ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿಕಟ್ಟದ ಹೆಸರು; ಆತಂಕದಲ್ಲಿ ರೈತರು

ನಂಬಿಸಿ ಬಿತ್ತನೆ ಬೀಜ ಮಾರಿದ ವ್ಯಾಪಾರಿ, ಡಿಸಿಯಿಂದ ನ್ಯಾಯದ ಭರವಸೆ
Last Updated 25 ಆಗಸ್ಟ್ 2021, 9:33 IST
ಅಕ್ಷರ ಗಾತ್ರ

ಸೇಡಂ: ಬಹುತೇಕ ಕಡೆ ಹೆಸರು ರಾಶಿ ಆರಂಭವಾಗಿದೆ. ಆದರೆ ತಾಲ್ಲೂಕಿನ ಕೆಲವು ಗ್ರಾಮಗಳ ಹೊಲಗಳಲ್ಲಿ ಹೆಸರು ಬೆಳೆ ಇನ್ನೂ ಕಾಯಿಕಟ್ಟದೆ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ತಾಲ್ಲೂಕಿನ ಮಳಖೇಡ, ಕೋಡ್ಲಾ, ಅಳ್ಳೊಳ್ಳಿ, ನೀಲಹಳ್ಳಿ, ಬಿಜನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರ ಹೊಲಗಳಲ್ಲಿ ಇದುವರೆಗೂ ಹೆಸರು ಬೆಳೆ ಹೂವು ಬಿಟ್ಟಿಲ್ಲಾ, ಕಾಯಿ ಕಟ್ಟಿಲ್ಲಾ. ಬಿತ್ತಿದ ಹೆಸರು ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಲು ಮುಂದಾಗಿದ್ದಾರೆ.

ಈ ವರ್ಷ ಸಕಾಲಕ್ಕೆ ಹೆಸರು ಬಿತ್ತಿದ್ದು, 4–6 ಅಡಿ ಎತ್ತರದವರೆಗೆ ಬೆಳೆದು ನಿಂತಿದೆ. ಬೇರೆ ತಳಿಯ ಬೀಜಗಳನ್ನು ಬಿತ್ತಿದ ಹೊಲಗಳಲ್ಲಿ ಹೆಸರು ಬೆಳೆ ಕಾಯಿಕಟ್ಟಿ, ಒಣಗಿದ್ದು ನಂತರ ರಾಶಿಯೂ ಮಾಡಿದ್ದಾರೆ. ಆದರೆ ಈ ತಳಿಯ ಬೀಜ ಬಿತ್ತಿದ ರೈತರ ಹೊಲಗಳಲ್ಲಿ ಮಾತ್ರ ಹೆಸರು ಇನ್ನೂ ಕಾಯಿಯನ್ನೇ ಕಟ್ಟಿಲ್ಲ. ಬೆಳೆದು ನಿಂತ ಬೆಳೆಯನ್ನು ಕೆಡಿಸಲು (ಹರವಲು) ರೈತರು ಕಣ್ಣೀರು ಹಾಕುವಂತಾಗಿದ್ದು ಅಪಾರ ನಷ್ಟವಾಗಿದೆ.

ಮೋಸ ಎಸಗಿದ ವ್ಯಾಪಾರಿ: ರೈತರು ಕಲಬುರ್ಗಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖಾಸಗಿ ವ್ಯಾಪಾರಿಯಿಂದ ಬೀಜವನ್ನು ರೈತರು ಖರೀದಿಸಿದ್ದಾರೆ. ‘ನಾನು ಬಿತ್ತನೆ ಮಾಡಲು ಈ ಬೀಜ ಚನ್ನಾಗಿ ಸಂಸ್ಕರಣ ಮಾಡಿ ಇಟ್ಟಿದ್ದೇನೆ. ಎಕರೆಗೆ ಇದು 7-8 ಕ್ವಿಂಟಲ್ ಇಳುವರಿ ಬರಲಿದೆ. ಉತ್ತಮ ಬೀಜ ಇದೆ’ ಎಂದು ವ್ಯಾಪಾರಿ ರೈತರಿಗೆ ಹೇಳಿದ್ದಾನೆ ಎನ್ನಲಾಗಿದ್ದು, ರೈತರು ವ್ಯಾಪಾರಸ್ಥನನ್ನು ನಂಬಿ ಪ್ರತಿ ಕ್ವಿಂಟಲ್‌ಗೆ ₹8500 ಕೊಟ್ಟು ಖರೀದಿಸಿ ಮೋಸ ಹೋಗಿದ್ದಾರೆ. ಮೋಸ ಮಾಡಿದ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸಿ ಪರಿಹಾರ ಒದಗಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.

ವಿಜ್ಞಾನಿಗಳ ಭೇಟಿ: ರೈತರ ದೂರಿನ ಮೇರೆಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ.ಎಲ್ ಹಂಪಣ್ಣ ಕೃಷಿ ವಿಜ್ಙಾನಿಗಳನ್ನು ಕರೆಸಿ, ಬೆಳೆಯನ್ನು ಪರೀಕ್ಷಿಸಿದ್ದಾರೆ. ‘ಆದರೆ ಈ ಭಾಗದಲ್ಲಿ ಈ ಬೆಳೆ ಬೆಳೆಯುವುದಲ್ಲ, ನಮ್ಮ ಹವಾಮಾನಕ್ಕೆ ಈ ಬೆಳೆ ಹೊಂದಿಕೊಳ್ಳುವುದಿಲ್ಲ. ಅಲ್ಲದೆ 6 ತಿಂಗಳ ಬೆಳೆ ಇದಾಗಿದೆ, ನಮ್ಮ ಭಾಗಕ್ಕೆ ಈ ಬೆಳೆ ಸೂಕ್ತವಲ್ಲ ಎಂಬ ವರದಿಯನ್ನು ವಿಜ್ಞಾನಿಗಳು ನೀಡಿದ್ದಾರೆ ಎನ್ನಲಾಗಿದೆ.

ಜಿಲ್ಲಾಧಿಕಾರಿ ಭರವಸೆ: ನಾವು ಹೊಲದಲ್ಲಿ ಬಿತ್ತಿದ ಹೆಸರು ಬೆಳೆ ಇನ್ನೂ ಕಾಯಿಕಟ್ಟಿಲ್ಲಾ, ವ್ಯಾಪಾರಿಯೋರ್ವ ನಮಗೆ ಮೋಸ ಮಾಡಿದ್ದಾನೆ. ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಜಿಲ್ಲಾಧಿಕಾರಿ ಬಳಿ ಸುಮಾರು 80ಕ್ಕೂ ಅಧಿಕ ರೈತರು ತೆರಳಿದಾಗ, ಜಿಲ್ಲಾಧಿಕಾರಿ ವಿ.ವಿ ಜ್ಯೋತ್ನಾ ಅವರು, ಜಂಟಿ ಕೃಷಿ ನಿರ್ದೇಶಕರಿಗೆ ಇದರ ಕುರಿತು ಸಮೀಕ್ಷೆ ಮಾಡುವಂತೆ ಸೂಚಿಸಿದ್ದಾರೆ. ಜತೆ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಮತ್ತು ರೈತರು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರನ್ನು ಭೇಟಿಯಾದಾಗ, ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ, ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸಿ, ರೈತರಿಗೆ ನ್ಯಾಯ ಕೊಡಿಸುವಂತೆ ಮಾತನಾಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT