ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐನಾಪುರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯ

ಐನಾಪುರ ಏತ ನೀರಾವರಿ ಯೋಜನೆಗೆ ₹205 ಕೋಟಿ ಅಂದಾಜು ಮೊತ್ತ ನಿಗದಿ
Last Updated 18 ಡಿಸೆಂಬರ್ 2021, 4:41 IST
ಅಕ್ಷರ ಗಾತ್ರ

ಚಿಂಚೋಳಿ: ಐನಾಪುರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಬರಪೀಡಿತ ಪ್ರದೇಶದ ಜನರ ಜೀವನಮಟ್ಟ ಸುಧಾರಿಸಬೇಕೆಂದು ಒತ್ತಾಯಿಸಿ ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ ತಾಲ್ಲೂಕಿನ ಐನಾಪುರದ ನಾಡ ಕಚೇರಿ ಎದುರು ಧರಣಿ ನಡೆಸುತ್ತಿದೆ.

ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ, ಬೇಡಿಕೆ ಈಡೇರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಸಮಿತಿ ಅಧ್ಯಕ್ಷ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಐನಾಪುರ ಏತ ನೀರಾವರಿ ಯೋಜನೆಗೆ ₹205 ಕೋಟಿ ಅಂದಾಜು ಮೊತ್ತದ ವಿಸ್ತೃತ ಯೋಜನಾ ವರದಿಯನ್ನು ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದರಿಂದ ಅಂದಾಜು 10ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.

ಯೋಜನೆಗೆ ಮಂಜೂರಾತಿ ನೀಡಬೇಕೆಂದು ಒತ್ತಾಯಿಸಿ ಹಾಲಿ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಶಾಸಕರು, ಜಿಲ್ಲಾ ಉಸ್ತುವಾರಿ ಹಾಲಿ ಮಾಜಿ ಸಚಿವರು ಹಾಗೂ ನೀರಾವರಿ ನಿಗಮದ ಮತ್ತು ಜಲ ಸಂಪನ್ಮೂಲ ಇಲಾಖೆ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಳೆದ 10 ವರ್ಷಗಳಿಂದ ರೈತರು ಯೋಜನೆ ಅನುಷ್ಠಾನಕ್ಕೆ ಹೋರಾಟ ನಡೆಸುತ್ತಿದ್ದಾರೆ.

ಯೋಜನಾವರದಿ, ನೀಲನಕ್ಷೆ ತಯಾರಾಗಿದ್ದು ಹೊರತುಪಡಿಸಿದರೆ ಮೂರು ಜನ ಮುಖ್ಯಮಂತ್ರಿಗಳು ಬದಲಾದರೂ ಬಿಡಿಗಾಸು ಅನುದಾನ ಮಂಜೂರು ಮಾಡಿಲ್ಲ.

ಸರ್ಕಾರ ಇನ್ನಷ್ಟು ವಿಳಂಬ ಮಾಡದೇ ಯೋಜನೆಗೆ ಮಂಜೂರಾತಿ ನೀಡಿ ಅಚ್ಚುಕಟ್ಟು ಪ್ರದೇಶದ ಕೃಷಿಕರ ಬದುಕು ಹಸನುಗೊಳಿಸಲು ಮುಂದಾಗಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಐನಾಪುರ ಸಿದ್ದಲಿಂಗೇಶ್ವರ ಹಿರೇಮಠದ ಪಂಚಾಕ್ಷರಿ ದೇವರು, ಮುದ್ನಾಳದ ಮುರುಗೇಂದ್ರ ದೇವರು, ರಾಣಾಪುರ ಪ್ರೇಮಸಿಂಗ್ ಮಹಾರಾಜ ಧರಣಿಗೆ ಬೆಂಬಲ ಸೂಚಿಸಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದರು.

ಯೋಜನೆ ಅನುಷ್ಠಾನಕ್ಕಾಗಿ ಕಳೆದ ಒಂದು ವಾರದಿಂದ ಧರಣಿ ನಡೆಸುತ್ತಿದ್ದರೂ ರೈತರ ಬಳಿಗೆ ಪೊಲೀಸರನ್ನು ಹೊರತುಪಡಿಸಿ ಜಲ ಸಂಪನ್ಮೂಲ, ತಹಶೀಲ್ದಾರರು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿಲ್ಲ ಎಂದು ಧರಣಿ ನಿರತರು, ರೈತರು, ಮುಖಂಡರು
ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT