ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ಮತ್ತೆ ಆರು ಸಾವು 1256 ಜನರಲ್ಲಿ ಸೋಂಕು ದೃಢ

ಮೊದಲ ಬಾರಿಗೆ ನಾಲ್ಕಂಕಿ ತಲುಪಿದ ಸೋಂಕಿತರ ಸಂಖ್ಯೆ
Last Updated 1 ಮೇ 2021, 6:22 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕು ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದ್ದು, ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ 1256ಕ್ಕೆ ತಲುಪುವ ಮೂಲಕ ನಾಲ್ಕಂಕಿ ಮುಟ್ಟಿದೆ. ಆರು ಜನ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಶುಕ್ರವಾರದ ಬುಲೆಟಿನ್ ತಿಳಿಸಿದೆ.

ಮೊದಲೇ ಅವಶ್ಯಕ ಬೆಡ್, ಆಕ್ಸಿಜನ್, ವೆಂಟಿಲೇಟರ್‌ಗಳ ಕೊರತೆ
ಯುಂದ ಬಳಲುತ್ತಿರುವ ಜಿಲ್ಲಾಡಳಿತಕ್ಕೆ ಕೊರೊನಾ ಸೋಂಕಿತರ ಹೆಚ್ಚಳವನ್ನು ನಿಭಾಯಿಸುವುದು ಸವಾಲಾಗಿದೆ. 8394 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಸೋಂಕಿತರ ಸಂಖ್ಯೆ ಸತತವಾಗಿ ಹೆಚ್ಚಾಗುತ್ತಿರುವುದರಿಂದ ಅಗತ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದೆ. ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರ ಬೆಡ್‌ಗಳನ್ನು ಹೆಚ್ಚಿಸಲಾಗುತ್ತಿದೆ.

ಮೃತರ ವಿವರ: ತೀವ್ರ ಉಸಿರಾಟದ ತೊಂದರೆ (ಸಾರಿ), ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅಫಜಲಪುರ ತಾಲ್ಲೂಕಿನ ಕುಲಾಲಿ ಗ್ರಾಮದ 51 ವರ್ಷದ ಪುರುಷ ಏ 20ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ 27ರಂದು ನಿಧನ ಹೊಂದಿದ್ದಾರೆ. ಸಾರಿ, ಮಧುಮೇಹದಿಂದ‌ ಬಳಲುತ್ತಿದ್ದ ಕಲಬುರ್ಗಿಯ ವಿಠ್ಠಲ ನಗರದ 50 ವರ್ಷದ ಪುರುಷ ಏ 21ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.29ಕ್ಕೆ ನಿಧನರಾಗಿದ್ದಾರೆ.

ಸಾರಿ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಆಳಂದ ಪಟ್ಟಣದ 39 ವರ್ಷದ ಪುರುಷ ಏ.23ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.29ಕ್ಕೆ ಮೃತಪಟ್ಟಿ
ದ್ದಾರೆ. ಸಾರಿ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಒಕ್ಕಲಗೇರಾ ಬಸವೇಶ್ವರ ದೇವಸ್ಥಾನ ಬಳಿಯ 33 ವರ್ಷದ ಯುವಕ ಏ.24ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.27ಕ್ಕೆ ನಿಧನರಾಗಿದ್ದಾರೆ. ಸಾರಿ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿ ತಾಲ್ಲೂಕಿನ ಕುಮಸಿ ಗ್ರಾಮದ 65 ವರ್ಷದ ವೃದ್ಧೆ ಏ.24ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.29ಕ್ಕೆ ಮೃತಪಟ್ಟರು.

ಸಾರಿ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಎಂ.ಬಿ.ನಗರದ ನಿವಾಸಿ 84 ವರ್ಷದ ವೃದ್ಧೆ ಏ.27ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.30ಕ್ಕೆ ನಿಧನರಾದರು.

ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕಿನಿಂದ 466 ಜನ ನಿಧನರಾಗಿದ್ದಾರೆ.

ಆಕ್ಸಿಜನ್ ಘಟಕಕ್ಕೆ ಬೇಕು 3 ವಾರ

ಕಲಬುರ್ಗಿಯ ಇಎಸ್‌ಐಸಿ ಆಸ್ಪತ್ರೆಯಲ್ಲಿ 20 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಘಟಕವನ್ನು ಈಗಿನಿಂದಲೇ ಪ್ರಾರಂಭಿಸಿದರೂ ಮೂರು ವಾರಗಳು ಬೇಕಾಗುತ್ತವೆ. ಅಲ್ಲಿಯವರೆಗೂ ಜಿಲ್ಲೆಯ ರೋಗಿಗಳ ಪರಿಸ್ಥಿತಿ ಗಂಭೀರವಾಗಿರಲಿದೆ.

ಘಟಕ ಸ್ಥಾಪನೆಗೆ ನುರಿತ ತಂಡ ಇಲ್ಲಿಗೆ ಬರಬೇಕು. ಆದರೆ, ರಾಜ್ಯದ ಬೇರೆ ಆಸ್ಪತ್ರೆಗಳಲ್ಲಿ ಹಾಗೂ ಬೇರೆ ರಾಜ್ಯಗಳಲ್ಲಿ ಘಟಕ ಸ್ಥಾಪನೆಯಲ್ಲಿ ತೊಡಗಿಸಿಕೊಂಡಿರುವ ತಂಡ ಇಲ್ಲಿಗೆ ಬಂದಿಲ್ಲ. ಅಲ್ಲದೇ, ಘಟಕ ಸ್ಥಾಪನೆಯ ಪ್ರಕ್ರಿಯೆಗಳು ಇನ್ನೂ ಬಾಕಿ ಇವೆ. ಸಿಲಿಂಡರ್‌ಗಳ ಮೇಲೆ ಪ್ರಸ್ತುತ ಇಎಸ್‌ಐಸಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಸಿಲಿಂಡರ್‌ಗಳನ್ನು ನಂಬಿಕೊಂಡು ಕೂರಲಾಗದು. ಅಲ್ಲದೇ, ಅಷ್ಟೊಂದು ಪ್ರಮಾಣದ ಲಭ್ಯತೆಯೂ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಘಟಕ ಶುರುವಾದರೆ ಹೆಚ್ಚುವರಿಯಾಗಿ 200 ಆಕ್ಸಿಜನ್ ಬೆಡ್‌ಗಳನ್ನು ಆರಂಭಿಸಬಹುದು ಎಂದು ಅವರು ಮಾಹಿತಿ ನೀಡಿದರು.

ತಿಂಗಳಲ್ಲಿ 118 ಜನ ಸಾವು!

ಜಿಲ್ಲೆಯಲ್ಲಿ ಏಪ್ರಿಲ್ 1ರಿಂದ 30ರ ಅವಧಿಯಲ್ಲಿ ಕೊರೊನಾ ಸೋಂಕಿನಿಂದ 118 ಜನರು ಮೃತಪಟ್ಟಿದ್ದಾರೆ. ಸೋಂಕು ಆರಂಭವಾದ 2020ರ ಮಾರ್ಚ್‌ನಿಂದ ಇಲ್ಲಿಯವರೆಗೆ ಒಂದು ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ ಏಪ್ರಿಲ್‌
ಅತ್ಯಧಿಕವಾಗಿದೆ.

ಏ 22ರಂದು ಪ್ರಕಟವಾದ ಬುಲೆಟಿನ್‌ನಲ್ಲಿ 11 ದಿನ ಮೃತಪಟ್ಟಿರುವುದಾಗಿ ತಿಳಿಸಲಾಗಿತ್ತು. ಈ ಸಂಖ್ಯೆ ತಿಂಗಳಲ್ಲೇ ಅತ್ಯಧಿಕ. ನಿತ್ಯವೂ ಸರಾಸರಿ 5ರಿಂದ 8 ಜನ ಸಾವಿಗೀಡಾಗುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಮರಣ ಪ್ರಮಾಣ ಕಡಿಮೆ ಇತ್ತು. ಆದರೆ, 2ನೇ ಅಲೆಯಲ್ಲಿ ಸಾವಿಗೀಡಾಗುವವರ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲೂ ತೀವ್ರ ಉಸಿರಾಟದ ತೊಂದರೆಯಿಂದಲೇ ಹಲವರು ಸಾವಿನ ದವಡೆಗೆ ಸಿಲುಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT