ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರಾಠರನ್ನು 2ಬಿ ವರ್ಗಕ್ಕೆ ಸೇರಿಸಿ’

ಸಂಗೋಳಗಿ(ಸಿ): ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ
Last Updated 16 ಮಾರ್ಚ್ 2020, 9:11 IST
ಅಕ್ಷರ ಗಾತ್ರ

ಆಳಂದ: ‘ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮರಾಠ ಜನಾಂಗವನ್ನು ರಾಜ್ಯ ಸರ್ಕಾರ ಪ್ರವರ್ಗ– 2ಕ್ಕೆ ಸೇರಿಸಬೇಕು’ ಎಂದು ಮರಾಠ ಸಮಾಜದ ರಾಜ್ಯ ಘಟಕದ ಉಪಾಧ್ಯಕ್ಷ ಸೂರ್ಯಕಾಂತ ಕದಂ ಒತ್ತಾಯಿಸಿದರು.

ತಾಲ್ಲೂಕಿನ ಸಂಗೋಳಗಿ (ಸಿ) ಗ್ರಾಮದಲ್ಲಿ ಭಾನುವಾರ ಮರಾಠ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 40 ಲಕ್ಷ ಮರಾಠಿಗರು ಇದ್ದಾರೆ. ಗಡಿಭಾಗದಲ್ಲಿನ ಮರಾಠಿಗರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಾಜದ ಸಮಗ್ರ ಅಭಿವೃದ್ಧಿಗೆ ಶಿವಾಜಿ ಮಹಾರಾಜರ ಹೆಸರಲ್ಲಿ ಮರಾಠಿಗರ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದರು.

ಪ್ರೊ.ಸಂಜಯ ಪಾಟೀಲ ಮಾತನಾಡಿ, ‘ಶಿವಾಜಿ ಮಹಾರಾಜರ ತ್ಯಾಗ, ಬಲಿದಾನ ಇಂದಿನ ಯುವಕರಿಗೆ ಸ್ಫೂರ್ತಿಯಾದರೆ ಜೀಜಾಬಾಯಿ ಅವರು ತಾಯಂದಿರಿಗೆ ಪ್ರೇರಣೆಯಾಗಬೇಕು’ ಎಂದರು.

ಮರಾಠ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಬಿ.ಜಗದಾಳೆ ಮಾತನಾಡಿ, ‘ಮರಾಠಾ ಸಮಾಜ ಬಾಂಧವರು ಶಿಕ್ಷಣ, ಸಂಘಟನೆಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ಬೀದರ್‌ನ ಅಂಬರಾಯ ಚಿಚಕೋಟೆ, ಶಿವಾಜಿ ಬ್ರೀಗೆಡ್‌ನ ಗುರುಶಾಂತಪ್ಪ ಟೆಂಗಳಿ ಮಾತನಾಡಿದರು. ಸಮಾಜದ ಗುರು ಧನರಾಜ ಬಿ.ಲಾಡಂತ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಶಹಾಜಿರಾವ ಪಾಟೀಲ ಅಧ್ಯಕ್ಷತೆ ವಹಿಸಿದರು.

ಮರಾಠಾ ಸಮಾಜದ ತಾಲ್ಲೂಕು ಘಟಕದ ನಾಗನಾಥ ಏಟೆ, ಜಿ.ಪಂ ಸದಸ್ಯ ಆನಂದ ಪಾಟೀಲ, ಜನಾರ್ದನ ಬಿರಾದಾರ, ರಾಜು ಕಾಕಡೆ, ಕಲ್ಯಾಣರಾವ ಪಾಟೀಲ, ರಾಮರತ್ನ ಪಾಟೀಲ, ಸುರೇಶ ಜಾಧವ, ಪ್ರಕಾಶ ಮಾನೆ, ದತ್ತಾತ್ರೇಯ ಘಾಟಗೆ, ಗ್ರಾ.ಪಂ ಸದಸ್ಯ ಸಂತೋಷ ಬಿರಾದಾರ, ಆನಂದರಾವ ಬಿರಾದಾರ, ಡಾ.ವಿಠಲ ಪೂಜಾರಿ, ಅಂಬಾರಾಯ ಖೇಮನ್ ಇದ್ದರು.

ಅಪ್ಪಾರಾವ ಮುಳೆ ನಿರೂಪಿಸಿದರೆ, ಗಂಗಾಧರ ಸ್ವಾಮಿ ಅವರ ಕಲಾ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಿತು.

ಇದಕ್ಕೂ ಮೊದಲು ಗ್ರಾಮದ ಮುಖ್ಯ ಬೀದಿಗಳಲ್ಲಿ ಶಿವಾಜಿ ಪುತ್ಥಳಿಯ ಆಕರ್ಷಕ ಮೆರವಣಿಗೆ ಜರುಗಿತು. ಡೊಳ್ಳು, ಕುಣಿತ, ಕೋಲಾಟ ಗಮನ ಸೆಳೆಯಿತು. ಹೆಣ್ಣು ಮಕ್ಕಳು ಹಳದಿ ಬಣ್ಣದ ಸೀರೆಯಲ್ಲಿ ಮತ್ತು ಯುವಕರು ಪೇಟಾ ಧರಿಸಿ ಕಂಗೊಳಿಸಿದರು.

ಗ್ರಾಮದ ಡಾ.ಅಂಬೇಡ್ಕರ್ ತರುಣ ಸಂಘದ ಯುವಕರು, ಮುಸ್ಲಿಂ ಬಾಂಧವರು ಭಾಗವಹಿಸಿ ಸಾಮರಸ್ಯ ಮೆರೆದರು. ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT