ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟಿಂಗ್‌ ಕಿಂಗ್‌ಪಿನ್‌ ಮೇಲೆ ಕ್ರಮ ಕೈಗೊಳ್ಳಿ: ರಾಘವೇಂದ್ರ ಚಿಂಚನಸೂರ

Last Updated 4 ಡಿಸೆಂಬರ್ 2021, 16:11 IST
ಅಕ್ಷರ ಗಾತ್ರ

ಕಲಬುರಗಿ: ‘ಕಲಬುರಗಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜೂಜಾಟ ಹಾಗೂ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಹೆಚ್ಚಾಗಿದೆ. ಈ ಕೃತ್ಯದಲ್ಲಿ ತೊಡಗಿದವರು ಹಾಗೂ ಇದರ ಕಿಂಗ್‌ಪಿನ್‌ ಆಗಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಮ್ ಆದ್ಮಿ ಪಕ್ಷದ ಗ್ರಾಮೀಣ ಮತಕ್ಷೇತ್ರದ ಸಂಚಾಲಕ ರಾಘವೇಂದ್ರ ಚಿಂಚನಸೂರ ಆಗ್ರಹಿಸಿದರು.

‘ಕ್ರಿಕೆಟ್‌ ಬೆಟ್ಟಿಂಗ್‌, ಆನ್‌ಲೈನ್‌ನಲ್ಲಿ ವಿವಿಧ ಗ್ಯಾಂಬ್ಲಿಂಗ್‌ ಆ್ಯಪ್‌ಗಳನ್ನು ಬಳಸಿ ಈ ದಂಧೆ ನಡೆಸಲಾಗುತ್ತಿದೆ. ಕ್ರಿಕೆಟ್‌ ಮುಗಿದ ತಕ್ಷಣ ಗ್ರಾಮೀಣ ಕ್ಷೇತ್ರದ ಬಹುಪಾಲು ಹಳ್ಳಿಗಳಲ್ಲಿ ಮಟಕಾ ಆಡಿಸುವ ಕೆಲಸ ನಡೆದಿದೆ. ಜಿಲ್ಲಾ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಈಗಾಗಲೇ ಬಂಧನವಾದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ, ಕಿಂಗ್‌ಪಿನ್‌ ಹುಡುಕಾಟ ಎಲ್ಲಿಗೆ ಬಂದಿದೆ ಎಂದು ಜನರಿಗೆ ಮಾಹಿತಿ ನೀಡಬೇಕು’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ
ಆಗ್ರಹಿಸಿದರು.‌

‘ಮೂರು ವರ್ಷಗಳಲ್ಲಿ ಬೆಟ್ಟಿಂಗ್‌, ಮಟಕಾದಲ್ಲಿ ತೊಡಗಿ ಸಾಲ ಮಾಡಿಕೊಂಡ 30 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 100ಕ್ಕೂ ಹೆಚ್ಚು ಜನ ಸಾಲದ ಬಾಧೆ ತಾಳದೇ ಊರು ತೊರೆದಿದ್ದಾರೆ. ಕಾಣೆಯಾದವರ ಹಾಗೂ ಆತ್ಮಹತ್ಯೆ ಮಾಡಿಕೊಂಡವರ ಪಟ್ಟಿಯನ್ನೂ ನಾವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೀಡಿದ್ದೇವೆ. ಅಲ್ಲದೇ, ಗೇಮಿಂಗ್‌ ಆ್ಯಪ್‌ಗಳನ್ನೂ ತಿಳಿಸಿದ್ದೇವೆ. ತಕ್ಷಣ ತನಿಖೆ ನಡೆಸಬೇಕು. ಅಪರಾಧಿಗಳನ್ನು ಜೈಲಿಗೆ ಅಟ್ಟಬೇಕು’ ಎಂದೂ
ಆಗ್ರಹಿಸಿದರು.

ಹಿರಿಯ ಮುಖಂಡ ಸಯ್ಯದ್ ಸಜ್ಜಾದೆ ಅಲಿ ಇನಾಂದಾರ ಮಾತನಾಡಿ, ‘ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಅವರು ‘ಅಜ್ಞಾನಿ’ಯಂತೆ ಮಾತನಾಡುತ್ತಿದ್ದಾರೆ. ಪೊಲೀಸರು ಲಂಚ ತಿಂದುಕೊಂಡು ಬಿದ್ದಿರುತ್ತಾರೆ ಎಂಬ ಅವರ ಹೇಳಿಕೆ ಇಡೀ ಇಲಾಖೆಯನ್ನು ಅವಮಾನಿಸಿದೆ. ಇಲಾಖೆಯಲ್ಲಿ ಲಂಚಗುಳಿತನ ಇಲ್ಲ ಎಂದಲ್ಲ; ಆದರೆ ಅದನ್ನು ನಿಯಂತ್ರಿಸಬೇಕು. ಆದರೆ, ಗೃಹಮಂತ್ರಿಯೇ ತಮ್ಮ ಇಲಾಖೆಯ ಬಗ್ಗೆ ಹೀಗೆ ಹೇಳಿಕೆ ನೀಡಿದ್ದು ನಾಚಿಕೆಗೇಡು. ತಕ್ಷಣ ಅವರು ಪೊಲೀಸರ ಕ್ಷಮೆ ಯಾಚಿಸಬೇಕು. ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಯುವ ಘಟಕದ ಅಧ್ಯಕ್ಷ ಶರಣಬಸಪ್ಪ ಅಂಬೆಸಿಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT