ಒಂದೇ ವರ್ಷದಲ್ಲಿ 82 ‘ಆನೆಕಾಲು’ ಪ್ರಕರಣ ಪತ್ತೆ

7
ಆರೋಗ್ಯ ಇಲಾಖೆಯಿಂದ ಸಮರೋಪಾದಿ ಕೆಲಸ * ಶೇ 92 ಮಂದಿಗೆ ಮಾತ್ರೆ ವಿತರಣೆ * ಇನ್ನೂ ಒಂದುವಾರ ಆಶಾ ಕಾರ್ಯಕರ್ತೆಯರ ಬಳಿ ಇರಲಿವೆ ಮಾತ್ರೆ * ಜನರ ಸಂದೇಹ ದೂರ ಮಾಡಲು ಕಸರತ್ತು * ಮೈಮರೆತರೆ ಒಕ್ಕರಿಸಲಿದೆ ಅಂಟುರೋಗ

ಒಂದೇ ವರ್ಷದಲ್ಲಿ 82 ‘ಆನೆಕಾಲು’ ಪ್ರಕರಣ ಪತ್ತೆ

Published:
Updated:

ಕಲಬುರ್ಗಿ: ಜಿಲ್ಲೆಯಲ್ಲಿ ಈ ಬಾರಿ 82 ಮಂದಿಗೆ ಆನೆಕಾಲು ರೋಗ ತಗುಲಿದ್ದು ಪತ್ತೆಯಾಗಿದೆ. ಇದರಲ್ಲಿ ಚಿಂಚೋಳಿ ತಾಲ್ಲೂಕಿನ ವಸ್ತಾರೆ ಗ್ರಾಮವೊಂದರಲ್ಲೇ 44 ಪ್ರಕರಣಗಳು ಕಂಡುಬಂದಿವೆ.

ಅಂದಾಜು 2,500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ನೀರಾವರಿ ಹೆಚ್ಚಾಗಿದೆ. ಊರಿನ ಬಳಿಯೇ ಇರುವ ಕೆರೆ ಮಲಿನವಾಗಿದೆ. ಚರಂಡಿ ವ್ಯವಸ್ಥೆ ಹಾಳಾಗಿದೆ. ಇದರಿಂದ ಗ್ರಾಮದಲ್ಲಿ ರೋಗಕ್ಕೆ ಕಾರಣವಾಗುವ ‘ಕ್ಯೂಲೆಕ್ಸ್‌’ ಹೆಣ್ಣು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಸವರಾಜ ಗುಳಗಿ.

ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿಯೇ ತಾತ್ಕಾಲಿಕ ತಪಾಸಣೆ ಹಾಗೂ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ನಿರಂತರ 12 ದಿನ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಪ್ರತಿಯೊಬ್ಬರಿಗೂ ಡಿಇಸಿ (ಡೈ ಇಥೈಲ್‌ ಕಾರ್ಬಮೆಜೈನ್‌) ಹಾಗೂ ಅಲ್ಬೆಂಡಜೋಲ್‌ ಮಾತ್ರೆಗಳನ್ನು ಕಡ್ಡಾಯವಾಗಿ ನುಂಗಿಸಲಾಗಿದೆ. ಪ್ರತಿ ಮನೆಗೂ ಎಲ್‌ಎಲ್‌ಐಎನ್‌ ಎಂಬ ವಿಶೇಷ ಸೊಳ್ಳೆ ಪರದೆಗಳನ್ನು ವಿತರಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಒಟ್ಟು 7,706 ಮಂದಿ ಆನೆಕಾಲು ರೋಗದಿಂದ ಬಳಲುತ್ತಿದ್ದಾರೆ. ಇದರಲ್ಲಿ ಹಳೆಯ ಪ್ರಕರಣಗಳೇ ಹೆಚ್ಚು. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಮಾತ್ರೆ ನೀಡುವ ಬದಲು ನುಂಗಿಸುವ ಕ್ರಮಕ್ಕೆ ಮುಮದಾಗಿದ್ದಾರೆ ಸಿಬ್ಬಂದಿ.

ಶೇ 92 ಮಂದಿಗೆ ವಿತರಣೆ: ಶನಿವಾರದ ಹೊತ್ತಿಗೆ ಶೇ 92 ಮಂದಿಗೆ ಮಾತ್ರೆ ವಿತರಿಸಲಾಗಿದೆ. ಇದರಲ್ಲಿ ಎಷ್ಟು ಮಂದಿ ನುಂಗಿದ್ದಾರೆ ಎಂಬ ಮಾಹಿತಿ ಇನ್ನೂ ನಿಖರವಾಗಿಲ್ಲ. ಬಹುಪಾಲು ಮಂದಿಗೆ ಮುಂದೆ ನಿಂತು ನುಂಗಿಸಿದ್ದಾಗಿ ಇಲಾಖೆಯ  ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇನ್ನೂ ವಿಶೇಷ ಕಾಳಜಿ ವಹಿಸಿ ಶೇ 15ರಷ್ಟು ಶಾಲೆಗಳಲ್ಲಿ ಮಕ್ಕಳಿಗೆ ಮಾತ್ರೆ ನುಂಗಿಸಿದ್ದಾರೆ.

ಸೆ. 24ರಿಂದ ಅ. 6ರವರೆಗೆ ಸಾಮೂಹಿಕ ಮಾತ್ರೆ ನುಂಗಿಸುವ ಅಭಿಯಾನ ನಡೆಯಿತು. ಹಾಗೆಂದು ಇನ್ನು ಮುಂದೆ ಮಾತ್ರೆ ಸಿಗುವುದಿಲ್ಲ ಎಂದಲ್ಲ. ಅಂಗನವಾಡಿ– ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯಲ್ಲಿ ಯಾವಾಗಲೂ ಸಿಗುವ ವ್ಯವಸ್ಥೆ ಮಾಡಲಾಗಿದೆ.

ಮಾತ್ರೆ ನುಂಗುವ ಬಗೆ: ‘ಊಟ ಅಥವಾ ಉಪಾಹಾರ ಸೇವಿಸಿದ ಬಳಿಕವೇ ಈ ಮಾತ್ರೆ ನುಂಗಬೇಕು. ಖಾಲಿ ಹೊಟ್ಟೆಯಲ್ಲಿ ನುಂಗುವುದರಿಂದ ತಲೆನೋವು, ವಾಂತಿ, ಜ್ವರ ಬರುವ ಸಾಧ್ಯತೆ ಇದೆ. ಇದಕ್ಕೆ ಹೆದರುವ ಅಗತ್ಯವಿಲ್ಲ’ ಎಂದು ಆರೋಗ್ಯ ಇಲಾಖೆಯ ಕಿರಿಯ ಪ್ರಯೋಗಶಾಲಾ ತಂತ್ರಜ್ಞ ಚಂದ್ರಕಾಂತ ಎರಿ ತಿಳಿಸಿದ್ದಾರೆ.

2ರಿಂದ 5 ವರ್ಷದವರೆಗಿನ ಮಕ್ಕಳು 100 ಎಂ.ಜಿ.ಯ 1 ಡಿಇಸಿ ಮಾತ್ರೆ, 6ರಿಂದ 14 ವರ್ಷದವರು 200 ಎಂ.ಜಿ.ಯ 2 ಮಾತ್ರೆ ಹಾಗೂ 15 ವರ್ಷ ಮೇಲ್ಪಟ್ಟ ಎಲ್ಲರಿಗೂ 300 ಎಂ.ಜಿ.ಯ 3 ನುಂಗಬೇಕು. ಇದರ ಜತೆಗೆ 400 ಎಂ.ಜಿ.ಯ ಒಂದು ಅಲ್ಬೆಂಡಜೋಲ್‌ ಮಾತ್ರೆ ಚಪ್ಪರಿಸಬೇಕು.

ವರ್ಷಕ್ಕೆ ಒಂದುಬಾರಿಯಂತೆ ನಿರಂತರ 5 ವರ್ಷ ನುಂಗಬೇಕು. ನಂತರ ಜೀವನಪೂರ್ತಿ ಈ ರೋಗ ಬರುವುದಿಲ್ಲ ಎಂಬುದು ಅವರ ವಿವರಣೆ.

5 ವರ್ಷದ ಬಳಿಕ ರೋಗ ಲಕ್ಷಣ: ‘ಕ್ಯೂಲೆಕ್ಸ್‌’ ಹೆಣ್ಣು ಸೊಳ್ಳೆ ಕಚ್ಚಿದ 5ರಿಂದ 8 ವರ್ಷದ ಬಳಿಕವೇ ರೋಗದ ಲಕ್ಷಣ ಗೊತ್ತಾಗುತ್ತದೆ. ಎಷ್ಟು ಶೀಘ್ರ ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು. ಒಮ್ಮೆ ರೋಗ ಬಂದರೆ ಅದು ಉಲ್ಬಣಿಸದಂತೆ ತಡೆಯಬಹುದೇ ಹೊರತು; ಗುಣಮುಖ ಸಾಧ್ಯವಿಲ್ಲ.

ದೇಹದ ಇಳಿಮುಖ ಭಾಗಗಳಿಗೆ ಮಾತ್ರ ಈ ರೋಗ ತಗಲುತ್ತದೆ. ಅಂದರೆ, ಕೈ, ಕಾಲು, ವೃಷಣ, ಸ್ತನದಂಥ ನೇತಾಡುವ ಭಾಗಗಳಿಗಷ್ಟೇ ಇದು ತಗಲುತ್ತದೆ.

ಸಂಜೆ 7.38ರಿಂದ ರಾತ್ರಿ 12ರವರೆಗಿನ ಅವಧಿಯಲ್ಲಿ ಮಾತ್ರ ರಕ್ತ ಪರೀಕ್ಷೆ ನಡೆಸಬೇಕು. ರೋಗಾಣುಗಳು ದೇಹದ ಒಂದೇ ಕಡೆ ಅಡಗಿರುತ್ತವೆ. ದೇಹ ದುಡಿದು ದನಿದಾಗ ಮಾತ್ರ ರಕ್ತದಲ್ಲಿ ಮೇಲ್ಪದರಿಗೆ ಬರುತ್ತವೆ. ಆಗ ಮಾತ್ರ ರೋಗಾಣು ಪತ್ತೆಯಾಗುತ್ತವೆ. ಜನ ಇದಕ್ಕೆ ಸಹಕಾರ ಕೊಡುತ್ತಿಲ್ಲ. ಹೀಗಾಗಿ, ಇದರ ಪತ್ತೆ ನಿಯಂತ್ರಣ ಸವಾಲಾಗಿದೆ ಎನ್ನುವುದು ಇಲಾಖೆಯ ಅಧಿಕಾರಿಗಳ ವಿವರಣೆ.

**

ಕಳೆದ ವರ್ಷ ಶೇ 55ರಷ್ಟು ಮಂದಿ ಮಾತ್ರ ಮಾತ್ರೆ ನುಂಗಿದ್ದರು. ಈ ಬಾರಿ ಹೆಚ್ಚು ನಿರೀಕ್ಷೆ ಇದೆ. ವೈದ್ಯರ ತಂಡದ ಸಮೀಕ್ಷೆ ಬಳಿಕ ಸಾಧನೆ ಗೊತ್ತಾಗಲಿದೆ
ಡಾ.ಬಸವರಾಜ ಗುಳಗಿ, ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

**
ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಂಡಿದೆ. ಸಿಬ್ಬಂದಿ ಮನೆಮನೆಗೂ ಭೇಟಿ ಕೊಡುತ್ತಾರೆ. ಆದರೆ, ಜನರಿಗೆ ಇದರ ಅರಿವು ಅಗತ್ಯ
ಚಂದ್ರಕಾಂತ ಎರಿ, ಕಿರಿಯ ಪ್ರಯೋಗಶಾಲಾ ತಂತ್ರಜ್ಞ

**

ಆನೆಕಾಲು ರೋಗದ ಲಕ್ಷಣಗಳು ಬೇಗ ಗೊತ್ತಾಗುವುದಿಲ್ಲ. ರೋಗ ಬಂದ ಮೇಲೆ ಜೀವನಪೂರ್ತಿ ನರಳುವ ಬದಲು 5 ವರ್ಷ ಮಾತ್ರೆ ನುಂಗಿದರೆ ಸಾಕು
ಚಾಮರಾಜ ದೊಡ್ಡಮನಿ, ಕೀಟಶಾಸ್ತ್ರಜ್ಞ

ನಗರದಲ್ಲಿ 1 ಲಕ್ಷ ಮಂದಿ ಬಾಕಿ

ಅಂಗನವಾಡಿ ಇರದ ಪ್ರದೇಶಗಳಲ್ಲಿ ಮಾತ್ರೆ ವಿತರಿಸುವುದು ಇನ್ನೂ ಬಾಕಿ ಇದೆ. ಕಲಬುರ್ಗಿ ನಗರದಲ್ಲೇ ಇಂಥ ಪ್ರದೇಶಗಳಲ್ಲಿ 1 ಲಕ್ಷಕ್ಕೂ ಹಚ್ಚು ಮಂದಿ ಇದ್ದಾರೆ. ಹೆಚ್ಚುವರಿ ದಿನ ಬಳಸಿಕೊಂಡು, ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಇವರಿಗೆಲ್ಲ ಮಾತ್ರೆ ನುಂಗಿಸಲು ಇಲಾಖೆ ಸಿದ್ಧತೆ ನಡೆಸಿದೆ. 

**

8 ಪ್ರದೇಶಗಳಲ್ಲಿ ತಪಾಸಣೆ

ರೋಗ ತಪಾಸಣೆಗಾಗಿ ಎಂಟು ಕಡೆ ಕೇಂದ್ರೆ ತೆರೆಯಲಾಗಿದೆ. ಇದರಲ್ಲಿ 4 ಕಾಯಂ ಹಾಗೂ 4 ತಾತ್ಕಾಲಿಕ ತಪಾಸಣೆಗಾಗಿ ಇವೆ.

ಕಲಬುರ್ಗಿ ನಗರದ ಬ್ರಹ್ಮಪುರ ಬಡಾವಣೆ, ತಾಲ್ಲೂಕಿನ ಫರಹತಾಬಾದ್‌, ಚಿಂಚೋಳಿ ತಾಲ್ಲೂಕಿನ ಹೆಬ್ಬಾಳ, ಚಿತ್ತಾಪುರ ತಾಲ್ಲೂಕಿನ ಐನಾಪುರದಲ್ಲಿ ಕಾಯಂ ಕೇಂದ್ರಗಳಿವೆ. ಚಿಂಚೋಳಿ ತಾಲ್ಲೂಕಿನ ವಸ್ತಾರೆ, ಅಫಜಲಪುರದ ಮನ್ನೂರು, ಚಿತ್ತಾಪುರದ ವಾಡಿ, ಸೇಡಂನ ಕೋಲಕುಂದಗಳಲ್ಲಿ ತಾತ್ಕಾಲಿಕ ಪರೀಕ್ಷಾ ಕೇಂದ್ರಗಳಿವೆ.

ಮಾತ್ರೆ ನುಂಗಿಸುವ ಕಾರ್ಯಕ್ರಮ ಅ.6ಕ್ಕೆ ಮುಗಿದಿದೆ. ಆದರೂ ಇನ್ನೂ ಒಂದು ವಾರ ಆಯಾ ಗ್ರಾಮಗಳಲ್ಲೇ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬಳಿ ಔಷಧಿ ಸಿಗಲಿದೆ. ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ವರ್ಷಪೂರ್ತಿ ಮಾತ್ರೆಗಳನ್ನು ನೀಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !