ಸೋಮವಾರ, ಜುಲೈ 4, 2022
25 °C
ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ತ್ಯಜಿಸಿ ಆಪ್ ಸೇರ್ಪಡೆಯಾದ ಮುಖಂಡರು

‘ವಿಧಾನಸಭೆಯ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ’ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ’ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯ್ ಶರ್ಮಾ ಹೇಳಿದರು.

ನಗರದಲ್ಲಿ ಶನಿವಾರ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳನ್ನು ತೊರೆದು ಬಂದ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೆಹಲಿಯಲ್ಲಿ ಎರಡು ಅವಧಿಯ ಆಡಳಿತ ನಡೆಸುತ್ತಿರುವ ಪಕ್ಷವು ಪಂಜಾಬ್‌ನಲ್ಲಿ ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಪಕ್ಷದ ಕಾರ್ಯಕರ್ತರು, ಜನರು ಪಕ್ಷದ ಮೇಲಿಟ್ಟಿರುವ ಭರವಸೆಯೂ ಕಾರಣವಾಗಿದೆ. ರಾಜ್ಯದಲ್ಲಿಯೂ ಪಕ್ಷದ ಸಂಘಟನೆಯು ಬಿರುಸಿನಿಂದ ನಡೆಯುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ’ ಎಂದರು.

ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಮಾತನಾಡಿ, ‘ಹತ್ತು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಆಮ್ ಆದ್ಮಿ ಪಕ್ಷವು ರಾಜಕೀಯದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದು, ಸ್ವಚ್ಛ, ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಬದ್ಧವಾಗಿದೆ. ಆದ್ದರಿಂದಲೇ ಪಂಜಾಬ್‌ನಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ’ ಎಂದು ತಿಳಿಸಿದರು.

‘ಮೊಬೈಲ್ ರಿಪೇರಿ ಮಾಡುವ ವ್ಯಕ್ತಿ ಪಂಜಾಬ್ ಮುಖ್ಯಮಂತ್ರಿ ಅವರನ್ನು ಸೋಲಿಸಿದ್ದಾರೆ. ಸಾಮಾನ್ಯ ವ್ಯಕ್ತಿ ಶಾಸಕನಾಗುವುದು ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ. ಸಂಘಟನೆ, ತ್ಯಾಗ, ಬಲಿದಾನದಿಂದ ಮಾತ್ರ ಹೊಸ ಮನ್ವಂತರ ಮೂಡಲು ಸಾಧ್ಯ. ಪಂಜಾಬ್‌ನಲ್ಲಿ ಆಗಿದ್ದು ಕರ್ನಾಟಕದಲ್ಲೂ ಆಗಲು ಸಾಧ್ಯ’ ಎಂದರು.

‘ದೇಶದಾದ್ಯಂತ ಪಕ್ಷದ ಬಗ್ಗೆ ಜನರು ಕುತೂಹಲಗೊಂಡಿದ್ದು, ಪ್ರಜ್ಞಾವಂತರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ರಾಜ್ಯದಲ್ಲಿ ‍ಪಕ್ಷವನ್ನು ಸಂಘಟಿಸಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನೆ, ಮಕ್ಕಳು, ಕುಟುಂಬವನ್ನು ಮರೆತು ರಾಜ್ಯದಾದ್ಯಂತ ಸುತ್ತಾಡುತ್ತಿದ್ದಾರೆ’ ಎಂದರು.

ವಿವಿಧ ವಾರ್ಡ್‌ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಯಿತು. ಕಲಬುರಗಿ ಉತ್ತರ, ದಕ್ಷಿಣ ಹಾಗೂ ಕಲಬುರಗಿ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರು ಭಾಗವಹಿಸಿದ್ದರು.

ಪಕ್ಷದ ಮುಖಂಡರಾದ ಮಾಜಿ ಮೇಯರ್ ಸಜ್ಜಾದ್ ಅಲಿ ಇನಾಮದಾರ, ಕಿರಣ ರಾಠೋಡ, ಡಾ.ರಾಘವೇಂದ್ರ ಚಿಂಚನಸೂರ, ಶರಣಬಸಪ್ಪ ಅಂಬೆಸಿಂಗೆ, ಮೌಲಾನಾ ಮೌಲ್ವಿ, ಮೀರ್ ಮೌಸಿನ್ ಅಲಿ, ಸಂಜಯ ಕರೇಕಲ್, ಚಂದ್ರಲೀಲಾ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು