ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಿಗೆ ಸಶಕ್ತ ಅವಕಾಶಗಳು ಅಗತ್ಯ: ಪ್ರೊ.ದಯಾನಂದ ಅಗಸರ

Last Updated 14 ಫೆಬ್ರುವರಿ 2021, 3:37 IST
ಅಕ್ಷರ ಗಾತ್ರ

ಕಲಬುರ್ಗಿ: ‘ಅತ್ಯಂತ ಹೆಚ್ಚು ಯುವಶಕ್ತಿ ಹೊಂದಿದ್ದರೂ ಭಾರತವೇಕೆ ಇನ್ನೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂಬುದು ಇಡೀ ದೇಶವನ್ನು ಕಾಡುತ್ತಿರುವ ಪ್ರಶ್ನೆ. ಯುವಜನರಿಗೆ ಸಶಕ್ತವಾದ ಅವಕಾಶಗಳನ್ನು ನೀಡದಿರುವುದೇ ಇದಕ್ಕೆ ಕಾರಣ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಬೇಸರ ವ್ಯಕ್ತಪಡಿಸಿದರು.

ಸಂವಾದ ಯುವ ಸಂಪನ್ಮೂಲ ಕೇಂದ್ರದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಯುವಜನ ಹಕ್ಕಿನ ಮೇಳ’ವನ್ನು ಸಂವಿಧಾನದ ಪೂರ್ವಪೀಠಿಕೆಯ ಪ್ರತಿ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.‌

‘ಕಲಿಕೆಯಲ್ಲಿ ಸಾಕಷ್ಟು ಮುಂದುವರಿದಿದ್ದೇವೆ. ಆದರೆ, ಕಲಿಕೆ ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಯುವ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳನ್ನು ಗಟ್ಟಿಯಾಗಿ ಪ್ರತಿಪಾದಿಸದ ಪರಿಣಾಮವೇ ಇಂದು ನಿರುದ್ಯೋಗಿಗಳಾಗಿ ಬದುಕುವ ಸ್ಥಿತಿ ಬಂದಿದೆ. ಹರೆಯದ ವಯಸ್ಸಿನದಲ್ಲಿ ಎಲ್ಲರೂ ಭಾವನಾತ್ಮಕ ಲೋಕದಲ್ಲೇ ವಿಹರಿಸುತ್ತ ಮೈಮರೆಯುತ್ತಾರೆ. ಆದರೆ, ಭವಿಷ್ಯ ಭದ್ರವಾಗಲು ಅವರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಯಾವುದೇ ದೇಶದ ಸಂವಿಧಾನ ಎಷ್ಟು ಸಮರ್ಥವಾದದ್ದು, ಶ್ರೇಷ್ಠವಾದದ್ದು ಎನ್ನುವುದಕ್ಕಿಂತ ಅದನ್ನು ಅನುಷ್ಠಾನಕ್ಕೆ ತರುವ ಕೈಗಳು ಎಷ್ಟು ಶುದ್ಧವಾಗಿವೆ ಎಂಬುದು ಮುಖ್ಯ. ಇದೇ ಮಾತು ಡಾ.ಅಂಬೇಡ್ಕರ್‌ ಅವರಿಗೂ ಮನವರಿಕೆಯಾಗಿತ್ತು. ಸಮಾನ ಹಕ್ಕಿನಂಥ ಆಶಯವನ್ನು ಚಾಚೂತಪ್ಪದೇ ಜಾರಿಗೊಳಿಸಲು ಬಹಳ ಪರಿಶುದ್ಧವಾದ ಮನಸ್ಸುಗಳು ಬೇಕಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಜಾಕ್‌ ಉಸ್ತಾದ್‌ ಮಾತನಾಡಿ, ‘18 ವರ್ಷ ತುಂಬಿದ ಪ್ರತಿಯೊಬ್ಬರೂ ಒಂದು ಸರ್ಕಾರ ರಚನೆ ಮಾಡುವ ಹಕ್ಕು ಪಡೆಯುತ್ತಾರೆ. ಆದರೆ, ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿ ಮಾಡಲು ‘ಯುವಜನ ಸಬಲೀಕರಣ ನಿಗಮ’ ರಚನೆ ಮಾಡುವುದು ಅಗತ್ಯವಾಗಿದೆ. ಇಂಥ ನಿಗಮಗಳೇ ನಮ್ಮ ಹಕ್ಕುಗಳು ಏನು, ಅವುಗಳನ್ನು ಪಡೆಯುವುದು ಹೇಗೆ ಎಂದು ಮಾರ್ಗದರ್ಶನ ಮಾಡುತ್ತವೆ’ ಎಂದರು.

‘ಪ್ರತಿ ವರ್ಷ ಲಕ್ಷಾಂತರ ಯುವಕ, ಯುವತಿಯರು ಉನ್ನತ ಶಿಕ್ಷಣ ಪಡೆದು ಹೊರಬರುತ್ತಾರೆ. ಸುಶಿಕ್ಷಿತರಿಗೂ ಪೊಲೀಸ್‌ ಠಾಣೆಯಲ್ಲಿ ಒಂದು ಎಫ್‌ಐಆರ್‌ ದಾಖಲಿಸಲು ಬರುವುದಿಲ್ಲ. ಇಷ್ಟೊಂದು ಅಸಮರ್ಥವಾಗಿ ಅವರನ್ನು ನಡೆಸಿಕೊಳ್ಳಲಾಗಿದೆ. ಇದು ಯುವಶಕ್ತಿಯ ಮೇಲಿನ ದೌರ್ಜನ್ಯವೇ ಸರಿ’ ಎಂದು ಕಿಡಿ ಕಾರಿದರು.

ಡೆಕ್ಕನ್‌ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಅನಿಲ ಟೆಂಗಳಿ ಮಾತನಾಡಿದರು. ವಕೀಲರಾದ ಅಶ್ವಿನಿ ಮದನಕರ್‌ ‘ಯುವಜನರ ಸಮಸ್ಯೆಗಳು’ ಕುರಿತು ವಿಷಯ ಮಂಡಿಸಿದರು. ಹೋರಾಟಗಾರ್ತಿ ರಮಾ ಹಾಗೂಸಂವಾದ ಯುವ ಸಂಪನ್ಮೂಲ ಕೇಂದ್ರದ ಸಂಯೋಜಕಿ ರುಕ್ಮಿಣಿ ನಾಗಣ್ಣವರ ಪ್ರಾಸ್ತಾವಿಕ ಭಾಷಣ ಮಾಡಿದರು.

ನಂತರ ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT