ಮಂಗಳವಾರ, ಡಿಸೆಂಬರ್ 1, 2020
26 °C
ಹಂಗರಗಾ (ಬಿ) ಗ್ರಾಮದ ರೈತ ಮಲ್ಲಿಕಾರ್ಜುನ ಶಾಂತಪ್ಪ ಹುಲಸೂರ ಸಾಹಸಕ್ಕೆ ಜನರು ಫಿದಾ

ಯಡ್ರಾಮಿ: 11 ತಾಸಿನಲ್ಲಿ 22 ಎಕರೆ ಉಳುಮೆ ಮಾಡಿದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಡ್ರಾಮಿ: ಇಲ್ಲೊಬ್ಬ ಯುವ ರೈತ 11 ತಾಸು ನಿರಂತರವಾಗಿ 22 ಎಕರೆ ಭೂಮಿ ಉಳುಮೆ ಮಾಡಿದ್ದಾರೆ! ತನ್ನ ಪ್ರೀತಿಯ ಎತ್ತುಗಳ ಕೊಳ್ಳಗಟ್ಟಿ ಉಳುಮೆ ಆರಂಭಿಸಿದ ಈ ಭೂ‍ಪ ವಿಶ್ರಾಂತಿ ಪಡೆಯದೇ, ಎತ್ತುಗಳ ಹುರುದುಂಬಿಸಿ ಗ್ರಾಮಸ್ಥರಿಂದ ಶಹಬ್ಬಾಷ್‌ಗಿರಿ ಪಡೆದಿದ್ದಾನೆ.

ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದ ಯುವ ರೈತ ಮಲ್ಲಿಕಾರ್ಜುನ ಶಾಂತಪ್ಪ ಹುಲಸೂರ ಈ ಸಾಹಸ ಮೆರೆದು ಸುತ್ತಲಿನ ಗ್ರಾಮಸ್ಥರಿಂದ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಶುಕ್ರವಾರ ನಸುಕಿನ 5ಕ್ಕೆ ಎತ್ತುಗಳನ್ನು ಹೆಗಲುಗಟ್ಟಿದ ಈ ರೈತ ಸಂಜೆ 4ರವರೆಗೂ ಉಳುಮೆ ಮಾಡಿ 22 ಎಕರೆಯನ್ನು ಪೂರ್ಣಗೊಳಿಸಿದ್ದಾರೆ. ರೈತನಿಗೆ ಸಾಥ್‌ ನೀಡಿದ ಎತ್ತುಗಳ ಸಾಮರ್ಥ್ಯದ ಬಗ್ಗೆಯೂ ಗ್ರಾಮಸ್ಥರು ಮನಸೋ ಇಚ್ಚೆ ಕೊಂಡಾಡಿದ್ದಾರೆ.

ಒಬ್ಬ ರೈತ ಹಾಗೂ ಒಂದು ಜೋಡಿ ಎತ್ತು ಹೆಚ್ಚೆಂದರೆ ಒಂದು ದಿನದಲ್ಲಿ ಎಂಟು ಎಕರೆ ಊಳಬಹುದು. ಈ ಹಿಂದೆ ಮಳ್ಳಿ ಗ್ರಾಮದ ರೈತ ಸಿದ್ಧಪ್ಪ ಮಲ್ಲಪ್ಪ ಎನ್ನುವವರು 11 ಗಂಟೆಯಲ್ಲಿ 18 ಎಕರೆ ಹತ್ತಿ ಹೊಲ ಉಳುಮೆ ಮಾಡಿ ದಾಖಲೆ ನಿರ್ಮಿಸಿದ್ದರು. ಇದಕ್ಕೆ ಷರತ್ತು ಕಟ್ಟಿದ ಮಲ್ಲಿಕಾರ್ಜುನ ಈಗ ಅಷ್ಟೇ ಸಮಯದಲ್ಲಿ 22 ಎಕರೆ ಉಳುಮೆ ಮಾಡಿ ತಾಲ್ಲೂಕಿನಲ್ಲಿ ದಾಖಳೆ ಮೆರೆದಿದ್ದಾರೆ.

ಮಲ್ಲಿಕಾರ್ಜುನ ಉಳುಮೆ ಮಾಡುವ ವೇಗ, ರೀತಿ ಹಾಗೂ ಎತ್ತುಗಳನ್ನು ಹುರುದುಂಬಿಸುವ ಶೈಲಿಗೆ ಗ್ರಾಮಸ್ಥರು ‘ಫಿದಾ’ ಆಗಿದ್ದಾರೆ. ಹೊಲದ ಮಾಲೀಕ ಗುಂಡುರಾವ್ ಶ್ಯಾಮರಾವ್ ಕುಲಕರ್ಣಿ ಅವರೂ ಸೇರಿದಂತೆ ಗ್ರಾಮಸ್ಥರ ದಂಡೇ ಇದಕ್ಕೆ ಸಾಕ್ಷಿ ಆಯಿತು.

ಗ್ರಾಮಸ್ಥರಾದ ಗೊಲ್ಲಾಳಪ್ಪಗೌಡ ಹೊಸಮನಿ, ಗುರಣ್ಣಗೌಡ ಮಾಲಿ ಪಾಟೀಲ, ನೀಲಕಂಠರಾಯ ಗೌಡ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ತಿಪ್ಪಣ್ಣ ದೊಡಮನಿ, ಕಲ್ಲಪ್ಪ ಹುಲಸೂರ, ದೌಲತರಾಯಗೌಡ ಮಳ್ಳಿ, ದೇವರಾಜ ಮಳ್ಳಿ, ಶಾಂತಪ್ಪ ಹುಲಸೂರ ಮುಂತಾದವರು ರೈತನನ್ನು ಅಭಿನಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು