ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ; ರಸ್ತೆ ವಿಸ್ತರಣೆ ಕಾರ್ಯಾಚರಣೆ ವಿಳಂಬ

Last Updated 22 ಅಕ್ಟೋಬರ್ 2021, 3:12 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣದ ಅಫಜಲಪು– ಕಲಬುರಗಿ ಹಾಗೂ ವಿಜಯಪುರ ಮಾರ್ಗದ ರಸ್ತೆ ವಿಸ್ತರಣೆ ಹಾಗೂ ರಸ್ತೆ ಬದಿಯ ಅಕ್ರಮ ಶೆಡ್‌ಗಳ ತೆರವು ಕಾರ್ಯಚರಣೆ ನನೆಗುದಿಗೆ ಬಿದ್ದಿದ್ದು, ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅ.16ರಂದು ಈ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆಯನ್ನು ತಹಶೀಲ್ದಾರ್ ಅವರು ಕರೆದಿದ್ದರು. ಆದರೆ, ಈ ಸಭೆಯನ್ನು ಏಕಾಏಕಿ ಸ್ಥಗಿತಗೊಳಿಸಲಾಯಿತು. ಇದರ ಹಿಂದೆ ರಾಜಕೀಯ ಅಡಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಹಿಂದೆ 2–3 ಸಭೆ ನಡೆಸಿ ರಸ್ತೆ ವಿಸ್ತರಣೆ ಮತ್ತು ಶೆಡ್‌ಗಳ ತೆರವಿಗೆ ತೀರ್ಮಾನಿಸಲಾಗಿತ್ತು. ಆದರೆ, ತಿಂಗಳುಗಲೇ ಕಳೆದರೂ ಉದ್ದೇಶಿತ ಕಾರ್ಯಚರಣೆ ನಡೆಯಲಿಲ್ಲ. ಜನಸಂಖ್ಯೆ ಬೆಳೆದಂತೆ ಪಟ್ಟಣದ ರಸ್ತೆಗಳು ವಿಸ್ತಾರ ಆಗಬೇಕು. ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ಮುಖಂಡರು.

ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದ ಕಾರಣ ಅ.16ರ ಸಭೆ ರದ್ದಾಗಿದೆ. ಅಫಜಲಪುರ ತಹಶೀಲ್ದಾರ್ ಹುದ್ದೆ ಪ್ರಭಾರಿ ಆಗಿದೆ. ನನ್ನ ಅವಧಿ ಇದೇ 20ಕ್ಕೆ ಮುಗಿಯಲಿದೆ. ಅ.21ಕ್ಕೆ ಹೆರಿಗೆ ಮೇಲೆ ರಜೆ ಹೋಗಿರುವ ಎಂ.ಕೆ.ನಾಗಮ್ಮ ಅವರ ಬರಲಿದ್ದು, ಮುಂದಿನ ನಿರ್ಧಾರ ಅವರಿಗೆ ಬಿಟ್ಟದ್ದು ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ತಿಳಿಸಿದರು.

ಅ.16ರ ಸಭೆ ತಹಶೀಲ್ದಾರ್ ರದ್ದುಪಡಿಸಿದ್ದಾರೆ. ನನಗೆ ವರ್ಗವಾಗಿದೆ ಎನ್ನುತ್ತಿದ್ದಾರೆ. ಪುರಸಭೆಯ ನೂತನ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರು ಮತ್ತೊಮ್ಮೆ ಸಭೆ ಕರೆದು ಸಭೆಯ ನಡೆಸುವ ದಿನಾಂಕ ನಿಗದಿ ಮಾಡಲಾಗುವುದು. ಇದಕ್ಕೆ ಜನರ ಸಹಕಾರ ಅಗತ್ಯ. ಎಲ್ಲ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದು ಪುರಸಭೆ ಹಿಂದಿನ ಮುಖ್ಯಾಧಿಕಾರಿ ಅಶೋಕ ಬಿಲಗುಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲಬುರಗಿ– ಅಫಜಲಪುರ ಮತ್ತು ಮಹಾರಾಷ್ಟ್ರದ ದುಧನಿ ಸಂಪರ್ಕಿಸುವ ರಸ್ತೆಯ ನಿಂಬಾಳದವರ ಪೆಟ್ರೋಲ್‌ ಬಂಕ್‌ನಿಂದ ಬಸ್‌ ಡಿಪೋವರೆಗೆ ರಸ್ತೆ ವಿಸ್ತರಣೆ ಮಾಡಬೇಕಿದೆ. ರಸ್ತೆ ನಿರ್ಮಾಣಕ್ಕೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹ 10 ಕೋಟಿ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಹುಮನಾಬಾದ್ ಉಪ ವಿಭಾಗದ ಸಹಾಯಕ ಎಂಜನಿಯರ್ ತಿಳಿಸಿದರು.

ದಿಢೀರನೆ ರಸ್ತೆ ವಿಸ್ತರಣೆಯ ಸಭೆ ರದ್ದಾಗಿದ್ದರ ಹಿಂದೆ ರಾಜಕೀಯ ನಾಯಕರ ತಿಕ್ಕಾಟವೇ ಕಾರಣ. ಇದರಲ್ಲಿ ರಾಜಕೀಯ ಸ್ವಾರ್ಥ ಅಡಗಿದೆ ಎನ್ನುತ್ತಾರೆ ಜೈ ಕರವೇ ತಾಲ್ಲೂಕು ಅಧ್ಯಕ್ಷ ಸುರೇಶ ಅವಟೆ.

ರಸ್ತೆ ವಿಸ್ತರಣೆ ಮಾಡುವಂತೆ ಹಲವು ಬಾರಿ ಹೋರಾಟ ನಡೆಸಲಾಗಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇದಕ್ಕೆ ತೀವ್ರ ಹಿನ್ನಡೆಯಾಗಿದೆ ಎನ್ನುತ್ತಾರೆ ಜೆಡಿಎಸ್‌ ಮುಖಂಡ ರಾಜಕುಮಾರ ಬಡದಾಳ.

*

ರಸ್ತೆ ವಿಸ್ತರಣೆಯಿಂದ ವಾಹನ ಸುಗಮ ಸಂಚಾರಕ್ಕೆ ನೆರವಾಗಲಿದ್ದು, ಸ್ಥಳೀಯರ ಸಹಕಾರ ಅಗತ್ಯ. ಮತ್ತೊಮ್ಮೆ ಸಭೆಯ ದಿನಾಂಕ ನಿಗದಿ ಮಾಡಲಾಗುವುದು

-ರೇಣುಕಾ ರಾಜು ಪಾಟೀಲ, ಪುರಸಭೆ ಅಧ್ಯಕ್ಷೆ

*

ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದಿಂದ ರಸ್ತೆ ಅಗಲೀಕರಣ ಕಾರ್ಯಾಚರಣೆ ಸ್ಥಗಿತವಾಗಿದೆ. ಶೀಘ್ರವೇ ಸಭೆ ನಡೆಸಲಾಗುವುದು

-ಶಂಭುಲಿಂಗ ದೇಸಾಯಿ, ಪುರಸಭೆಯ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT