ಆಶಾ ದೀಪ ಯೋಜನೆಯಡಿ ನೋಂದಣಿ ಅಭಿಯಾನ

ಭಾನುವಾರ, ಮೇ 26, 2019
33 °C

ಆಶಾ ದೀಪ ಯೋಜನೆಯಡಿ ನೋಂದಣಿ ಅಭಿಯಾನ

Published:
Updated:

ಕಲಬುರ್ಗಿ: ರಾಜ್ಯ ಸರ್ಕಾರದ ಆಶಾ ದೀಪ ಯೋಜನೆಯಡಿ ಕೆಪಿಸಿಸಿ ಕಾರ್ಮಿಕರ ವಿಭಾಗದ ವತಿಯಿಂದ ರಾಜ್ಯದಾದ್ಯಂತ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಅಧಿಕಾರಿಗಳು ಈಗಾಗಲೇ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆಯಂತೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ 10 ಸಾವಿರ ಸೇರಿದಂತೆ ರಾಜ್ಯದಾದ್ಯಂತ 30 ಲಕ್ಷ ಕಾರ್ಮಿಕರ ನೋಂದಣಿ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಫೆ.28 ರವರೆಗೆ ನೋಂದಣಿ ಮಾಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಮಾರ್ಚ್ 1ರಂದು ಅಸಂಘಟಿತ ಕಾರ್ಮಿಕರ ದಿನವನ್ನು ಆಚರಿಸಿ, ಆಶಾ ದೀಪ ಯೋಜನೆ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಕಾರ್ಮಿಕರು ಮೂರು ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು. ನೋಂದಣಿ ಬಳಿಕ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಕಾರ್ಮಿಕರು ಪ್ರತಿ ತಿಂಗಳು ₹100 ಪಾವತಿಸಬೇಕು, ರಾಜ್ಯ ಸರ್ಕಾರ ₹200 ಪಾವತಿಸುತ್ತದೆ. 60 ವರ್ಷಗಳ ಬಳಿಕ ಪಿಂಚಣಿ ಪಡೆಯಬಹುದಾಗಿದೆ ಎಂದರು.

ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ₹7 ಸಾವಿರ ಕೋಟಿ ಹಣ ಇದೆ. ವಾರ್ಷಿಕ ₹400 ಬಡ್ಡಿ ಸಂಗ್ರಹವಾಗುತ್ತಿದ್ದು, ₹300 ಕೋಟಿ ಮಾತ್ರ ಖರ್ಚಾಗುತ್ತಿದೆ. ಬಹಳಷ್ಟು ಜನರು ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕಾಗಿಯೇ ಕಾರ್ಮಿಕರ ವಿಭಾಗದಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಕಾರ್ಮಿಕರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸುಬೇದಾರ, ಮುಖಂಡರಾದ ಶಿವಕುಮಾರ ಬಾಳಿ, ನೀಲಕಂಠ ಮೂಲಗೆ, ಮಹಾಂತಪ್ಪ ಸಂಗಾವಿ, ಚಂದ್ರಿಕಾ ಪರಮೇಶ್ವರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !