ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ: ಗುಳೆ ತಡೆಯಲು ಸಕಲ ಯತ್ನ

Last Updated 16 ಜನವರಿ 2019, 14:24 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಜನ ಗುಳೆ ಹೋಗುವುದನ್ನು ತಡೆಯಲು ಹಾಗೂ ಉದ್ಯೋಗ ಕಲ್ಪಿಸಲು ಜಿಲ್ಲಾ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ 7.5 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದರು.

ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 10 ಕಾಮಗಾರಿಗಳನ್ನು ಪ್ರಾರಂಭಿಸಲು ನಿರ್ದೇಶನ ನೀಡಲಾಗಿದ್ದು, ಕಾಮಗಾರಿಗಳು ಚೆನ್ನಾಗಿ ನಡೆಯುತ್ತಿವೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ ₹50 ಲಕ್ಷ ಅನುದಾನ ಬಿಡಗುಡೆಯಾಗಿದ್ದು, ಕಾಮಗಾರಿ ಆರಂಭಗೊಂಡಿವೆ. ಹಿಂಗಾರು ಹಂಗಾಮಿನಲ್ಲಿ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ ಎಂದರು.

ನಗರ ಪ್ರದೇಶದಲ್ಲಿ ₹1.14 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬೆಣ್ಣೆತೊರಾದಿಂದ ಕಲಬುರ್ಗಿಗೆ ನೀರುಪೂರೈಕೆಯಾಗುವ ಯೋಜನೆಯಲ್ಲಿ ಮಾರ್ಗಮಧ್ಯೆ ಸೋರಿಕೆ ತಡೆಗಟ್ಟಲು ₹12 ಕೋಟಿ ವೆಚ್ಚದಲ್ಲಿ 9.3 ಕಿ.ಮೀ. ಪೈಪ್‌ಲೈನ್‌ ಮರುಜೋಡಣೆ ಕಾಮಗಾರಿ ಪ್ರಾರಂಭಿಸಲಾಗಿದೆ. ಇದರಿಂದಾಗಿ ಪ್ರತಿದಿನ ನಗರಕ್ಕೆ 10 ಎಂ.ಎಲ್.ಡಿ. ಕುಡಿಯುವ ನೀರು ಹೆಚ್ಚಿಗೆ ದೊರೆಯಲಿದ್ದು,ಎಲ್ಲ ವಾರ್ಡ್‌ಗಳಿಗೆ ಸಮರ್ಪಕವಾಗಿ ಪೂರೈಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಬೆಳೆಹಾನಿ: ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಒಟ್ಟು ₹294 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರವು ‘ಗ್ರೌಂಡ್ ಟ್ರೂಥಿಂಗ್’ ಆ್ಯಪ್ ಮೂಲಕ ಬೆಳೆ ಹಾನಿ ವರದಿ ಮಾಡಲು ತಿಳಿಸಿದ್ದು, ಹಾನಿಗೊಳಗಾದ ಶೇ 10ರಷ್ಟು ಹಳ್ಳಿಗಳನ್ನು ಆಯ್ಕೆಮಾಡಿ ಪ್ರತಿ ಹಳ್ಳಿಯಿಂದ ಐದು ಸರ್ವೆ ನಂಬರುಗಳ ಹಾನಿ ಚಿತ್ರಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಹೇಳಿದರು.

ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ಇದ್ದರು.

ವಿಮಾನ ನಿಲ್ದಾಣ ಜಂಟಿ ನಿರ್ವಹಣೆ

ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಏರೋಡ್ರಮ್ ಪರವಾನಗಿಗಾಗಿ ನಾಗರಿಕ ವಿಮಾನಯಾನ ಸಚಿವಾಲಯದ ಮಹಾನಿರ್ದೇಶಕರಿಗೆ (ಡಿಜಿಸಿಎ) ಅರ್ಜಿ ಸಲ್ಲಿಸಲಾಗಿದೆ. ವಿಮಾ ನಿಲ್ದಾಣವನ್ನು ಭಾರತೀಯ ವಿಮಾನಯಾನ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರ ಜಂಟಿಯಾಗಿ ನಿರ್ವಹಿಸುವ ಪ್ರಸ್ತಾವ ಅಂತಿಮ ಹಂತದಲ್ಲಿದೆ ಎಂದು ವೆಂಕಟೇಶಕುಮಾರ್‌ ಹೇಳಿದರು.

ಆದಿಜಾಂಬವ ನಿಗಮದ ಲೋಕಾರ್ಪಣೆ

ಕಲಬುರ್ಗಿ: ಬೆಂಗಳೂರಿನಲ್ಲಿ ಜ.17 ರಂದು ಬೆಳಿಗ್ಗೆ 11.30 ಗಂಟೆಗೆ ನಡೆಯಲಿರುವ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಸಮಾಜ ಬಾಂಧವರು ತೆರಳಿದರು.

ಇವರು ತೆರಳಲು ಸಮಾಜ ಕಲ್ಯಾಣ ಇಲಾಖೆ 18 ಬಸ್‌ ವ್ಯವಸ್ಥೆ ಮಾಡಿದ್ದು, ಇವುಗಳಿಗೆ ಜಿಲ್ಲಾಧಿಕಾರಿ ಆರ್ ವೆಂಕಟೇಶಕುಮಾರ್‌ ತಮ್ಮ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

ಚಿತ್ತಾಪುರದಿಂದ ಐದು, ಚಿಂಚೋಳಿ ಮತ್ತು ಜೇವರ್ಗಿಯಿಂದ ತಲಾ ಎರಡು, ಸೇಡಂ, ಆಳಂದ, ಅಫಜಲಪುರ, ಕಲಬುರ್ಗಿ ಗ್ರಾಮೀಣದಿಂದ ತಲಾ ಒಂದು ಹಾಗೂ ಕಲಬುರ್ಗಿ ನಗರದಿಂದ ಮೂರು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸತೀಶ, ಡಾ.ಬಿ.ಆರ್. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮುನವಾರ ದೌಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT