ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಣ ಅಭಿಯಾನದಡಿ 72 ಸಾವಿರ ಸ್ಮಾರ್ಟ್ ಫೋನ್ ವಿತರಣೆ

ಗರ್ಭಿಣಿಯರು, ಶಿಶುಗಳ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹ
Last Updated 13 ಜನವರಿ 2021, 4:00 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪೋಷಣ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರು, ಶಿಶು ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಭಿಯಾನದ ಸಂಯೋಜಕರಿಗೆ 72 ಸಾವಿರಕ್ಕೂ ಅಧಿಕ ಸ್ಮಾರ್ಟ್‌ ಫೋನ್‌ಗಳನ್ನು ರಾಜ್ಯ ಸರ್ಕಾರದಿಂದ ಕೊಡಲಾದೆ. ಇದರಿಂದ ಆನ್‌ಲೈನ್‌ ಮೂಲಕವೇ ಗರ್ಭಿಣಿಯರು, ಬಾಣಂತಿಯರು ಹಾಗೂ ಶಿಶುಗಳ ಆರೋಗ್ಯದ ಮಾಹಿತಿ ಪಡೆಯಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.‌

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2017–18ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪೋಷಣ ಅಭಿಯಾನವನ್ನು ಆರಂಭಿಸಿದ್ದರು. ಆದರೆ, ರಾಜ್ಯದಲ್ಲಿ ಇದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಯೋಜನೆಯ ಪರಿಣಾಮಕಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಅಷ್ಟೂ ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲಾಗಿದೆ. ಮೊದಲು ಶಿಶುಗಳು ಹಾಗೂ ಗರ್ಭಿಣಿ, ಬಾಣಂತಿಯರ ಆರೋಗ್ಯದ ವಿವರವನ್ನು ಪುಸ್ತಕದಲ್ಲಿ ಬರೆದುಕೊಳ್ಳಲಾಗುತ್ತಿತ್ತು. ಅದನ್ನು ಬದಲಾಯಿಸಿ ಆನ್‌ಲೈನ್‌ ಮಾಡಲಾಗಿದ್ದು, ತಕ್ಷಣದ ಮಾಹಿತಿ ಲಭ್ಯವಾಗುತ್ತಿದ. ಇದರಿಂದ ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡಬಹುದಾಗಿದೆ’ ಎಂದರು.

ಮಹಿಳಾ ಸುರಕ್ಷೆಗೆ ಒನ್‌ ಸ್ಟಾಪ್ ಕೇಂದ್ರ: ‘ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಆಪ್ತ ಸಮಾಲೋಚನೆ ನಡೆಸಲು ಪ್ರತಿ ಜಿಲ್ಲೆಯಲ್ಲಿ ಒಂದೊಂದು ‘ಒನ್ ಸ್ಟಾಪ್ ಕೇಂದ್ರ’ಗಳನ್ನು ಆರಂಭಿಸಲಾಗುತ್ತಿದೆ. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್, ಆರೋಗ್ಯ ಸಿಬ್ಬಂದಿ ಇರಲಿದ್ದಾರೆ. ಈ ಕೇಂದ್ರಕ್ಕೆ ಬಂದು ಸಮಸ್ಯೆಗಳನ್ನು ಹೇಳಿಕೊಂಡರೆ ಪರಿಹಾರ ಕಲ್ಪಿಸಲಾಗುವುದು. ಮಾನಸಿಕವಾಗಿ ಜರ್ಝರಿತವಾದ ಮಹಿಳೆಯರಿಗೆ ನುರಿತ ಆಪ್ತ ಸಮಾಲೋಚಕರಿಂದ ಸಮಾಲೋಚನೆ ದೊರೆಯಲಿದೆ’ ಎಂದು ಹೇಳಿದರು.

‘ರಾಜ್ಯದ 29 ಜಿಲ್ಲೆಗಳಲ್ಲಿ ಇಂತಹ ಕೇಂದ್ರಗಳು ಬರಲಿದ್ದು, ಕೆಲವು ಕಟ್ಟಡಗಳು ಮುಕ್ತಾಯ ಹಂತದಲ್ಲಿವೆ. ಕಲಬುರ್ಗಿಯಲ್ಲಿ ಕೆಲವೇ ದಿನಗಳಲ್ಲಿ ಈ ಕೇಂದ್ರದ ಕಟ್ಟಡದ ಉದ್ಘಾಟನೆ ನೆರವೇರಲಿದೆ’ ಎಂದರು.

‘ಒಟ್ಟಾರೆ ರಾಜ್ಯದಲ್ಲಿ ಎರಡು ಲಕ್ಷ ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ವಿತರಿಸಲಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಬಾಂಡ್‌ ವಿತರಿಸಲಾಗುತ್ತಿದೆ’ ಎಂದು ಶಶಿಕಲಾ ಜೊಲ್ಲೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT