ಅಫಜಲಪುರ: ಮಳೆ ಕೊರತೆಯಿಂದಾಗಿ ಬೆಳೆಗಳು ಮೊಳಕೆ ಹಂತದಲ್ಲಿಯೇ ಕಮರುತ್ತಿವೆ. ತೇವಾಂಶವಿರುವ ಜಮೀನಿನಲ್ಲಿ ಬೆಳೆಗಳು ಹಸಿರಾಗಿದ್ದು, ಬೆಳವಣಿಗೆ ಹಂತ ಕುಂಠಿತವಾಗಿದೆ. ಮುಂಗಾರು ಬೆಳೆಗಳು ಕೈತಪ್ಪುವ ಆತಂಕ ರೈತರನ್ನು ಚಿಂತೆಗೀಡು ಮಾಡಿದೆ.
ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬಿತ್ತನೆಯಾಗಿದ್ದ ಸಜ್ಜೆ, ಹತ್ತಿ, ಸೂರ್ಯಕಾಂತಿ, ಶೇಂಗಾ, ತೊಗರಿ ಸೇರಿದಂತೆ ಬಹುತೇಕ ಬೆಳೆಗಳು ಒಣಗುತ್ತಿವೆ. ದುಬಾರಿ ಬೆಲೆಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಸಿದ್ದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆ. ಈ ವರ್ಷದ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿಲ್ಲ. ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ. ಹೀಗಾಗಿ ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂಬ ಆಗ್ರಹ ರೈತ ವಲಯದಲ್ಲಿ ಕೇಳಿದೆ.
ಕೊಳವೆಬಾವಿಗಳಲ್ಲಿ ಸಿಗುವ ಅಲ್ಪಸ್ವಲ್ಪ ನೀರಿನಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಅಂತಹ ರೈತರು ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ. ನಾಯಕನಹಟ್ಟಿ ಹೋಬಳಿಯನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಿಸಿ, ಈ ಭಾಗದ ರೈತರ ಹಿತಕಾಯಲು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಗ್ರಾಮ ಪಂಚಾಯಿತಿಗೆ ಒಂದರಂತೆ ಗೋಶಾಲೆ ನಿರ್ಮಿಸಬೇಕು. ಬೆಳೆನಷ್ಟ ಹೊಂದಿದ ರೈತರಿಗೆ ಬೆಳೆವಿಮೆ, ಬೆಳೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಮೇಶ ಹೂಗಾರ ಹಾಗೂ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನಿರ್ದೇಶಕ ಒತ್ತಾಯಿಸಿದರು.
ಮಳೆ ಕೊರತೆಯಿಂದಾಗಿ ಕೊಳವೆಬಾವಿ, ತೆರೆದ ಬಾವಿಗಳ ಅಂತರ್ಜಲ ಸಂಪೂರ್ಣ ಕುಸಿದಿದ್ದು, ತೋಟದ ಬೆಳೆಗಳು ಒಣಗುತ್ತಿವೆ. ನಾವು ದುಬಾರಿ ಹಣ ಖರ್ಚು ಮಾಡಿ ಕಬ್ಬು, ಬಾಳೆ, ದ್ರಾಕ್ಷಿ, ಪಪ್ಪಾಯಿ ಬೆಳೆ ಮಾಡಿದ್ದೇವೆ. ಹನಿ ನೀರಾವರಿ ಅಳವಡಿಸಿದ್ದೇವೆ. ಆದರೆ ಅಂತರ್ಜಲ ಮಟ್ಟ ಸಂಪೂರ್ಣವಾಗಿ ನೆಲಕಚ್ಚಿದೆ. ವಿದ್ಯುತ್ ಸಮಸ್ಯೆಯಿಂದ ಪಂಪ್‌ಸೆಟ್‌ಗಳು ನಡೆಯುತ್ತಿಲ್ಲ. ತೋಟದ ಬೆಳೆಗಳು ಒಣಗುತ್ತಿವೆ. ಸಾಲ ತೀರಿಸಲು ಹೋಗಿ ಮತ್ತೆ ಸಾಲ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ರೈತರ ದಬೊಗನಳ್ಳಿ ಲತ್ತಿ ಪಟೇಲ ಹಾಗೂ ತೆಲ್ಲೂರದ ಸಿದ್ದು ಮಗಿ ಅಸಹಾಯಕತೆ ವ್ಯಕ್ತಪಡಿಸಿದರು.
ಅಫಜಲಪುರ ತಾಲ್ಲೂಕನ್ನು ಶಾಶ್ವತ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಭೀಮಾ ಯೋಜನೆ ಕೆರೆ ತುಂಬುವ ಯೋಜನೆ ನಿಗದಿತ ಅವಧಿಯಲ್ಲಿ ಮುಗಿಯದೆ ಜನರಿಗೆ ರೈತರಿಗೆ ತೊಂದರೆಯಾಗುತ್ತಿದೆ. ಸಚಿವರು ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕ್ರಮಕೈಗೊಳ್ಳಬೇಕುಗುರು ಚಾಂದಕವಟೆ ರೈತ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.