ಸೋಮವಾರ, ಸೆಪ್ಟೆಂಬರ್ 28, 2020
28 °C
ಏಕಮುಖವಾಗಿ ನಿರ್ಧಾರ ತೆಗೆದುಕೊಂಡ ಕೇಂದ್ರ ಸರ್ಕಾರ; ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ

ಕಲಬುರ್ಗಿ: ಹೊಸ ಶಿಕ್ಷಣ ನೀತಿಗೆ ಎಐಡಿಎಸ್‌ಒ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಏಕಮುಖವಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಪೂರ್ವ ಚರ್ಚೆ ನಡೆಸದೇ ಜಾರಿಗೆ ತಂದಿದ್ದು ಖಂಡನಾರ್ಹ’ ಎಂದು ಆರೋಪಿಸಿ, ನಗರದಲ್ಲಿ ಶುಕ್ರವಾರ ಎಐಡಿಎಸ್‌ಒ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.‌‌

ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಕಾರ್ಯಕರ್ತರು, ಕೆಲಹೊತ್ತು ಧರಣಿ ನಡೆಸಿ ಕೇಂದ್ರ ಸರ್ಕಾರದ ನೀತಿ ವಿರುದ್ಧ ಆಕ್ರೋಶ ಹೊರಹಾಕಿದರು. ಹೊಸ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯುವಂತೆ ಘೋಷಣೆ ಹಾಕಿದರು.

‘ಯಾವುದೇ ನೀತಿ ಜಾರಿಗೆ ತರುವ ಮುನ್ನ ಅದರ ಆಗು–ಹೋಗಿಗಳ ಬಗ್ಗೆ ಪರಿಶೀಲನೆ ನಡೆಯಬೇಕು. ಸಂಬಂಧಿಸಿದವರು ಹಾಗೂ ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕು. ಅದರೆ, ಬಿಜೆಪಿ ಸರ್ಕಾರ ತನ್ನ ಮನಸ್ಸಿಗೆ ಬಂದಂತೆ ನೀತಿಯನ್ನು ರೂಪಿಸಿದೆ. ಅದರಲ್ಲಿ ಹಲವು ದೋಷಗಳಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ಪೂರಕವಾಗಿರುವ ಸಂಘಟನೆಗಳ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಮಹಾನ್‌ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಂಥ ಶಿಕ್ಷಣದಲ್ಲಿ ಜ್ಯೋತಿಭಾ ಫುಲೆ, ಈಶ್ವರಚಂದ್ರ ವಿದ್ಯಾಸಾಗರ, ಭಗತ್‍ ಸಿಂಗ್‌, ನೇತಾಜಿ ಸುಭಾಷಚಂದ್ರ ಭೋಸ್, ಚಂದ್ರಶೇಖರ ಆಜಾದ್ ಮೊದಲಾದವರ ಹೆಸರುಗಳಿಲ್ಲ. ಹೀಗಿರುವಾಗ ಇದು ಪರಿಪೂರ್ಣ ಶಿಕ್ಷಣ ಆಗಲು ಸಾಧ್ಯವಿಲ್ಲ’ ಎಂದೂ ಅವರು ದೂರಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಹಣಮಂತ ಮಾತನಾಡಿ, ‘ಮಹಾನ್ ನೇತಾರರ ಹೆಸರುಗಳನ್ನು ಪಠ್ಯಕ್ರಮದಿಂದ ಕೈಬಿಡುವ ಮೂಲಕ ಕೇಂದ್ರ ಸರ್ಕಾರ ಸ್ವಾತಂತ್ರೃ ಹೋರಾಟಗಾರರಿಗೆ ದ್ರೋಹ ಮಾಡಿದೆ. ಚಾಲ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸುವ ಮೂಲಕ ಗೊಂದಲ ಮೂಡಿಸಿದಂತಾಗಲಿದೆ’ ಎಂದು ಕಿಡಿಕಾರಿದರು.

ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ಮಾತನಾಡಿ, ‘5ನೇ ತರಗತಿಯವರೆಗೂ ಚಟುವಟಿಕೆ ಆಧಾರಿತ ಶಿಕ್ಷಣ ಹೆಸರಿನಕಲ್ಲಿ ಕ್ರಮಬದ್ಧ ಕಲಿಯನ್ನು ಹಾಳು ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಲಿದೆ’ ಎಂದು ದೂರಿದರು.

‘ಕೂಡಲೇ ಕೇಂದ್ರ ಸರ್ಕಾರ ತನ್ನ ನಿಲುವು ಮರು ಪರಿಶೀಲಿಸಬೇಕು’ ಎಂದು ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಈರಣ್ಣ ಇಸಬಾ ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು