ಗುರುವಾರ , ಆಗಸ್ಟ್ 5, 2021
24 °C
ಅಫಜಲಪುರ: ತಾಲ್ಲೂಕಿನಲ್ಲಿ ಉತ್ತಮ ಮಳೆ, ಹೊಂಡಗಳ ಸುತ್ತ ಬೇಲಿ ಹಾಕಲು ಆಗ್ರಹ

500 ಕೃಷಿ ಹೊಂಡ ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನ ರೇವೂರ(ಬಿ), ಗೊಬ್ಬುರ(ಬಿ) ವಲಯಗಳಲ್ಲಿ ಸುಮಾರು 30 ಗ್ರಾಮಗಳಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆಯಾಗಿ ಸುಮಾರು 500 ಖೃಷಿ ಹೊಂಡಗಳು ಭರ್ತಿಯಾಗಿವೆ. ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಲು ಅನುಕೂಲವಾಗಿದೆ.

ರೇವೂರ(ಬಿ), ಗೊಬ್ಬುರ(ಬಿ) ವಲಯಗಳಲ್ಲಿ ಕೃಷಿ ಭಾಗ್ಯ ಯೋಜನೆ ಮತ್ತು ನರೇಗಾ ಯೋಜನೆಗಳಡಿಯಲ್ಲಿ ಮತ್ತು ಕೆಲವು ಕಡೆ ತೋಟಗಾರಿಕೆ ಇಲಾಖೆಯಿಂದ ಕೃಷಿ ಹೊಂಡಗಳನ್ನು ತೋಡಲಾಗಿದೆ. ಇನ್ನೂ ಐದಾರು ಬಾರಿ ಮಳೆಯಾದರೆ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದು. ತೆರೆದ ಬಾವಿ, ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿ ಕೃಷಿಗೂ ಅನುಕೂಲ ಆಗಲಿದೆ ಎನ್ನುತ್ತಾರೆ ಅತನೂರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕವಿತಾ ಯರಗಲ್.

ಈ ಮಳೆಯಿಂದ ಕಳೆದ ಬೇಸಿಗೆಯಲ್ಲಿ ನಾಟಿ ಮಾಡಿರುವ ಕಬ್ಬು ಮತ್ತು ಬಾಳೆ ಬೆಳೆಗಳಿಗೂ ಅನುಕೂಲವಾಗಿದೆ. ಬಿತ್ತನೆಯಾದ ಮುಂಗಾರು ಬೆಳೆಗಳಿಗೂ ಅನುಕೂಲವಾಗಿದೆ. ಆದರೂ ಸಹ ಇದುವರೆಗೆ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಮಳೆಯಾಗಿಲ್ಲ, ಕೆಲವು ಕಡೆ ಉತ್ತಮ ಮಳೆಯಾದರೆ, ಇನ್ನು ಕೆಲವು ಕಡೆ ಮಳೆಯ ಕೊರತೆಯಿಂದ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ ಮತ್ತು ಬಿತ್ತನೆ ಮಾಡಿರುವ ಕಾಳುಗಳು ಮೊಳಕೆ ಒಡೆದಿಲ್ಲ ಎಂದು ಬಂದರವಾಡ ರೈತರ ಲಕ್ಷ್ಮಣ ಕಟ್ಟಿಮನಿ ಹೇಳಿದರು.

ಕೃಷಿ ಹೊಂಡಗಳು ಭರ್ತಿಯಾಗುತ್ತಿರುವುದರಿಂದ ಅವುಗಳ ಸುತ್ತಲೂ ತಂತಿ ಬೇಲಿ ಹಾಕಬೇಕು. ಇಲ್ಲದಿದ್ದರೆ ತೊಂದರೆ ಆಗುತ್ತದೆ. ಈ ಬಗ್ಗೆ ಕೃಷಿ ಇಲಾಖೆಯವರು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ತಿಳಿಸಿದರು.

ಸರ್ಕಾರ ಪ್ರಸ್ತುತ ವರ್ಷ ಕೃಷಿ ಹೊಂಡಗಳಿಗೆ ಅನುದಾನ ಕಡಿತ ಮಾಡಿದೆ. ಅದನ್ನು ಮುಂದಿನ ಬಜೆಟ್‌ನಲ್ಲಿ ಆದರೂ ಮುಂದುವರಿಸಬೇಕು ಎಂದು ಮಾಶಾಳದ ರೈತ ಮುಖಂಡರಾದ ಮಾಮಲ್‌ ರಾಜಾ, ಮೈಬೂಬ ಪಠಾಣ, ಸಂತೋಷ ಕೊಪ್ಪಾ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.