ಮಂಗಳವಾರ, ಮೇ 17, 2022
29 °C
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರು ಬಳಸಿ ಕೃತ್ಯ; ಜನಶಕ್ತಿ ಚಾನೆಲ್‌ನ ವರದಿಗಾರನ ಬಂಧನ

ಕಲಬುರ್ಗಿ: ಪಿಎಸ್‌ಐನಿಂದ ₹ 8.5 ಲಕ್ಷ ಪಡೆದು ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೆಸರಲ್ಲಿ, ಪಿಎಸ್‌ಐ ಒಬ್ಬರಿಂದ ₹ 8.5 ಲಕ್ಷ ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ಪತ್ರಕರ್ತರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಜನಶಕ್ತಿ ಚಾನೆಲ್‌ನ ಕಲಬುರ್ಗಿ ಜಿಲ್ಲಾ ವರದಿಗಾರ, ಜೇವರ್ಗಿ ತಾಲ್ಲೂಕಿನ ಕೊಂಡಗೂಳಿಯ ಖಾಸೀಂ ಬಾಬು ಪಟೇಲ್‌ ಬಂಧಿತ. ಹಣ ಕಳೆದುಕೊಂಡ ಜಿಲ್ಲಾ ಅಪರಾಧ ತನಿಖಾ ವಿಭಾಗದ ಪಿಎಸ್‌ಐ ಮಂಜುನಾಥ ಹೂಗಾರ ದೂರು ನೀಡಿದ್ದಾರೆ’ ಎಂದು ಪೊಲೀಸ್‌ ಕಮಿಷನರ್‌ ಎನ್‌.ಸತೀಶಕುಮಾರ್‌ ತಿಳಿಸಿದ್ದಾರೆ.

ಪ್ರಕರಣ ನಡೆದಿದ್ದು ಹೇಗೆ?: ಖಾಸೀಂ ತನ್ನ ಮೊಬೈಲ್‌ ಸಂಖ್ಯೆ (7411447060)ಯ ವಾಟ್ಸ್‌ಆ್ಯಪ್‌ನಲ್ಲಿ ಡಾ.ಎಸ್‌.ಎಂ.ಜಿ (ಡಾ.ಸಿಮಿ ಮರಿಯಂ ಜಾರ್ಜ್‌) ಎಂದು ಬರೆದುಕೊಂಡಿದ್ದು, ಅದರ ಡಿ.ಪಿ.ಗೆ ಎಸ್ಪಿ ಡಾ.ಸಿಮಿ ಮರಿಯಂ ಜಾರ್ಜ್‌ ಅವರ ಚಿತ್ರ ಹಾಕಿದ್ದ.  ಜೇವರ್ಗಿ ಠಾಣಾಧಿಕಾರಿಯಾಗಿದ್ದ ಪಿಎಸ್‌ಐ ಮಂಜುನಾಥ ಹೂಗಾರ ಅವರಿಗೆ ನವೆಂಬರ್‌ 19ರಂದು ಕರೆ ಮಾಡಿ, ‘ಇದು ಎಸ್ಪಿ ಅವರ ಖಾಸಗಿ ಮೊಬೈಲ್‌ ಸಂಖ್ಯೆ. ಮೇಡಂ ಅವರಿಗೆ ತುರ್ತಾಗಿ ಯಾವುದೋ ಕೆಲಸಕ್ಕೆ ಹಣ ಬೇಕಾಗಿದೆ. ಕೊಡಿ’ ಎಂದು ಕೇಳಿದ್ದ. ಇದನ್ನೇ ನಂಬಿದ ಪಿಎಸ್‌ಐ ಮಂಜುನಾಥ ಮೊದಲು ₹ 2.5 ಲಕ್ಷ ನಂತರ ₹ 6 ಲಕ್ಷ ಹಣವನ್ನು ಸ್ನೇಹಿತರೊಬ್ಬರ ಕೈಯಲ್ಲಿ ಕೊಟ್ಟು ಕಳುಹಿಸಿದ್ದರು.

2021ರ ಫೆ. 3ರಂದು ಪಿಎಸ್‌ಐ ಮಂಜುನಾಥ ಅವರು ಖಾಸೀಂಗೆ ವಾಟ್ಸ್‌ಆ್ಯಪ್‌ ಮೂಲಕ ಕರೆ ಮಾಡಿದರು. ಆ ಕಡೆಯಿಂದ ಆರೋಪಿ ಮಾತನಾಡುತ್ತಿದ್ದ ವೇಳೆಯೇ ಹೆಣ್ಣುಮಗಳೊಬ್ಬಳು ಉರ್ದುದಲ್ಲಿ ಮಾತನಾಡಿದ ಧ್ವನಿ ಕೇಳಿಸಿದೆ. ಅನುಮಾನ ಬಂದ ಮಂಜುನಾಥ‌ ಅವರು ಎಸ್ಪಿ ಅವರ ಬಳಿ ನೇರವಾಗಿ ಮಾತನಾಡಿದ್ದಾರೆ. ಆಗ ಮೋಸ ಹೋಗಿದ್ದು ಗೊತ್ತಾಗಿದೆ.

‘ಖಾಸೀಂ ಎಂಬ ವ್ಯಕ್ತಿಯು ಹಿರಿಯ ರಾಜಕಾರಣಿಗಳು ಹಾಗೂ ಪೊಲೀಸ್‌ ಅಧಿಕಾರಿಗಳ ಜತೆಗೆ ಫೋಟೊ ತೆಗೆಸಿಕೊಂಡು ಎಲ್ಲರ ಪರಿಚಯ ಇರುವುದಾಗಿ ನಂಬಿಸಿದ್ದ. ನಾನು ಜೇವರ್ಗಿಯಲ್ಲಿ ಕೆಲಸ ಮಾಡುವಾಗ ಈತ ಪರಿಚಯವಾಗಿದ್ದ. ನಂಬಿ ದುಡ್ಡು ಕೊಟ್ಟಿದ್ದು, ನನಗೆ ವಂಚಿಸಿದ್ದಾನೆ’ ಎಂದು ಪಿಎಸ್‌ಐ ದೂರಿನಲ್ಲಿ ತಿಳಿಸಿದ್ದಾರೆ.

‘ಜೇವರ್ಗಿ ತಾಲ್ಲೂಕಿನ ಚಿಗರಹಳ್ಳಿ ಕ್ರಾಸ್‌ ಹತ್ತಿರ ಆರೋಪಿಯನ್ನು ಶುಕ್ರವಾರ ಬಂಧಿಸಿ, ₹ 2 ಲಕ್ಷ ನಗದು, ಮೂರು ಮೊಬೈಲ್‌ ಹಾಗೂ ಒಂದು ಫಾರ್ಚ್ಯುನರ್‌ ಕಾರು‌ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ಮಾಹಿತಿ
ನೀಡಿದ್ದಾರೆ.

ಈ ಹಿಂದೆ ಜೇವರ್ಗಿ ಠಾಣೆಯಲ್ಲಿದ್ದ ಪಿಎಸ್ಐ ಮಂಜುನಾಥ ಅವರು, ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ಕುಟುಂಬವೊಂದನ್ನು ಬಂಧಿಸಿದ್ದರು. ಅನಾರೋಗ್ಯದಿಂದ 6 ವರ್ಷದ ಬಾಲಕಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ದೊಡ್ಡ ಪ್ರತಿಭಟನೆಗೆ ಕಾರಣವಾಗಿತ್ತು. ಮಂಜುನಾಥ ಅಮಾನತು ಕೂಡ ಆಗಿದ್ದರು. ನಂತರ ಅವರನ್ನು ಜಿಲ್ಲಾ ಅಪರಾಧ ತನಿಖಾ ವಿಭಾಗಕ್ಕೆ ವರ್ಗ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು