ಬುಧವಾರ, ಆಗಸ್ಟ್ 21, 2019
28 °C
ಕಚೇರಿ ಬಳಕೆಗಾಗಿ ಹೊರಗುತ್ತಿಗೆ ಪಡೆದ ಕಾರ್‌ ಬಿಲ್‌ ಬಿಡುಗಡೆಗೆ ಲಂಚ

ಎಸಿಬಿ ಬಲೆಗೆ ಜಿಲ್ಲಾ ಆಯುಷ್‌ ಅಧಿಕಾರಿ

Published:
Updated:

ಕಲಬುರ್ಗಿ: ಜಿಲ್ಲಾ ಆಯುಷ್‌ ಇಲಾಖೆಯ ಉಪಯೋಗಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ಬಾಡಿಗೆ ಪಡೆದಿದ್ದ ಕಾರಿನ ಎರಡು ತಿಂಗಳ ಬಾಡಿಗೆ ಬಿಡುಗಡೆ ಮಾಡಲು ಕಚೇರಿ ಜವಾನನ ಮೂಲಕ ₹ 6 ಸಾವಿರ ಲಂಚ ಪಡೆಯುತ್ತಿದ್ದ ಜಿಲ್ಲಾ ಆಯುಷ್‌ ಅಧಿಕಾರಿ ಡಾ.ನಾಗರತ್ನ ಚಿಮ್ಮಲಗಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಬಿಸಿ)ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲ್ಲೂಕಿನ ಶರಣ ಶಿರಸಗಿ ಗ್ರಾಮದ ಅಂಬೇಡ್ಕರ್‌ ನಗರ ನಿವಾಸಿ ಕನಿಷ್ಕ ಮಹಾದೇವಪ್ಪ ಧನ್ನಿ ಕಳೆದ ಡಿಸೆಂಬರ್‌ನಿಂದ ಆಯುಷ್‌ ಇಲಾಖೆಗೆ ಮಾಸಿಕ ₹ 28,050ರಂತೆ ಕಾರು ಒದಗಿಸುತ್ತಿದ್ದಾರೆ. ಇದನ್ನು ನಾಗರತ್ನ ಅವರು ಕಚೇರಿ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಜೂನ್‌ ಹಾಗೂ ಜುಲೈ ತಿಂಗಳ ಕಾರು ಬಾಡಿಗೆ ಬಿಲ್ಲನ್ನು ಪಡೆಯಲು ನಿಯಮದಂತೆ ಲಾಗ್‌ ಬುಕ್‌ ಬರೆದುಕೊಟ್ಟು ವಾಹನದ ಬಾಡಿಗೆ ಬಿಲ್‌ ನೀಡಿದ್ದರು. 

ಎರಡು ತಿಂಗಳ ಬಾಡಿಗೆ ಹಣ ಬಿಡುಗಡೆ ಮಾಡಬೇಕು ಎಂದರೆ ತಿಂಗಳಿಗೆ ₹ 3 ಸಾವಿರದಂತೆ ಒಟ್ಟು ₹ 6 ಸಾವಿರ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದರಿಂದ ಕಂಗಾಲಾದ ಕನಿಷ್ಕ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಗುರುವಾರ ಬೆಳಿಗ್ಗೆ ನಾಗರತ್ನ ಅವರು ಕಚೇರಿ ಜವಾನ ಶ್ರೀಕಾಂತ ಪಾಟೀಲ ಕೈಗೆ ಲಂಚದ ಹಣವನ್ನು ಕೊಡುವಂತೆ ಹೇಳಿದ್ದರು. ಕನಿಷ್ಕ ಆ ಹಣವನ್ನು ನೀಡುತ್ತಿರುವಂತೆ ಅಲ್ಲಿಯೇ ಇದ್ದ ಎಸಿಬಿ ಅಧಿಕಾರಿಗಳು ಶ್ರೀಕಾಂತನನ್ನು ವಶಕ್ಕೆ ಪಡೆದಿದ್ದಾರೆ. ನಾಗರತ್ನ ವಿರುದ್ಧ ಲಂಚ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಎಸಿಬಿ ಈಶಾನ್ಯ ವಲಯದ ಎಸ್ಪಿ ವಿ.ಎಂ.ಜ್ಯೋತಿ, ‘ನಾಗರತ್ನ ಅವರ ವಿರುದ್ಧ ದೂರು ಬಂದುದರಿಂದ ಲಂಚ ಪಡೆಯುವ ಸಂದರ್ಭದಲ್ಲಿಯೇ ದಾಳಿ ಮಾಡಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೆ ಸಾರ್ವಜನಿಕರು ಎಸಿಬಿ ಗಮನಕ್ಕೆ ತರಬೇಕು’ ಎಂದರು. 

ವಿ.ಎಂ.ಜ್ಯೋತಿ ಹಾಗೂ ಡಿವೈಎಸ್ಪಿ ಸುಧಾ ಆದಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ ಮಹಮ್ಮದ್‌ ಇಸ್ಮಾಯಿಲ್ ಶರೀಫ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Post Comments (+)