೀಲ ಶಾಲೆ ಬಳಿ ಕಾಮಣಿ ಬಡಾವಣೆ, ಪಟೇಲ್ ಕಾಲೊನಿ, ಎಸ್‌ಬಿಐ ಬ್ಯಾಂಕಿನ ಹಿಂದಿನ ಪ್ರದೇಶ ಹಾಗೂ ಚಂದಾಪುರದ ಗಂಗೂನಾಯಕ ತಾಂಡಾ ಮತ್ತು ವೆಂಕಟೇಶ ನಗರ ಭೋವಿ ಗಲ್ಲಿಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತಾಲ್ಲೂಕಿನ ಚಿಕ್ಕಲಿಂಗದಳ್ಳಿಯಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿದೆ. ಇದರಿಂದ ಹಲವಾರು ಮನೆಗಳಲ್ಲಿನ ಆಹಾರ ಧಾನ್ಯ ಹಾಳಾಗಿವೆ ಎಂದು ನರಸಯ್ಯ ಕಲಾಲ್ ತಿಳಿಸಿದ್ದಾರೆ.

ಹೆದ್ದಾರಿ ಬಂದ್: ಪ್ರವಾಹದಿಂದ ನಾಗಾಈದಲಾಯಿ ಕೊಳ್ಳೂರು ಮಧ್ಯೆ ಹರಿಯುವ ಸೇತುವೆ ಮೇಲಿನಿಂದ ನೀರು ಹೋಗುತ್ತಿರುವುದರಿಂದ ಚಿಂಚೋಳಿ ಬೀದರ್ ಮಾರ್ಗದ ರಾಜ್ಯ ಹೆದ್ದಾರಿ– 15ರಲ್ಲಿ 4 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದೆ. ತಾಲ್ಲೂಕಿನ ಸಾಲೇಬೀರನಹಳ್ಳಿ ಚಿಮ್ಮನಚೋಡ ಮಧ್ಯೆ ತೊರೆ ಉಕ್ಕೇರಿ ಹರಿದಿದ್ದರಿಂದ ಈ ಮಾರ್ಗದಲ್ಲಿಯೂ ಸಂಚಾರ ಬಂದ್ ಆಗಿದೆ. ಗಡಿಗ್ರಾಮ ಸಂಗಾಪುರಕ್ಕೆ ಸಂಪರ್ಕ ಬೆಸೆಯುವ ನಾಲೆ ತುಂಬಿ ಹರಿದಿದ್ದರಿಂದ ಸಂಪರ್ಕ ಸ್ಥಗಿತಗೊಂಡಿದೆ.

ಚಿಂಚೋಳಿ– ಭಾಲ್ಕಿ ರಾಜ್ಯ ಹೆದ್ದಾರಿ– 75ರಲ್ಲಿ ದೋಟಿಕೋಳ ಕೆರೆ ನೀರು ಕನಕಪುರ ತಿರುವಿನಲ್ಲಿ ಭಾರಿ ಪ್ರಮಾಣದಲ್ಲಿ ಹರಿದು ಹೆದ್ದಾರಿ ಮೇಲೆ ಹೋಗುತ್ತಿರುವುದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ. ದಶಕದ ಹಿಂದೆ ಚಿಂಚೋಳಿಯ ಪದ್ಮಾ ಪಿಯು ಕಾಲೇಜು ಮತ್ತು ಬಸವೇಶ್ವರ ವೃತ್ತದ ಬಳಿ ನಿರ್ಮಿಸಿದ ಸೇತುವೆಗೆ ಹಾನಿಯಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಚಿಂಚೋಳಿ ಚಂದಾಪುರ ಮಧ್ಯೆ ಸಂಚಾರ ಸ್ಥಗಿತವಾಗಿದೆ.‌

ಚಿಂಚೋಳಿಯಲ್ಲಿ ಸಂಜೆ 4.45ರವರೆಗೆ ಸುರಿದ ಮಳೆ 76 ಮಿ.ಮೀ ದಾಖಲಾಗಿದೆ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT