ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಯಿಂದ ವೈಮಾನಿಕ ಸಮೀಕ್ಷೆ: ಕಟೀಲ್‌

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಪರಿಹಾರ
Last Updated 19 ಅಕ್ಟೋಬರ್ 2020, 16:00 IST
ಅಕ್ಷರ ಗಾತ್ರ

ಕಮಲಾಪುರ: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಯಂತೆ ಪ್ರವಾಹ ಪೀಡಿತರಿಗೆ ಎಲ್ಲ ರೀತಿಯ ಪರಿಹಾರ ಒದಗಿಸಲಾಗುವುದು ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ ಭರವಸೆ ನಿಡಿದರು.

ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಅತಿವೃಷ್ಟಿಯಿಂದ ಆದ ಬೆಳೆ ಹಾನಿಯನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುಖ್ಯ ಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಂತು ತುರ್ತು ಪರಿಹಾರ ಕಾಯರ್ಗಳನ್ನು ಕೈಗೊಳ್ಳುವಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡು ತಿಂಗಳಿಂದ ಅತಿವೃಷ್ಟಿಯಾಗುತ್ತಿದೆ. ಬೆಳೆ, ಆಸ್ತಿಪಾಸ್ತಿ ಹಾನಿಯಾಗಿರುವುದು ವರದಿಯಾಗಿದೆ. ಎಲ್ಲವನ್ನು ಒಟ್ಟಗಿ ಸೇರಿಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೇಂದ್ರದ ಪ್ರಧಾನಮಂತ್ರಿ ಫಸಲ‌ ಬೀಮಾ ಯೋಜನೆಯಡಿ ಬೀದರ್‌, ಕಲಬುರ್ಗಿ ರೈತರಿಗೆ ಪರಿಹಾರ ಒದಗಲಿದೆ ಎಂದರು.

ಪೂರ್ತಿ ಮುಂಗಾರು ಬೆಳೆ ನಾಶವಾಗಿದೆ. ಹಿಂಗಾರು ಬಿತ್ತನೆಗೆ ಮಳೆ ಬಿಡುವು ಕೊಡುತ್ತಿಲ್ಲ. ಹೊಲದಲ್ಲಿ ನೀರು ಜಿನುಗುತ್ತಿವೆ. ಬಿತ್ತನೆಗೆ ದಿನ ಗತಿಸಿದೆ. ಹೀಗಾಗಿ ಹಿಂಗಾರು ಸಹ ವಿಫಲವಾಗಿದ್ದು, ಜೀವನ ಡೋಲಾಯಮಾನವಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಅಗಸ್ಟ್, ಸೆಪ್ಟೆಂಬರ್‌ ತಿಂಗಳಲ್ಲಿ ಅತಿವೃಷ್ಟಿ, ನೆರೆ ಹಾವಳಿಯಿಂದ ಕಮಲಾಪುರ ತಾಲ್ಲೂಕಿನಲ್ಲಿ 54 ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ವರದಿ ಸಲ್ಲಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಮತ್ತಷ್ಟು ಬೆಳೆ ಹಾನಿಯಾಗಿದ್ದು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಹೊಲ ಗದ್ದೆಗಳಲ್ಲಿ ನೀರು ನಿಂತಿದ್ದು ಸಮೀಕ್ಷೆಗೆ ಅಡ್ಡಿ ಆಗಿದೆ. ಆದಷ್ಟು ಬೇಗ ಪೂಣರ್ಗೊಳಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ ಮಾಹಿತಿ ನೀಡಿದರು.

ಬೆಣ್ಣೆತೊರೆ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಕುರಿಕೋಟಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಕಾಳಜಿ ಕೇಂದ್ರದಲ್ಲಿ ಊಟೋಪಚಾರ ಚೆನ್ನಾಗಿದೆ. ನಮಗೆ ಕೂಡಲೇ ಹಕ್ಕು ಪತ್ರ ಒದಗಿಸಿ ಎಂದು ಸಾವರ್ಜನಿಕರು ಕೇಳಿದರು. ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಮುಗಿದ ತಕ್ಷಣ ಮನೆ–ಮನೆಗೆ ತೆರಳಿ ಹಕ್ಕು ಪತ್ರ ವಿತರಿಸಲಾಗುವುದು ಎಂದು ತಹಶೀಲ್ದಾರ ಅಂಜುಮ್‌ ತಬಸುಮ್‌ ತಿಳಿಸಿದರು.

ವಿಮೆ ಕಂಪನಿಗಳ ವಿರುದ್ಧ ಕ್ರಮ: ‘ಫಸಲ ಬೀಮಾ ಯೋಜನೆ ಕಲಬುರ್ಗಿ ಜಿಲ್ಲೆಯಲ್ಲಿ ವಿಫಲವಾಗಿದೆ. ವಿಮೆ ಕಂಪನಿಯವರು ಹಾಗೂ ಅಧಿಕಾರಿಗಳು ವಿಮೆ ಕಂತು ಕಟ್ಟಿಕೊಳ್ಳುವಾಗ ತೋರಿಸುವ ಕಾಳಜಿ ಬೆಳೆ ನಷ್ಟವಾದಾಗ ಪರಿಹಾರ ಒದಗಿಸಲು ತೋರುವುದಿಲ್ಲ. ಫಸಲ ಬಿಮಾ ಯೋಜನೆಯಿಂದ ರೈತರಿಗೆ ಮೋಸವಾಗುತ್ತಿದೆ. ಏನು ಕ್ರಮ ಕೈಗೊಂಡಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಟೀಲ್‌, ಈ ಕುರಿತು ಮಾಹಿತಿ ಬಂದಿದೆ. ಕೇಂದ್ರ ಸರ್ಕಾರದ ಗಮನದಲ್ಲಿದೆ. ಅಂಥ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಸದ ಭಗವಂತ ಖೂಬಾ, ಉಮೇಶ ಜಾಧವ್‌, ಶಾಸಕ ಬಸವರಾಜ ಮತ್ತಿಮೂಡ, ರಾಜಕುಮಾರ ಪಟೀಲ ತೇಲ್ಕೂರ, ವಿಧಾನ ಪರಿಷತ್‌ ಸದಸ್ಯ ಸುನೀಲ್‌ ವಲ್ಯಾಪುರೆ. ಸಂಗಮೇಶ ವಾಲಿ, ಶಿವಕುಮಾರ ಪಸಾರ, ದಿವ್ಯಾ ಹಾಗರಗಿ, ಶಿವಕುಮಾರ ದೋಶೆಟ್ಟಿ, ಸುರೇಶ ರಾಠೋಡ್‌, ಯೂನುಸ್‌ ಪಟೇಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT