ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ಗೊಂದಲದ ಗೂಡಾದ ಜನಸ್ಪಂದನ ಸಭೆ

ವಿದ್ಯುತ್ ತಂತಿ ದುರಸ್ತಿಗೆ ಎಷ್ಟು ವರ್ಷ ಬೇಕು?: ಗ್ರಾಮಸ್ಥರ ಆಕ್ರೋಶ
Last Updated 19 ಜನವರಿ 2020, 10:59 IST
ಅಕ್ಷರ ಗಾತ್ರ

ವಾಡಿ: ಗ್ರಾಮದ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ಕಡಿದು ಬೀಳುತ್ತಿವೆ. ದುರಸ್ತಿ ಕಾಣದ ಕಂಬಗಳು, ಬೇಲಿಗಳಿಲ್ಲದ ಟಿಸಿಗಳು ಜನರ ಜೀವಕ್ಕೆ ಸಂಚಕಾರ ತರುತ್ತಿವೆ. ರಿಪೇರಿ ಮಾಡಿ ಎಂದು 6 ವರ್ಷಗಳಿಂದ ಜೆಸ್ಕಾಂ ಇಲಾಖೆಗೆ ಹೇಳುತ್ತಿದ್ದೇವೆ. ಜನರು ಜೀವ ಕಳೆದುಕೊಂಡರೂ ಇಲಾಖೆಗೆ ಬುದ್ಧಿ ಬಂದಿಲ್ಲ, ಜನರ ಜೀವಕ್ಕೇನೂ ಬೆಲೆ ಇಲ್ಲವೇ? ಎಂದು ಜೆಸ್ಕಾಂ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜನಸ್ಪಂದನ ಸಭೆಯಲ್ಲಿ ಜರುಗಿತು.

ರಾವೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಜನಸ್ಪಂದನ ಸಭೆಯು ಗದ್ದಲ, ಗೊಂದಲದ ಗೂಡಾಗಿ ಯಾವುದೇ ಸಮಸ್ಯೆ ಇತ್ಯರ್ಥ ಕಾಣದೆ ಅರ್ಜಿ ಸ್ವೀಕಾರಕ್ಕೆ ಮಾತ್ರ ಸೀಮಿತ ಆಯಿತು.

ಅರ್ಜಿ ಸ್ವೀಕಾರ ಪ್ರಕ್ರಿಯೆಯೂ ವ್ಯವಸ್ಥಿತವಾಗಿ ನಡೆಯಲಿಲ್ಲ. ಒಂದು ಗಂಟೆ ತಡವಾಗಿ ಆರಂಭವಾದ ಸಭೆಯಲ್ಲಿ ಒಂದೂ ಸಮಸ್ಯೆ ಪರಿಹಾರ ಕಾಣಲಿಲ್ಲ. 31 ಇಲಾಖೆಗಳ ಪೈಕಿ ಅಬಕಾರಿ, ತೋಟಗಾರಿಕೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೇರಿದಂತೆ ಸುಮಾರು 10ಕ್ಕೂ ಅಧಿಕ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ತತ್ಪರಿಣಾಮ ಆ ಇಲಾಖೆಗಳ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು ಎಂಬ ಗೊಂದಲದಲ್ಲಿ ಜನರು ಇದ್ದರು.

ಸಭೆ ಆರಂಭವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಜೆಸ್ಕಾಂ ಶಾಖಾಧಿಕಾರಿ ಅಂಬರೀಶ್‌ ಹೂಗಾರ ವಿರುದ್ದ ಹರಿಹಾಯ್ದ ಗ್ರಾಮಸ್ಥರು, ಕೂಡಲೇ ಗ್ರಾಮದ ಹಳೆಯ ತಂತಿ, ಕಂಬಗಳನ್ನು ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸಿ ಹೊಸದಾಗಿ ಅಳವಡಿಸಬೇಕು ಎಂದು ಪಟ್ಟು ಹಿಡಿದರು.

ಸರ್ವೆ ನಡೆಸಿ ಮೇಲಧಿಕಾರಿಗಳಿಗೆ ವರದಿ ನೀಡಿದ ಬಳಿಕ ದುರಸ್ತಿ ಕಾರ್ಯ ಹಾಗೂ ಹೊಸ ಉಪಕರಣಗಳ‌ನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಾವೂರು ಗ್ರಾಮಕ್ಕೆ ಬಸ್ ನಿಲ್ದಾಣ ಇಲ್ಲ, ಜನಸಂಖ್ಯೆಗೆ ಅನುಗುಣವಾಗಿ ಗ್ರಾಮಕ್ಕೆ ಇನ್ನೆರಡು ಅಂಗನವಾಡಿ ಪ್ರಾರಂಭಿಸಬೇಕು ಎಂದು ಸಾರ್ವಜನಿಕರು ಅರ್ಜಿ ಸಲ್ಲಿಸಿದರು.

61 ಅರ್ಜಿಗಳು

ಕಂದಾಯ ಇಲಾಖೆಗೆ ಸಂಬಂಧಿಸಿದ ಒಟ್ಟು 61 ಅರ್ಜಿಗಳು ಹಾಗೂ 10 ಶಾದಿ ಭಾಗ್ಯ ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ ಬಹುತೇಕ ವಿವಿಧ ಮಾಶಾಸನ ಅರ್ಜಿಗಳೇ ಇದ್ದವು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಅರ್ಜಿ ಸ್ವೀಕರಿಸಲಾಯಿತೇ ಹೊರತು ಪರಿಹಾರ ನೀಡಲು ಸಾಧ್ಯವಾಗಲಿಲ್ಲ. ಇದು ಸಾರ್ವಜನಿಕರು ಬೇಸರಕ್ಕೆ ಕಾರಣವಾಯಿತು.

ಜಿ.ಪಂ ಸದಸ್ಯ ಅಶೋಕ ಸಗರ, ಗ್ರಾ.ಪಂ ಅಧ್ಯಕ್ಷ ವೆಂಕಟೇಶ ಕಟ್ಟಿಮನಿ, ಪಿಡಿಒ ಕಾವೇರಿ ರಾಠೋಡ, ಮುಖಂಡರಾದ ಅಜೀಜ್ ಸೇಠ, ಸೂರ್ಯಕಾಂತ ಕಟ್ಟಿಮನಿ, ಯುನೂಸ್ ಪ್ಯಾರೆ, ಮಹ್ಮದ್ ಹುಸೇನ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT