ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮ್‌ ಕಾರ್ಡ್‌ ಬ್ಲಾಕ್ ಮಾಡಿಸಿ ಖಾತೆಗೆ ಕನ್ನ

ಆರೋಪಿಗಳ ವಿಚಾರಣೆ ವೇಳೆ ಬಹಿರಂಗ; ಸೈಬರ್ ಕ್ರೈಂ ಪೊಲೀಸರಿಂದ ಎಚ್ಚರಿಕೆ
Last Updated 22 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಿಮ್‌ ಕಾರ್ಡ್‌ಗಳನ್ನು ಬಂದ್‌ (ಬ್ಲಾಕ್‌) ಮಾಡಿಸಿ, ನಕಲಿ ದಾಖಲೆಗಳನ್ನು ಬಳಸಿಕೊಂಡು ಹೊಸ ಸಿಮ್‌ ಕಾರ್ಡ್‌ ಖರೀದಿಸಿ ಸಾರ್ವಜನಿಕರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುವ ಜಾಲ ನಗರದಲ್ಲಿ ಸಕ್ರಿಯವಾಗಿದೆ.

ಇತ್ತೀಚೆಗೆ ನಗರದ ಉದ್ಯಮಿಯೊಬ್ಬರ ಮೊಬೈಲ್‌ನ ನೆಟ್‌ವರ್ಕ್‌ ಬಂದ್‌ ಆಗಿತ್ತು. ಕೆಲ ಗಂಟೆ ಬಳಿಕ ಮೊಬೈಲ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಸೇವಾ ಕಂಪನಿಯೊಂದರ ಪ್ರತಿನಿಧಿ ಎಂದು ಹೇಳಿ ನೆಟ್‌ವರ್ಕ್‌ ಪುನಃ ಬರಬೇಕಾದರೆ ಒಂದನ್ನು ಒತ್ತುವಂತೆ ಹೇಳಿದ್ದ. ಉದ್ಯಮಿ, ಒಂದನ್ನು ಒತ್ತಿದ್ದರು. ನಂತರವೂ ನೆಟ್‌ವರ್ಕ್‌ ಬಂದಿರಲಿಲ್ಲ.

ಮರುದಿನವೇ ಅವರ ಬ್ಯಾಂಕ್‌ ಖಾತೆಯಲ್ಲಿದ್ದ ಹಣವೆಲ್ಲ ಡ್ರಾ ಆಗಿತ್ತು. ಉದ್ಯಮಿ, ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಉದ್ಯಮಿ ಹೆಸರಿನಲ್ಲಿ ಅಪರಿಚಿತರು ಸಿಮ್‌ ಕಾರ್ಡ್‌ ಖರೀದಿಸಿದ್ದು ಗೊತ್ತಾಯಿತು ಎಂದು ಸೈಬರ್‌ ಕ್ರೈಂ ಠಾಣೆಯ ಮೂಲಗಳು ತಿಳಿಸಿವೆ.

‘ಉದ್ಯಮಿಯ ಮೊಬೈಲ್‌ ಕಳೆದಿರುವುದಾಗಿ ಸೇವಾ ಕಂಪನಿಗೆ ತಿಳಿಸಿದ್ದ ಆರೋಪಿಗಳು, ನಕಲಿ ದಾಖಲೆ ಕೊಟ್ಟು ಹೊಸ ಸಿಮ್‌ ಕಾರ್ಡ್‌ ಖರೀದಿಸಿದ್ದರು. ಆಗ ಉದ್ಯಮಿಯ ಮೊಬೈಲ್‌ನ ನೆಟ್‌ವರ್ಕ್‌ ಬಂದ್‌ ಆಗಿತ್ತು. ಆರೋಪಿ ಬಳಿಯ ಸಿಮ್‌ಕಾರ್ಡ್‌ ಕಾರ್ಯ ಶುರುವಾಗಿತ್ತು. ನಂತರ, ಉದ್ಯಮಿಯ ಬ್ಯಾಂಕ್‌ ಖಾತೆಯಿಂದ ಆರೋಪಿಗಳು ಹಣ ಡ್ರಾ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಕಾರ್ಡ್‌ ಮಾಹಿತಿ ಸೋರಿಕೆ: ನಿಗದಿತ ಸ್ಥಳದಲ್ಲಿ ಕ್ರೆಡಿಟ್‌, ಡೆಬಿಟ್ ಕಾರ್ಡ್‌ಗಳನ್ನು ತಯಾರಿಸಿ ಕೊರಿಯರ್ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಈ ಅವಧಿಯಲ್ಲೇ ಕಾರ್ಡ್‌ ಸಂಖ್ಯೆ ಹಾಗೂ ಸಿವಿಸಿ ಮಾಹಿತಿಯನ್ನು ಖದೀಮರು ಕದಿಯುತ್ತಿದ್ದಾರೆ. ನಂತರ, ಒನ್ ಟೈಂ ಪಾಸ್‌ವರ್ಡ್‌ಗಾಗಿ ನಕಲಿ ದಾಖಲೆಗಳನ್ನು ಕೊಟ್ಟು ಖರೀದಿಸುವ ಸಿಮ್‌ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೆಟ್‌ವರ್ಕ್‌ ಬಂದಾದರೆ ಹೀಗೆ ಮಾಡಿ...

* ಒಮ್ಮಿಂದೊಮ್ಮೆಲೇ ಮೊಬೈಲ್‌ ನೆಟ್‌ವರ್ಕ್‌ ಬಂದ್‌(ಬ್ಲಾಕ್‌) ಆದರೆ, ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳನ್ನು ಮೊದಲಿಗೆ ಬ್ಲಾಕ್‌ ಮಾಡಿಸಿ. ಅದಕ್ಕಾಗಿ ಆಯಾ ಬ್ಯಾಂಕ್‌ಗಳ ಸಹಾಯವಾಣಿಗಳಿಗೆ ಕರೆ ಮಾಡಿ.

* ಬ್ಲಾಕ್‌ ಆದ ನಂತರ ಬರುವ ಕರೆಗಳು ಹಾಗೂ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ

* ಹತ್ತಿರದ ಮೊಬೈಲ್ ಸೇವಾ ಕಂಪನಿ ಮಳಿಗೆಗೆ ಭೇಟಿ ನೀಡಿ. ಬ್ಲಾಕ್‌ ಆಗಿದ್ದಕ್ಕೆ ಕಾರಣವೇನು ಎಂಬುದನ್ನು ವಿಚಾರಿಸಿ

* ನಿಮ್ಮ ಹೆಸರಿನಲ್ಲಿ ಬೇರೊಬ್ಬರು ಸಿಮ್‌ ಕಾರ್ಡ್‌ ಖರೀದಿಸಿದ್ದರೆ, ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT