ಶಾಲೆಯಿಂದ ಹೊರಗುಳಿದ ಮಕ್ಕಳು; ಕಲಬುರ್ಗಿ ಮತ್ತೆ ದಾಖಲೆ!

7

ಶಾಲೆಯಿಂದ ಹೊರಗುಳಿದ ಮಕ್ಕಳು; ಕಲಬುರ್ಗಿ ಮತ್ತೆ ದಾಖಲೆ!

Published:
Updated:

ಕಲಬುರ್ಗಿ: ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಕೊಡುವ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಲ್ಲಿದೆ. ಆದರೂ, ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಕಲಬುರ್ಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಒಟ್ಟು 984 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿಯಂತೆ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆಯಲ್ಲಿ ಕಲಬುರ್ಗಿ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ!

1ರಿಂದ 8ನೇ ತರಗತಿ ವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರಕಿಸಿಕೊಡುವುದು ಶಿಕ್ಷಣ ಹಕ್ಕು ಕಾಯ್ದೆಯ ಆಶಯ. ಹೀಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಈ ತರಗತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ಪ್ರತಿ ವರ್ಷ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಮೊದಲು ಒಂದು ತಿಂಗಳ ಕಾಲ ನಿರಂತರವಾಗಿ ಬಾಲಕ/ಬಾಲಕಿ ಶಾಲೆಗೆ ಗೈರಾದರೆ ಆ ಬಾಲಕ/ಬಾಲಕಿಯನ್ನು ಶಾಲೆಯಿಂದ ಹೊರಗುಳಿದವರ ಲೆಕ್ಕಕ್ಕೆ ಪರಿಗಣಿಸಲಾಗುತ್ತಿತ್ತು. ಈ ಕಾಯ್ದೆ ಜಾರಿಯಾದ ನಂತರ ನಿರಂತರವಾಗಿ ಏಳು ದಿನ ಶಾಲೆಗೆ ಹೈರು ಹಾಜರಾದರೆ ಅವರನ್ನು ಶಾಲೆಯಿಂದ ಹೊರಗುಳಿದ ಮಕ್ಕಳು ಎಂದು ಪರಿಗಣಿಸಲಾಗುತ್ತಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಮೂರು, ಆರು ಮತ್ತು 12 ತಿಂಗಳ ಅವಧಿಯ ವಸತಿಯುತ ವಿಶೇಷ ತರಬೇತಿ ಹಾಗೂ ಚಿಣ್ಣರ ತಂಗುಧಾಮ, ಶಾಲಾ ಆಧಾರಿತ ವಿಶೇಷ ತರಬೇತಿ ನೀಡುವ ಯೋಜನೆ ರೂಪಿಸಿದೆ. ಬಾಲಕಿಯರಿಗಾಗಿ ಕಸ್ತೂರಬಾ ಬಾಲಿಕಾ ವಿದ್ಯಾಲಯಗಳೂ ಕಾರ್ಯನಿರ್ವಹಿಸುತ್ತಿವೆ.

‘ಪಾಲಕರಲ್ಲಿ ಶಿಕ್ಷಣದ ಬಗ್ಗೆ ಅರಿವು ಇಲ್ಲದಿರುವುದು, ಕೃಷಿ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸುವುದು ಹಾಗೂ ಆರೋಗ್ಯದಂತಹ ಸಮಸ್ಯೆಗಳ ಕಾರಣ ಮಕ್ಕಳು ಶಾಲೆಯಿಂದ ವಿಮುಖರಾಗುತ್ತಿದ್ದಾರೆ’ ಎನ್ನುವುದು ಇಲಾಖೆ ನೀಡುವ ಕಾರಣ.

‘ನಿರಂತರವಾಗಿ ಏಳು ದಿನ ಮಕ್ಕಳು ಶಾಲೆಗೆ ಗೈರಾದರೆ ಆ ಶಾಲೆಯ ಮುಖ್ಯಶಿಕ್ಷಕರು/ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುತ್ಸುವಾರಿ ಸಮಿತಿ (ಎಸ್‌ಡಿಎಂಸಿ)ಯವರು ಆ ಮಗುವಿನ ಮನೆಗೆ ಹೋಗಿ ಪಾಲಕರ ಮನವೊಲಿಸಿ ಶಾಲೆಗೆ ಕರೆತರುತ್ತಾರೆ. ಇದರ ಜೊತೆಗೆ ಶಾಲಾ ಆಧಾರಿತ ವಿಶೇಷ ತರಬೇತಿ ಹಾಗೂ ಕಸ್ತೂರಬಾ ಬಾಲಿಕಾ ವಿದ್ಯಾಲಯದ ಮೂಲಕ ಈ ವರ್ಷ 174 ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲಾಗಿದೆ’ ಎನ್ನುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಅವರ ವಿವರಣೆ.
***
ಅಂಕಿ–ಅಂಶ
3366 ಮಕ್ಕಳು
3 ವರ್ಷಗಳಲ್ಲಿ ಶಾಲೆಯಿಂದ ಹೊರಗುಳಿದವರು

1632 ಮಕ್ಕಳು
3 ವರ್ಷಗಳಲ್ಲಿ ಮುಖ್ಯವಾಹಿನಿಗೆ ಬಂದವರು

ವರ್ಷ–– ಶಾಲೆಯಿಂದ ಹೊರಗುಳಿದವರು– ಮುಖ್ಯವಾಹಿನಿಗೆ ಬಂದವರು
2016––– 993–– 590
2017–– 1389–– 868
2018–– 984 ––174

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !