ಶನಿವಾರ, ಅಕ್ಟೋಬರ್ 19, 2019
22 °C

ಕಲಬುರ್ಗಿ | ನವೆಂಬರ್‌ 1ಕ್ಕೆ ವಿಮಾನ ನಿಲ್ದಾಣ ಲೋಕಾರ್ಪಣೆ : ಉಮೇಶ ಜಾಧವ್ ಭರವಸೆ

Published:
Updated:
Prajavani

ಕಲಬುರ್ಗಿ: ನಗರದ ಹೊರವಲಯದಲ್ಲಿರುವ ವಿಮಾನ ನಿಲ್ದಾಣದ ಕೆಲಸಗಳು ತೀವ್ರಗತಿಯಲ್ಲಿ ನಡೆಯುತ್ತಿದ್ದು, ನವೆಂಬರ್‌ 1ರ ಕರ್ನಾಟಕ ರಾಜ್ಯೋತ್ಸವ ದಿನದಂದು ಉದ್ಘಾಟನೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಸಂಸದ ಡಾ.ಉಮೇಶ ಜಾಧವ್‌ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಆದಷ್ಟು ಬೇಗನೇ ನಿಲ್ದಾಣವನ್ನು ವಾಣಿಜ್ಯ ವಿಮಾನಗಳ ಪ್ರಯಾಣಕ್ಕೆ ಅಣಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಯತ್ನಗಳು ನಡೆದಿವೆ’ ಎಂದರು.

‘ರೈಲ್ವೆ ವಲಯವನ್ನು ಕಲಬುರ್ಗಿಯಲ್ಲಿ ಆರಂಭಿಸುವ ಬಗ್ಗೆ ಹಿಂದಿನ ಸಂಸದರೂ, ರೈಲ್ವೆ ಖಾತೆ ರಾಜ್ಯ ಸಚಿವರೂ ಆಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಬರೀ ಘೋಷಣೆಯಷ್ಟೇ ಮಾಡಿದ್ದರು. ಹಣ ಮೀಸಲಿಟ್ಟಿರಲಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನೀವು ಅದನ್ನು ಮುಂದುವರಿಸಬಹುದಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಜಾಧವ, ‘ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಹಿಂದಿನ ವಿಚಾರವನ್ನು ಕೆದಕಲು ಹೋಗುವುದಿಲ್ಲ. ರಾಜ್ಯದಲ್ಲಿ ಯಾವುದಾದರೂ ರೈಲ್ವೆ ವಲಯ ಸ್ಥಾಪನೆಯಾಗುವುದಿದ್ದರೆ ಅದು ಮೊದಲು ಕಲಬುರ್ಗಿಯೇ ಆಗಿರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಆಪರೇಶನ್‌ ಕಮಲ ಮಾಡುವ ಪ್ರಯತ್ನಗಳು ನಡೆದಿಲ್ಲ. ಅವರೇ (ಕಾಂಗ್ರೆಸ್‌) ಪಕ್ಷ ಬಿಟ್ಟು ಹೋಗುವಂತೆ ಮಾಡುತ್ತಾರೆ. ಹೀಗಾಗಿ, ತಮಗೆ ಬೇಕಾದ ಪಕ್ಷವನ್ನು ಆಯ್ದುಕೊಳ್ಳುತ್ತಾರೆ ಎಂದು ಸೂಚ್ಯವಾಗಿ ಹೇಳಿದರು. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೇ 17ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಲಿದ್ದು, ಕೆಲ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಈಗಾಗಲೇ ₹ 10 ಸಾವಿರ ಪರಿಹಾರವನ್ನು ನೀಡಲಾಗಿದೆ. ಕೇಂದ್ರದಿಂದ ಆದಷ್ಟು ಶೀಘ್ರವೇ ನೆರವು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.

ಪಕ್ಷದ ಗ್ರಾಮೀಣ ಘಟಕದ ಜಿಲ್ಲಾ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ‘ಸೆ 17ರಂದು ಪ್ರಧಾನಿ ಮೋದಿ ಅವರ ಜನ್ಮದಿನ. ಅಂದಿನಿಂದ ಒಂದು ವಾರ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸೇವಾ ಸಪ್ತಾಹ ಆಚರಿಸಲಾಗುವುದು. ರಕ್ತದಾನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಶಾಸಕ ಡಾ.ಅವಿನಾಶ್ ಜಾಧವ್, ಮುಖಂಡರಾದ ಶಶೀಲ್‌ ಜಿ. ನಮೋಶಿ, ಸಂಗಣ್ಣ ಇಜೇರಿ ಇದ್ದರು.

Post Comments (+)