ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ವಿಮಾನ ಯಾನ ಸನ್ನಿಹಿತ

ಒಡಂಬಡಿಕೆ ಪತ್ರಕ್ಕೆ ಸಹಿ; ಗುಲಬರ್ಗಾ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರ
Last Updated 25 ಆಗಸ್ಟ್ 2019, 19:31 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿಯ ಆಗಸದಿಂದ ಲೋಹದ ಹಕ್ಕಿಗಳು ಹಾರುವ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಬೆಂಗಳೂರಿನಲ್ಲಿ ಶನಿವಾರ ರಾಜ್ಯ ಸರ್ಕಾರ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಧ್ಯೆ ಒಡಂಬಡಿಕೆ ಏರ್ಪಡುವ ಮೂಲಕ ವಿಮಾನ ನಿಲ್ದಾಣವು ಪ್ರಾಧಿಕಾರಕ್ಕೆ ಹಸ್ತಾಂತರವಾಗಿದೆ.

ಪ್ರಾಧಿಕಾರವು ನಿರ್ವಹಣೆಯ ಹೊಣೆಯನ್ನು ವಹಿಸಿಕೊಳ್ಳಲಿದ್ದು, ಉಡಾನ್‌ ಯೋಜನೆಯಡಿ ಆಯ್ಕೆಯಾದ ಮಾರ್ಗಗಳಲ್ಲಿ ವಿಮಾನಗಳು ಸಂಚರಿಸಲಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ತಿಂಗಳಿಂದಲೇ ಏರ್‌ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್‌ ಏರ್‌ ಹಾಗೂ ಖಾಸಗಿ ಸಂಸ್ಥೆಯಾದ ಗೊಡಾವತ್‌ ಏರ್‌ನ ವಿಮಾನಗಳು ಬೆಂಗಳೂರು, ತಿರುಪತಿ ಹಾಗೂ ಉತ್ತರ ಪ್ರದೇಶದ ಹಿಂಡನ್‌ (ದೆಹಲಿಗೆ ಸಮೀಪ) ಮಧ್ಯೆ ವಾಯು ಸಂಚಾರ ನಡೆಸಲಿವೆ.

ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ (ಉಡಾನ್‌–3) ವಿಮಾನದ ಒಟ್ಟು ಸೀಟುಗಳ ಸಾಮರ್ಥ್ಯದ ಅರ್ಧದಷ್ಟು ಸೀಟುಗಳನ್ನು ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆ ರಿಯಾಯಿತಿ ದರದಲ್ಲಿ ನೀಡಬೇಕು. ಆ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಉಳಿದ ಸೀಟುಗಳನ್ನು ಬೇಡಿಕೆ ಹೆಚ್ಚಿದಂತೆ ದರವನ್ನೂ ಹೆಚ್ಚಿಸಿಕೊಳ್ಳಲು ಅವಕಾಶವಿದೆ.

ಕೈತಪ್ಪಿದ್ದ ಹಲವು ಅವಕಾಶಗಳು: ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಇಲ್ಲದ್ದಕ್ಕೆ ಹಲವಾರು ಕೈಗಾರಿಕೆ ಸ್ಥಾಪನೆಯ ಅವಕಾಶಗಳು ಕೈತಪ್ಪಿದ್ದವು.

‘ಕಂಪ್ಯೂಟರ್‌ ಸಾಫ್ಟ್‌ವೇರ್‌ ದಿಗ್ಗಜ ಒರಾಕಲ್‌ನ ಉಪಾಧ್ಯಕ್ಷ ಫೆರ್ನೆಂಡೊ ರೊಬೆರಿಯೊ ಹಾಗೂ ಖಭೌತ ತಂತ್ರಜ್ಞಾನದ ಅಧ್ಯಯನಕ್ಕೆ ಇಸ್ರೊ ವಿಜ್ಞಾನಿಗಳು ಇಲ್ಲಿಗೆ ಬರಬೇಕಿದ್ದ ಕಾರ್ಯಕ್ರಮವನ್ನು ವಿಮಾನ ನಿಲ್ದಾಣ ಇಲ್ಲದ್ದರಿಂದ ರದ್ದುಗೊಳಿಸಿದ್ದರು. ಎಷ್ಟೋ ಸ್ಟಾರ್ಟ್‌ಅಪ್‌ ಹಾಗೂ ಕಾರ್ಖಾನೆಗಳನ್ನು ಆರಂಭಿಸಬಯಸುವ ಉದ್ಯಮಿಗಳೂ ವಿಮಾನ ಸಂಪರ್ಕ ಇಲ್ಲದ ಕಾರಣಕ್ಕಾಗಿ ಇಲ್ಲಿ ಉದ್ಯಮಗಳನ್ನು ಆರಂಭಿಸುವ ಪ್ರಯತ್ನವನ್ನು ಕೈಬಿಟ್ಟಿದ್ದರು’ ಎನ್ನುತ್ತಾರೆ ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಅಮರನಾಥ ಪಾಟೀಲ.

ಪ್ರಾದೇಶಿಕ ಅಸಮಾನತೆ ನಿವಾರಿಸಲು ಇಲ್ಲಿ ವಿಮಾನ ನಿಲ್ದಾಣದಂತಹ ಸುಧಾರಿತ ಸಂಪರ್ಕ ವ್ಯವಸ್ಥೆಯ ಮೂಲಸೌಕರ್ಯವನ್ನು ಒದಗಿಸಬೇಕು ಎಂದು ಡಾ.ಡಿ.ಎಂ.ನಂಜುಂಡಪ್ಪ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.‌

ವಿಮಾನ ನಿಲ್ದಾಣದ ಏಳುಬೀಳಿನ ಹಾದಿ: 27–3–2007ರಲ್ಲಿ ನಗರದ ಹೊರವಲಯದ ಶ್ರೀನಿವಾಸ ಸರಡಗಿ ಗ್ರಾಮದ ಬಳಿ 742 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ತಾತ್ವಿಕ ಅನುಮೋದನೆ ದೊರಕಿತ್ತು. 2008ರಲ್ಲಿ ಆರಂಭವಾಗಿ 2012ರಲ್ಲಿ ರನ್‌ವೇ, ಲಾಂಜ್‌, ನಿಯಂತ್ರಣ ಗೋಪುರ, ಆವರಣಗೋಡೆ ನಿರ್ಮಾಣ ಕಾಮಗಾರಿ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಯೋಜನೆ ಅನುಷ್ಠಾನಕ್ಕೆ ತರಬೇಕಿದ್ದ ಮೈಥಾಸ್‌, ರಾಹಿ, ಐಎಲ್‌ಎಫ್‌ಎಸ್‌ ಸಂಸ್ಥೆಗಳ ಮಧ್ಯೆ ಸಮನ್ವಯದ ಕೊರತೆಯಿಂದಾಗಿ ಕೆಲಸ ನಿಂತು ಹೋಗಿತ್ತು. ಆ ನಂತರ ರಾಜ್ಯ ಸರ್ಕಾರವೇ ಕಾಮಗಾರಿ ಪೂರ್ಣಗೊಳಿಸಿತು.

ಕಳೆದ ವರ್ಷದ ಆಗಸ್ಟ್‌ 26ರಂದು ಎರಡು ಪ್ರಾಯೋಗಿಕ ವಿಮಾನಗಳು ನಭದಿಂದ ಗುಲಬರ್ಗಾ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೂಲಕ ಹಲವು ದಶಕಗಳ ಕನಸು ಸಾಕಾರಗೊಂಡಿತು. ಅದಾಗಲೇ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ ಉಡಾನ್‌ ಯೋಜನೆಯಡಿ ಹತ್ತಾರು ವಿಮಾನಗಳು ಹಾರಾಟ ನಡೆಸಿದ್ದವು. ಸಂಸದ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆ ಅವರು ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಂದಿನ ಚೇರಮನ್‌ ಸಂದೀಪ್‌ ದವೆ ಅವರ ಮೂಲಕ ಒಪ್ಪಂದ ಮಾಡಿಕೊಳ್ಳುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಒತ್ತಡ ಹಾಕುತ್ತಲೇ ಇದ್ದರು.

ಬೆಂಗಳೂರಿನ ವಿಧಾನಸೌಧದಲ್ಲಿ ಶನಿವಾರ ನಡೆದ ಒಡಂಬಡಿಕೆ ವೇಳೆಸಂಸದ ಡಾ.ಉಮೇಶ ಜಾಧವ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಎನ್‌.ರವಿಕುಮಾರ್, ಡಾ.ಅವಿನಾಶ್‌ ಜಾಧವ, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಹಾಜರಿದ್ದರು.

ಹಿಗ್ಗಿದ ರನ್‌ವೇ ವಿಸ್ತಾರ

ಯೋಜನೆ ಆರಂಭಿಕ ಹಂತದಲ್ಲಿ ವಿಮಾನ ನಿಲ್ದಾಣದ ರನ್‌ವೇಯನ್ನು 1.7 ಕಿ.ಮೀ.ಗೆ ನಿಗದಿಪಡಿಸಲಾಗಿತ್ತು. ಇಷ್ಟು ಕಡಿಮೆ ಅಂತರದ ರನ್‌ವೇಯಲ್ಲಿ ಎಟಿಆರ್‌–72 ಮಾದರಿಯ ಪುಟ್ಟ ವಿಮಾನಗಳಷ್ಟೇ ಇಳಿಯಬಹುದು. ಆದರೆ, ಉಡಾನ್‌ ಯೋಜನೆಯಡಿ ಆಯ್ಕೆಯಾದ ವಿಮಾನಗಳು ಎ–320 ಮಾದರಿಯ 72 ಸೀಟು ಹಾಗೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೀಗಾಗಿ, ರನ್‌ವೇಯನ್ನು 3.26 ಕಿ.ಮೀ.ಗೆ ಹೆಚ್ಚಿಸುವಂತೆ ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಅಂದಿನ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರ ಮೇಲೆ ಒತ್ತಡ ಹೇರಿತು. ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ಬಿಸ್ವಾಸ್‌ 3.26 ಕಿ.ಮೀ. ವಿಸ್ತಾರಕ್ಕೆ ಒಪ್ಪಿಗೆ ಪಡೆದರು.

ಗುಲಬರ್ಗಾ ವಿಮಾನ ನಿಲ್ದಾಣದ ರನ್‌ವೇ ಕಳೆದ ವರ್ಷಷ್ಟೇ ₹ 140 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕಿಂತಲೂ ವಿಸ್ತಾರವಾಗಿದೆ. ಹುಬ್ಬಳ್ಳಿ ನಿಲ್ದಾಣದ ರನ್‌ವೇ 2.6 ಕಿ.ಮೀ. ಮಾತ್ರ.

ಅಂಕಿ ಅಂಶ

742 ಎಕರೆ

ವಿಮಾನ ನಿಲ್ದಾಣಕ್ಕೆ ಬಳಕೆಯಾದ ಜಮೀನು

₹ 181 ಕೋಟಿ

ವಿಮಾನ ನಿಲ್ದಾಣ ನಿರ್ಮಾಣ ವೆಚ್ಚ

₹ 22 ಕೋಟಿ

ಭೂಸ್ವಾಧೀನ ವೆಚ್ಚ‌

2018ರ ಆಗಸ್ಟ್‌ 26

ವಿಮಾನ ನಿಲ್ದಾಣದಲ್ಲಿ ಮೊದಲ ಪ್ರಾಯೋಗಿಕ ಹಾರಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT