ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಖಾತೆಗೆ ₹ 29.58 ಕೋಟಿ ವಾರದಲ್ಲೇ ಜಮೆ: ಬಿ.ಸಿ.ಪಾಟೀಲ

ಪ‍್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ, ಅತಿವೃಷ್ಟಿಯಿಂದ ಹಾನಿ ಅನುಭವಿಸಿದವರಿಗೆ ನೆಮ್ಮದಿ
Last Updated 22 ಫೆಬ್ರುವರಿ 2021, 4:57 IST
ಅಕ್ಷರ ಗಾತ್ರ

ಕಲಬುರ್ಗಿ: ‘ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಕಂಗಾಲಾದ ಜಿಲ್ಲೆಯ 41 ಸಾವಿರಕ್ಕೂ ಹೆಚ್ಚು ರೈತರಿಗೆ ಒಂದೇ ವಾರದಲ್ಲಿ ₹ 29.58 ಕೋಟಿ ಪರಿಹಾರ ನೀಡಲಾಗುವುದು. ರೈತರ ಖಾತೆಗೆ ನೇರ ಹಣ ಜಮೆ ಆಗಲಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಪ್ರಮುಖವಾಗಿ ತೊಗರಿ, ಹೆಸರು, ಉದ್ದು, ಸೋಯಾಬಿನ್ ಸೇರಿದಂತೆ ಅತಿವೃಷ್ಟಿಯಿಂದ ಒಟ್ಟಾರೆ 4.43 ಲಕ್ಷ ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ. ರೈತರಿಗೆ 6 ಹಂತಗಳಲ್ಲಿ ₹ 97.07 ಕೋಟಿ ಪರಿಹಾರ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ 7ನೇ ಹಂತದಲ್ಲಿ 41 ಸಾವಿರ ರೈತರಿಗೆ ವಾರದಲ್ಲಿ ನೀಡಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ 14 ಮಣ್ಣು ಪರೀಕ್ಷಾ ಕೇಂದ್ರಗಳಿವೆ. ಮಣ್ಣಿನ ಪರೀಕ್ಷೆ ಮಾಡಿಕೊಂಡು ಬೆಳೆ ಬೆಳೆಯಲು ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ನಮಗೆ ಅನಾರೋಗ್ಯ ಉಂಟಾದಾಗ ವೈದ್ಯರ ಬಳಿ ತಪಸಣೆ ಮಾಡಿಸಿಕೊಳ್ಳುತ್ತೇವೆ. ವೈದ್ಯರು ರೋಗದ ಮೂಲ ಕಂಡುಹಿಡಿದು ಚಿಕಿತ್ಸೆ ನೀಡುವ ಮಾದರಿಯ‌ಲ್ಲೇ ಮಣ್ಣು ಪರೀಕ್ಷೆ ಮಾಡಿ ಯಾವ ಬೆಳೆ ಬೆಳೆದರೆ ನಿಮಗೆ ಅನುಕೂಲ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಿ’ ಎಂದರು.

‘ಕೃಷಿ ಹಾಗೂ ರೈತರ ಸಮಸ್ಯೆಗಳ ತಕ್ಷಣಕ್ಕೆ ಸ್ಪಂದಿಸಲೆಂದೇ ‘ರೈತ ಸಂಜೀವಿನಿ ವಾಹನ’ಗಳನ್ನು ನೀಡಲಾಗಿದೆ. ಇದು 108 ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಇದನ್ನು ಸದ್ಬಳಕ್ಕೆ ಮಾಡಿಕೊಳ್ಳಬೇಕು. ಪ್ರತಿ ರೈತನ ಕರೆಗೂ ಸ್ಪಂದಿಸಬೇಕು. ಇದು ರೈತಪರ ಸರ್ಕಾರವಾಗಿದ್ದು, ರೈತ ಸ್ನೇಹಿಯಾಗಿ ಆಡಳಿತ ನೀಡಿ’ ಎಂದು ಸೂಚಿಸಿದರು.

‘ಈ ವರ್ಷ ಬೆಳೆ ಸಮೀಕ್ಷೆ ಕೂಡ ರೈತರಿಂದಲೇ ಮಾಡಿಸಲಾಗುತ್ತದೆ. ಅವರಿಗೆ ನೆರವು ನೀಡಲು 10 ತಿಂಗಳ ಸೇವೆಗಾಗಿ ಕೃಷಿಯಲ್ಲಿ ಡಿಪ್ಲೊಮಾ ಪಡೆದರಾಜ್ಯದಾದ್ಯಂತ 6000 ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಈಗಾಗಲೇ ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಒಪ್ಪಿಗೆ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದ ಯೋಜನೆಯಡಿ ಜಿಲ್ಲೆಯಲ್ಲಿ ಹಸು, ಕುರಿ ಖರೀದಿಗೆ ಪ್ರೋತ್ಸಾಹಧನ ನೀಡಬೇಕು. ರೈತರು ಖರೀದಿ ಮಾಡಿದ ನಂತರವೇ ಹಣ ಪಾವತಿಸಬೇಕು ಎಂದರು.

ಅಭಾವ ಸೃಷ್ಠಿಸುವ ವ್ಯಾಪಾರಸ್ಥರ ಮೇಲೆ ನಿಗಾ ಇಡಿ: ‘ರೈತರಿಗೆ ಸಕಾಲದಲ್ಲಿ ಗೊಬ್ಬರ ಸಿಗದಂತೆ ಯೂರಿಯಾ ಅಭಾವ ಸೃಷ್ಠಿ ಮಾಡುವ ವ್ಯಾಪಾರಸ್ಥರ ಮೇಲೆ ನಿಗಾ ಇಡಿ. ಕಳೆದ ವರ್ಷ ಇಂತಹ 158 ವ್ಯಾಪಾರಸ್ಥರ ಲೈಸೆನ್ಸ್ ಸರ್ಕಾರ ರದ್ದುಗೊಳಿಸಿದೆ’ ಎಂದರು.

‘ಬೆಳೆ ವಿಮೆ ವಿಚಾರವಾಗಿ ಪರಿಹಾರ ಕೋರಿ ರೈತರು ಕೃಷಿ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಮತ್ತು ನೇರವಾಗಿ ವಿಮಾ ಕಚೇರಿಗೆ ಸಂಪರ್ಕಿಸಲೆಂದು ವಿಮಾ ಸಂಸ್ಥೆಗಳ ಕಚೇರಿಯನ್ನು ಪ್ರತಿ ತಾಲ್ಲೂಕಿನಲ್ಲಿ ತೆರೆಯಬೇಕು ಎಂದು ಈಗಾಗಲೇ ಆಯಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಕೂಡಲೇ ಕಚೇರಿ ತೆರೆಯಬೇಕು’ ಎಂದು ಅವರು ಸಭೆಯಲ್ಲಿದ್ದ ವಿಮಾ ಸಂಸ್ಥೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಪ್ರತಿ ತಾಲೂಕಿನಲ್ಲಿ ವಿಮಾ ಕಚೇರಿ ಸ್ಥಾಪಿಸಿರುವ ಬಗ್ಗೆ ಜಂಟಿ ಕೃಷಿ ನಿರ್ದೇಶಕರು ಖಾತ್ರಿ ಪಡಿಸಿಕೊಳ್ಳಬೇಕು. ಮುಂದಿನ ಒಂದು ವಾರದಲ್ಲಿ ವಿಮಾ ಕಚೇರಿ ಸ್ಥಾಪನೆ ಮಾಡದಿದ್ದಲ್ಲಿ ಈ ಬಗ್ಗೆ ವರದಿ ಕೊಡಿ’ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕ ಡಾ.ರವಿಂದ್ರನಾಥ ಸುಗೂರ ಅವರು ಇಲಾಖೆಯಿಂದ ವಿವಿಧ ಯೋಜನೆಗಳಲ್ಲಿ ಸಾಧಿಸಲಾದ ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರವನ್ನು ಪಿ.ಪಿ.ಟಿ. ಮೂಲಕ ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ‘ಕಾಡಾ’ ಅಧ್ಯಕ್ಷ ಶರಣಪ್ಪ ತಳವಾರ, ಜಿಲ್ಲಾ ಪಂಚಾಯತಿಯ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತ ಪಾಟೀಲ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಶ್ ಸಾಸಿ, ಹೆಚ್ಚುವರಿ ಕೃಷಿ ನಿರ್ದೇಶಕ ವೆಂಕಟರಾಮರೆಡ್ಡಿ, ಅಂಟೋನಿ ಎಂ.ಇ. ಸೇರಿದಂತೆ ಜಿಲ್ಲೆಯ ಕೃಷಿ ಅಧಿಕಾರಿಗಳು ಇದ್ದರು.

‘ಕೃಷಿ ಪದವಿ: ರೈತರ ಮಕ್ಕಳ ಖೋಟಾ ಹೆಚ್ಚಳ’

ಕಲಬುರ್ಗಿ: ‘ಬಿ.ಎಸ್ಸಿ ಕೃಷಿ ಪದವಿಗಳ ಪ್ರವೇಶಾತಿಯಲ್ಲಿ ರೈತರ ಮಕ್ಕಳಿಗೆ ನೀಡಲಾಗುವ ಮೀಸಲಾತಿ ಪ್ರಮಾಣ ಹೆಚ್ಚಿಸಲು ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಸದ್ಯ ಇರುವ ಶೇ 40ರಷ್ಟು ಮೀಸಲಾತಿ ಶೇ 50ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಕುರಿತು ಬಜೆಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕೃತವಾಗಿ ಪ್ರಕಟಿಸುವರು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

‘ಬಿ.ಎಸ್ಸಿ, ಕೃಷಿ, ತೋಟಗಾರಿಕೆ, ಪಶು ವಿಜ್ಞಾನ ಇತರ ಕೃಷಿಗೆ ಸಂಬಂದಿಸಿದ ಕೋರ್ಸುಗಳ ಪ್ರವೇಶಾತಿ ಶೇ. 50ರಷ್ಡು ಹೆಚ್ಚಳವಾದಲ್ಲಿ ರೈತ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಸು ಹಾಗೂ ಎತ್ತುಗಳು ಮೃತಪಟ್ಟರೂ ಪರಿಹಾರ, ಮೇವಿನ ಬಣಮೆ ಸುಟ್ಟರೆ ₹ 50 ಸಾವಿರ ಪರಿಹಾರ ನೀಡುವುದು ಸೇರಿದಂತೆ ಕೃಷಿಕರಿಗೆ ಅನುಕೂಲವಾಗುವ ಹಲವು ವಿಷಯಗಳು ಬಜೆಟ್‌ನಲ್ಲಿ ಘೋಷಣೆಯಾಗಲಿವೆ’ ಎಂದರು.

‘ನಕಲಿ ಬೀಜ, ಗೊಬ್ಬರ ಹಾವಳಿಗೆ ಕಡಿವಾಣ‍’

‘ಏಪ್ರಿಲ್– ಮೇ ತಿಂಗಳಲ್ಲಿ ಮುಂಗಾರು ಹಂಗಾಮಿಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಮಾರಕವಾಗಿರುವ ನಕಲಿ ಬೀಜ, ಗೊಬ್ಬರ, ಔಷಧಿ ಮಾರಾಟಕ್ಕೆ ಕಡಿವಾಣ ಹಾಕಬೇಕು’ ಎಂದು ಬಿ.ಸಿ. ಪಾಟೀಲ ತಾಕೀತು ಮಾಡಿದರು.

‘ರಾಜ್ಯದಲ್ಲಿ ನಕಲಿ ಕೀಟನಾಶಕ ಮಾರಾಟದ ಸರಾಸರಿ ನೋಡಿದಾಗ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ. 45ರಷ್ಟಿದ್ದು, ನಕಲಿ ಮಾರಾಟದ ಜಾಲಕ್ಕೆ ಇತಿಶ್ರೀ ಹಾಡಬೇಕು. ನಕಲಿ ಮಾರಾಟ ಪ್ರಕರಣಗಳಲ್ಲಿ ಮುಲಾಜಿಲ್ಲದೆ ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ₹ 4.17 ಕೋಟಿ ಮೊತ್ತದ ನಕಲಿ ಬೀಜಗಳನ್ನು ಇಲಾಖೆಯ ಜಾಗೃತ ದಳ ಪತ್ತೆ ಹಚ್ಚಿದೆ ಎಂಬುದನ್ನು ಯಾರು ಮರೆಯದಿರಿ’ ಎಂದು ಎಚ್ಚರಿಸಿದರು.‌

‘ರಾಜ್ಯದಲ್ಲಿ ಕೃಷಿ ಹೊಂಡ ನಿರ್ಮಾಣ ಯೋಜನೆಯಲ್ಲಿ ಅಕ್ರಮಗಳ ತನಿಖೆಗೆ ಪ್ರಕರಣವನ್ನು ಎಸಿಬಿಗೆ ವಹಿಸಿದ್ದು, ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕಿಸಾನ್‌ ಸಮ್ಮಾನ್‌ದಲ್ಲಿ ನಂಬರ್‌ ಒನ್‌’

‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯಶಸ್ವಿಯಾಗಿದ್ದು ಶೇ. 97.07ರಷ್ಟು ಸಾಧನೆ ಮಾಡಲಾಗಿದೆ. ಇದರಲ್ಲಿ ದೇಶದಲ್ಲೇ ರಾಜ್ಯಕ್ಕೆ ನಂಬರ್ ಒನ್ ಸ್ಥಾನ ಸಿಕ್ಕಿದೆ. ಫೆ. 24ರಂದು ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಲಾಗುವುದು. ಈ ಸಾಧನೆ ತೋರಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT