ಶನಿವಾರ, ಆಗಸ್ಟ್ 13, 2022
25 °C
ಎಐಡಿವೈಒ ಸಂಘಟನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಕ್ಕೊತ್ತಾಯ ಮಂಡನೆ

ಯುವಜನರಿಗೆ ಉದ್ಯೋಗ ನೀಡಲು ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ದೇಶದಲ್ಲಿ ಕೋಟ್ಯಂತರ ಯುವಕರು ದುಡಿಯಲು ತಯಾರಿದ್ದರೂ ಅವರಿಗೆ ಸೂಕ್ತ ಉದ್ಯೋಗಗಳು ಸಿಗುತ್ತಿಲ್ಲ. ಕೂಡಲೇ ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಹೊಸ ಹುದ್ದೆಗಳನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ (ಎಐಡಿವೈಒ) ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ ಮಾತನಾಡಿ, ‘ಇಂದು ದೇಶದಲ್ಲಿ ಶೇ 50ಕ್ಕಿಂತ ಹೆಚ್ಚು ಯುವಜನತೆ ಇದ್ದಾರೆ. ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಲು ಮಹತ್ವದ ಪಾತ್ರ ವಹಿಸುತ್ತಾರೆ. ಅಂತಹ ಯುವ ಸಮುದಾಯ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಂದು ನಿರುದ್ಯೋಗ ಸಮಸ್ಯೆ ನಮ್ಮ ದೇಶದಲ್ಲಿ ನಲವತ್ತೈದು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ದಾಖಲೆಯನ್ನು ಮುಟ್ಟಿದ್ದು ಒಂದು ಇತಿಹಾಸವಾದರೆ, ಕೋವಿಡ್ ಸಂದರ್ಭದ ಎರಡು ವರ್ಷ ಅದು ಇನ್ನೂ ಪಾತಾಳಕ್ಕೆ ಮುಟ್ಟಿ ಮೇಲೇಳಲಾರದ ಸ್ಥಿತಿಯಲ್ಲಿದೆ’ ಎಂದು ಟೀಕಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳನ್ನು ಮೊಟುಕುಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತದೆ. ಇನ್ನೊಂದು ಕಡೆ ಅಲ್ಪ ಸ್ವಲ್ಪ ಕಾಯಂ ನೇಮಕಾತಿ ನಡೆದರೂ ಅಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯುವ ನೀತಿ ರಾಜ್ಯದ ಯುವಕರಿಗಾಗಿ ಹೊಸ ಹುದ್ದೆಗ ಸೃಷ್ಟಿ ಮಾಡಿ, ಅವರ ಜೀವನ ಭದ್ರತೆ ಒದಗಿಸುವ ಯಾವ ಅಂಶಗಳನ್ನೂ ಒಳಗೊಂಡಿಲ್ಲ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಜನಜೀವನ ಸಂಕಷ್ಟದಲ್ಲಿರುವಾಗ ಯುವಜನರ ಮಧ್ಯೆ ನಿರಂತರವಾಗಿ ಕೋಮುವಾದ ವಿಷಯವನ್ನು ಪ್ರಚೋದಿಸಿ ಭಾವನೆಗಳನ್ನು ಕೆರಳಿಸಿ ಜನರ ಸಾಮರಸ್ಯವನ್ನು ಹಾಳುಗೆಡುವ ಪ್ರಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ’ ಎಂದರು.

‘ಜನಗಳ ಪ್ರಜಾತಾಂತ್ರಿಕ ಹೋರಾಟದ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ಸರ್ಕಾರ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ ಅವರನ್ನು ಬಂಧಸಿದೆ. ಇದು ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದ್ದು, ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಇಂದು ದೇಶದ ಯುವಕರು ಸಂಘಟಿತರಾಗಿ, ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿ ತ್ಯಾಗ ಬಲಿದಾನ ಮಾಡಿದ ಭಗತ್‌ಸಿಂಗ್, ನೇತಾಜಿ ಸುಭಾಷ್‌ಚಂದ್ರ ಬೋಸ್, ಚಂದ್ರಶೇಖರ್ ಆಜಾದ್ ಅವರ ಜೀವನ ಹೋರಾಟದಿಂದ ಸ್ಪೂರ್ತಿ ಪಡೆದು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ದ ಒಂದಾಗಿ ಹೋರಾಡಬೇಕಾಗಿದೆ’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಎಐಡಿವೈಒ ಜಿಲ್ಲಾ ಉಪಾಧ್ಯಾಕ್ಷ ಸಿದ್ದು ಚೌದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಎಸ್.ಎಚ್, ಉಪಧ್ಯಕ್ಷ ಮಲ್ಲಿನಾಥ ಹುಂಡೇಕಲ್, ಜಂಟಿ ಕಾರ್ಯದರ್ಶಿಗಳಾದ ಈಶ್ವರ್ ಈ.ಕೆ, ರಮೇಶ ದೇವಕರ್, ಗೌತಮ್ ಪರತೂರಕರ್, ದತ್ತು, ರಘು ಪವಾರ, ಆನಂದ, ಅಮೀರ್ ಪಟೇಲ್ ಹಾಗೂ ಉದ್ಯೋಗಕಾಂಕ್ಷಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು