ಬುಧವಾರ, ಜೂಲೈ 8, 2020
28 °C
ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವರದಿಗೆ ಸ್ಪಂದಿಸಿದ ಬೆಂಗಳೂರಿನ ಷಣ್ಮುಗಂ

ಕಲಬುರ್ಗಿ: ಕಾರ್ಮಿಕನಿಗೆ ₹ 10 ಸಾವಿರ ನೆರವು ನೀಡಿದ ದಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಲಾಕ್‌ಡೌನ್‌ನಿಂದಾಗಿ ಮುಂಬೈನಲ್ಲಿ ಕೆಲಸವೂ ಇಲ್ಲದೇ, ಕೈಯಲ್ಲಿ ಹಣವೂ ಇಲ್ಲದೇ ಪತ್ನಿ ಹಾಗೂ ಮೂವರು ಮಕ್ಕಳನ್ನು ಕರೆದುಕೊಂಡು ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಗೋಗಿ ತಾಂಡಾಕ್ಕೆ ವಾಪಸ್‌ ಬಂದಿದ್ದ ಕಾರ್ಮಿಕ ರಾಮು ಜಾಧವ ಕುಟುಂಬಕ್ಕೆ ಬೆಂಗಳೂರಿನ ‘ಪ್ರಜಾವಾಣಿ’ ಓದುಗ ಷಣ್ಮುಗುಂ ಗುಂಡಾ ಅವರು ₹ 10 ಸಾವಿರ ಆರ್ಥಿಕ ನೆರವು ನೀಡಿದ್ದಾರೆ.

ಮಾರ್ಚ್‌ 20ರಂದು ‘ಸಾಲ ತೀರಿಸಲು ಹೋಗಿದ್ದೆ, ಸಾಲ ಮಾಡಿ ಬಂದೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇದನ್ನು ಗಮನಿಸಿದ ಷಣ್ಮುಗಂ ಅವರು ಪತ್ರಿಕೆಯ ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿ ರಾಮು ಜಾಧವ ಕುಟುಂಬಕ್ಕೆ ಸಹಾಯ ಮಾಡುತ್ತೇನೆ, ಅವರ ವಿವರ ನೀಡಿ ಎಂದು ಕೋರಿದ್ದರು. ಕಲಬುರ್ಗಿ ಜಿಲ್ಲೆಯ ಕಮಲಾಪುರ ವರದಿಗಾರ ಆ ಕಾರ್ಮಿಕನ ಮನೆಗೆ ತೆರಳಿ ಕುಟುಂಬದ ಆಧಾರ್ ಕಾರ್ಡ್‌ ಹಾಗೂ ಬ್ಯಾಂಕ್‌ ವಿವರವನ್ನು ಸಂಗ್ರಹಿಸಿ ಷಣ್ಮುಗಂ ಅವರಿಗೆ ತಲುಪಿಸಿದ್ದರು.

ಷಣ್ಮುಗಂ ಅವರು ರಾಮು ಜಾಧವ ಅವರ ಪತ್ನಿ ತಾರಿಬಾಯಿ ಅವರ ಕೆನರಾ ಬ್ಯಾಂಕ್‌ ಖಾತೆಗೆ ₹ 10 ಸಾವಿರ ಹಣವನ್ನು ವರ್ಗಾಯಿಸಿದ್ದಾರೆ. 

ಈ ಕುರಿತು ಸಂತಸ ಹಂಚಿಕೊಂಡು ರಾಮು ಜಾಧವ ಹಾಗೂ ತಾರಿಬಾಯಿ, ‘ದುಡಿದು ಮಕ್ಕಳನ್ನು ಸಾಕಬೇಕು. ಒಳ್ಳೆಯ ಜೀವನ ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಮುಂಬೈನ ಬೋರಿವಿಲಿಗೆ ಹೋಗಿದ್ದೆವು. ಆದರೆ, ಕೊರೊನಾ ಲಾಕ್‌ಡೌನ್‌ ನಮ್ಮ ಆಸೆಯನ್ನು ನುಚ್ಚು ನೂರು ಮಾಡಿತು. ಇಲ್ಲಿಂದ ಒಯ್ದಿದ್ದ ₹ 20 ಸಾವಿರ ಹಾಗೂ ದವಸ ಧಾನ್ಯ ಖಾಲಿಯಾಯಿತು. ವಾಪಸ್‌ ಬರುವಾಗ ₹ 5 ಸಾವಿರ ಸಾಲ ಮಾಡಬೇಕಾಯಿತು. ಇದೀಗ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿ ಷಣ್ಮುಗಂ ಹಣವನ್ನು ನೀಡಿದ್ದಾರೆ. ಇದರಿಂದ ನಮ್ಮ ಕುಟುಂಬಕ್ಕೆ ಆಸರೆಯಾಗಲಿದೆ’ ಎಂದರು.

ಈ ವರದಿಯನ್ನು ಹಲವು ಓದುಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು