ಶುಕ್ರವಾರ, ಆಗಸ್ಟ್ 12, 2022
20 °C

ಕಲಬುರ್ಗಿ: ಕುರಿಮರಿ ರಕ್ಷಣೆಯ‌ ನಕಲಿ ಕಾರ್ಯಾಚರಣೆ ನಡೆಸಿದ ನೆಲೋಗಿ ಪಿಎಸ್ಐ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯ ‌ಜೇವರ್ಗಿ ತಾಲ್ಲೂಕಿನ ನೆಲೋಗಿ ಠಾಣೆಯ ಪಿಎಸ್ಐ ಮಲ್ಲಣ್ಣ ‌ಯಲಗೋಡ ಅವರು ಬೇರೆ ಕಡೆಯಿಂದ ‌ಕುರಿ‌ ಮರಿಗಳನ್ನು ತರಿಸಿ ಅವುಗಳನ್ನು ಎತ್ತಿಹಿಡಿದು, ‌ಭೀಮಾ ಪ್ರವಾಹದಲ್ಲಿ ಸಿಲುಕಿದ್ದ ಅವುಗಳನ್ನು ತಾವೇ ರಕ್ಷಿಸಿರುವುದಾಗಿ ಗ್ರಾಮಸ್ಥರಿಂದ ಹೇಳಿಸಿದ ವಿಡಿಯೊಗಳು ಇದೀಗ ವೈರಲ್ ಆಗಿದ್ದು, ಜಿಲ್ಲಾ ಪೊಲೀಸ್ ಇಲಾಖೆಗೆ ಮುಜುಗರವಾಗಿದೆ.

ವಿಡಿಯೋದಲ್ಲೇನಿದೆ?: ಸೊಂಟಮಟ್ಟದ ನೀರಿನಲ್ಲಿ ನಾಲ್ವರು ಯುವಕರ ಸಹಾಯದಿಂದ ಥರ್ಮಾಕೋಲ್‌ ಮೇಲೆ ನಿಂತಿರುವ ಪಿಎಸ್‌ಐ ಮೈಗೆ ನೀರು ತಗುಲದಂತೆ ಪೋಸ್‌ ಕೊಟ್ಟಿದ್ದಾರೆ. ಬಳಿಕ ಪ್ರವಾಹದಲ್ಲಿ ಮುಳುಗಿದ ಮನೆಯತ್ತ ತೆರಳುವ ಈ ಅಧಿಕಾರಿ, ಮಾರ್ಗ ಮಧ್ಯೆ ಒಂದು ಕುರಿಮರಿ ಇದ್ರೆ ತರಿಸಿಕೊಡಿ. ಅದನ್ನೇ ರಕ್ಷಣೆ ಮಾಡಿದಂತೆ ಮಾಡೋಣ. ಬಳಿಕ ಟಿ.ವಿ, ಪತ್ರಿಕೆ, ಸಾಮಾಜಿಕ ಜಾಲತಾಣದಲ್ಲಿ ಬಿಡೋಣ ಎಂದು ಜನರಿಗೆ ತಿಳಿಸಿದ್ದಾರೆ.

ಇದಕ್ಕೆ ಗ್ರಾಮಸ್ಥರು ಸಾಥ್ ಕೊಟ್ಟಿದ್ದು, ಬೇರೆಡೆಯಿಂದ ಎರಡು ಕುರಿಮರಿ ತಂದು ಪಿಎಸ್ಐ ಅವರೇ ನೀರಿನಲ್ಲಿ ಮುಳುಗಿ ರಕ್ಷಣೆ ಮಾಡಿದ್ದಾರೆ ಎಂಬಂತೆ ಬಿಂಬಿಸಿ ವಿಡಿಯೊ ಮಾಡಿದ್ದಾರೆ.

ಇತ್ತೀಚೆಗೆ ಜೇವರ್ಗಿ ‌ಪಿಎಸ್ಐ ಒಬ್ಬರು ನೆರೆಯಲ್ಲಿ ‌ಸಿಲುಕಿಕೊಂಡಿದ್ದ ಮಗುವನ್ನು ಹೊತ್ತುಕೊಂಡು ಬಂದು ದಡಕ್ಕೆ ತಲುಪಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರವೂ ಆಗಿತ್ತು. ಇದನ್ನು ಗಮನಿಸಿದ ಪಿಎಸ್ಐ ಯಲಗೋಡ ಹೀಗೆ ಕಾರ್ಯಾಚರಣೆ ‌ಮಾಡಿದರೆ ತಮಗೂ ಪ್ರಚಾರ ಸಿಗಬಹುದು ‌ಎಂಬ ಆಸೆಯಿಂದ ‌ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಕೊರೊನಾ ಸಂದರ್ಭದಲ್ಲಿಯೂ ಹಿಂಬಾಲಕರಿಂದ ಹಾಲಿನಲ್ಲಿ ಅಭಿಷೇಕ ಮಾಡಿಸಿಕೊಂಡು ಜನ್ಮದಿನ ಆಚರಿಸಿಕೊಂಡು ಇಲಾಖೆಯ ಕಂಗಣ್ಣಿಗೆ ಇವರು ಗುರಿಯಾಗಿದ್ದರು.

ಅಂದಿನ ಎಸ್ಪಿ ಯಡಾ ಮಾರ್ಟಿನ್ ‌ಮಾರ್ಬನ್ಯಾಂಗ್ ಅವರು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರಲ್ಲದೇ, ನೆಲೋಗಿಯಿಂದ ಎಸ್ಪಿ ಕಚೇರಿಗೆ ವರ್ಗಾಯಿಸಿದ್ದರು.

ಮೂಲತಃ ‌ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನವರಾದ ಯಲಗೋಡ ಅವರು ಈ ಹುದ್ದೆಗೆ ಬರುವುದಕ್ಕೂ‌ ಮುನ್ನ ಭಾರತೀಯ ‌ಸೇನೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು