ಗುರುವಾರ , ಆಗಸ್ಟ್ 11, 2022
24 °C
ಅಪಾಯ ಆಹ್ವಾನಿಸುತ್ತಿರುವ ಹೆದ್ದಾರಿ–149

ಇಲ್ಲಿ ನಿತ್ಯವೂ ಉರುಳಿ ಬೀಳುತ್ತಿವೆ ಲಾರಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ:  ತಾಲ್ಲೂಕಿನ ಶಹಾಪುರ– ಶಿವರಾಂಪುರ ಮಾರ್ಗದ ರಾಜ್ಯ ಹೆದ್ದಾರಿ– 149ರಲ್ಲಿ ಬರುವ ಚಿಕ್ಕಲಿಂಗದಳ್ಳಿಯಿಂದ ಶಾದಿಪುರ ಮಾರ್ಗ ಮಧ್ಯೆ ನಿತ್ಯವೂ ಲೋಡ್ ಲಾರಿಗಳು ಉರುಳಿ ಬೀಳುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸಲು ಜನರು ಭಯ ಪಡುವಂತಾಗಿದೆ.

ಕಬ್ಬು, ಕೆಂಪು ಮಣ್ಣು ಸೇರಿದಂತೆ ಸರಕು ಸಾಗಣೆಯ ವಾಹನಗಳು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಓಡಾಡುತ್ತಿವೆ. ರಸ್ತೆಯಲ್ಲಿ ಅಲ್ಲಲ್ಲಿ ತಿರುವುಗಳಿವೆ. ವನ್ಯಜೀವಿ ಧಾಮದ ನಿಯಮಾನುಸಾರ ರಸ್ತೆಯಲ್ಲಿ ವೇಗ ನಿಯಂತ್ರಕ ಅಳವಡಿಸಿಕೊಳ್ಳಬೇಕು ಎಂಬ ಷರತ್ತುಗಳಿದ್ದರೂ ಗುತ್ತಿಗೆದಾರ ಅದನ್ನು ಪೂರೈಸದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಈಗ ವಾಹನಗಳು ಉರುಳಿ ಬೀಳುತ್ತಿವೆ ಎಂದು ಸ್ಥಳೀಯ ಮುಖಂಡ ವಸಂತ ತಿಳಿಸಿದ್ದಾರೆ.

ರಸ್ತೆಯನ್ನು ಒಂದೂವರೆ ವರ್ಷದ ಹಿಂದೆ ನಿರ್ಮಿಸಲಾಗಿದೆ. ಪ್ರಸಕ್ತ ವರ್ಷ ಸುರಿದ ಮಳೆಯ ನೀರು ಹರಿದು ಹೋಗುವಾಗ ರಸ್ತೆಯಲ್ಲಿನ ಕೆಂಪು ಮಣ್ಣು ಕೊಚ್ಚಿಕೊಂಡು ಹೋಗಿವೆ. ಇದರಿಂದ ಡಾಂಬರ್ ರಸ್ತೆಯ ಬದಿಗೆ ಭುಜ ಭಾಗದಲ್ಲಿ ಮುರುಮ್ ಇಲ್ಲದ ಕಾರಣ ವಾಹನಗಳು ಸಮತೋಲನ ಕಳೆದುಕೊಂಡು ಉರುಳಿ ಬೀಳುತ್ತಿವೆ ಎಂದು ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿರಂಜೀವಿ ಪಾಪಯ್ಯ ದೂರಿದ್ದಾರೆ.

ಗುತ್ತಿಗೆದಾರರು ರಸ್ತೆ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಎಂಜಿನಿಯರ್‌ಗಳ ಮೇಲುಸ್ತುವಾರಿಯಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಭಾರಿ ದುರಂತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಕಬ್ಬು ಕುಂಚಾವರಂ, ಶಾದಿಪುರ ಹಾಗೂ ವೆಂಕಟಾಪುರ ಸುತ್ತ ಬೆಳೆಯಲಾಗುತ್ತದೆ. ಆದರೆ ಕಬ್ಬು ಸಾಗಣೆಯ ಲಾರಿಗಳು ರಸ್ತೆಯಲ್ಲಿ ಉರುಳಿ ಬೀಳುತ್ತಿರುವುದರಿಂದ ದ್ವಿಚಕ್ರ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಯಾದಯ್ಯ ಕೋಸಗಿ ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು