ಎಲ್ಲ ವೆಬ್‌ಸೈಟ್‌ಗಳೂ ಕನ್ನಡದಲ್ಲೇ ಇರಲಿ: ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತಾಕೀತು

7
ಕನ್ನಡ ಅನುಷ್ಠಾನ; ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ

ಎಲ್ಲ ವೆಬ್‌ಸೈಟ್‌ಗಳೂ ಕನ್ನಡದಲ್ಲೇ ಇರಲಿ: ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತಾಕೀತು

Published:
Updated:

ಕಲಬುರ್ಗಿ: ‘ಸರ್ಕಾರದ ಎಲ್ಲ ಇಲಾಖೆಗಳ ವೆಬ್‌ಸೈಟ್‌ಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು. ಈ ಬಗ್ಗೆ 10 ದಿನಗಳ ಒಳಗಾಗಿ ಪೂರ್ಣ ವರದಿ ನೀಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತಾಕೀತು ಮಾಡಿದರು.

ಕನ್ನಡ ಅನುಷ್ಠಾನ ಸಂಬಂಧ ನಗರದಲ್ಲಿ ಗುರುವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ವೆಬ್‌ಸೈಟಿನಲ್ಲಿ ಕನ್ನಡ ಒಂದು ಆಯ್ಕೆಯಾಗಿ ಇರಬಾರದು. ಪೂರ್ಣಪ್ರಮಾಣದಲ್ಲಿ ಕನ್ನಡವೇ ಇರಬೇಕು’ ಎಂದರು.

‘ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ ಮತ್ತು ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ವಿಚಾರಣೆಗೆ ಒಳಪಡುವ ಪ್ರಕರಣಗಳ ನ್ಯಾಯಾಲಯದ ತೀರ್ಪುಗಳನ್ನೂ ಕನ್ನಡದಲ್ಲಿ ನೀಡಬೇಕು. ಪತ್ರ ವ್ಯವಹಾರ, ಜಾಹೀರಾತು, ಟೆಂಡರ್‌ ನೋಟಿಫಿಕೇಶನ್‌ಗಳು ಕನ್ನಡದಲ್ಲೇ ಇರಬೇಕು’ ಎಂದು ಸೂಚಿಸಿದರು.

‘ಪ್ರತಿ ಜಿಲ್ಲೆಯಲ್ಲೂ ಕನ್ನಡ ಜಾಗೃತಿ ಸಮಿತಿ ರಚಿಸಲಾಗಿದ್ದು, ಜಿಲ್ಲಾಧಿಕಾರಿ ಮೂರು ತಿಂಗಳಿಗೊಮ್ಮೆ ಈ ಸದಸ್ಯರ ಸಭೆ ಕರೆಯಬೇಕು. ಆದರೆ, ಕಲಬುರ್ಗಿಯಲ್ಲಿ ಈವರೆಗೆ ಒಂದೂ ಸಭೆ ನಡೆಯದಿರುವುದು ಬೇಸರ ತಂದಿದೆ’ ಎಂದರು.‌

ಬ್ಯಾಂಕುಗಳಲ್ಲೂ ಕಡ್ಡಾಯ: ‘ಬ್ಯಾಂಕಿನ ಸಿಬ್ಬಂದಿ ಕೇವಲ ಹಿಂದಿಯಲ್ಲೇ ವ್ಯವಹಾರ ಮಾಡುತ್ತಿದ್ದಾರೆ. ಪ್ರಾಧಿಕಾರ ಇದನ್ನು ಸಹಿಸುವುದಿಲ್ಲ. ಶೀಘ್ರ ಸಭೆ ಕರೆದು ಕನ್ನಡ ಕಡ್ಡಾಯ ಜಾರಿಗೆ ತಾಕೀತು ಮಾಡಬೇಕು’ ಎಂದು ನಿರ್ದೇಶನ ನೀಡಿದರು.

‘ಕೇಂದ್ರೀಯ ವಿದ್ಯಾಲಯಗಳು ಮತ್ತು ಸಿ.ಬಿ.ಎಸ್.ಇ. ಪಠ್ಯಕ್ರಮ ಇರುವ ಎಲ್ಲ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯ. ಇದನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದುಪಡಿಸಿ’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಪ್ರಾಧಿಕಾರದ ಸದಸ್ಯ ಮಹಾಂತೇಶ ಹಟ್ಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಸೇಡಂ ಸಹಾಯಕ ಆಯುಕ್ತೆ ಡಾ.ಬಿ.ಸುಶೀಲಾ, ಶಿಷ್ಠಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಅಮೃತಾ ಕಟಕೆ, ಡಾ.ಚಂದ್ರಕಲಾ ಬಿದರಿ, ಎಸ್.ಕೆ.ಬಿರಾದರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಬಿ.ಮರಬನಳ್ಳಿ, ಕನ್ನಡ ಸಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಹೋರಾಟಗಾರ್ತಿ ಪ್ರೊ.ಗೀತಾ ಬಾಳಿ ಚರ್ಚೆಯಲ್ಲಿ ಪಾಲ್ಗೊಂಡರು.

‘ರಾಜಕೀಯ ಬೇಳೆಗೆ ಬಲಿಯಾದ ಪ್ರಾತ್ಯಕ್ಷಿಕೆ ಶಾಲೆ’

ನಗರದ ಮಧ್ಯೆ ಇರುವ ಸರ್ಕಾರಿ ಪ್ರಾತ್ಯಕ್ಷಿಕೆ ಪ್ರೌಢಶಾಲೆಯನ್ನು ಸ್ಥಳಾಂತರಿಸಿದ ಬಗ್ಗೆ ಕುಪಿತರಾದ ಪ್ರೊ.ಸಿದ್ದರಾಮಯ್ಯ, ‘ಇದರಲ್ಲಿ ದೊಡ್ಡ ರಾಜಕೀಯ ದೊಂಬರಾಟವಿದೆ. ಯಾವುದೋ ಒಬ್ಬ ಶಿಕ್ಷಕಿಯನ್ನು ವರ್ಗ ಮಾಡಿ ಎಂದು ಜನ ಬೇಡಿಕೆ ಇಟ್ಟರೆ; ನೀವು ಇಡೀ ಶಾಲೆಯನ್ನೇ ಎತ್ತಂಗಡಿ ಮಾಡಿದ್ದೀರಿ. ಇದರ ಹಿಂದಿನ ಮರ್ಮವೇನು?’ ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದರು.

‘50 ವರ್ಷ ಹಳೆಯದಾದ ಈ ಶಾಲೆಯಲ್ಲಿ ಇನ್ನೂ 43 ಮಕ್ಕಳ ಹಾಜರಾತಿ ಇತ್ತು. ಸುಸಜ್ಜಿತ, ವಿಶಾಲ ಕಟ್ಟಡವಿದೆ. ಆ ಸುಂದರ ಕಟ್ಟಡವನ್ನು ಕಬಳಿಸಲು ಯಾರೋ ಪಿತೂರಿ ನಡೆಸಿದ್ದಾರೆ. ಅಲ್ಲಿನ ಶಿಕ್ಷಕಿ ಇಡೀ ಆಡಳಿತವನ್ನೇ ನಡುಗಿಸುವಷ್ಟು ಬಲಾಢ್ಯರೇ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

‘ಮುಂದಿನ ವರ್ಷ ಶಾಲೆ ಮಕ್ಕಳನ್ನು ಮೊದಲಿದ್ದ ಸ್ಥಳಕ್ಕೇ ಕರೆತರಬೇಕು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ನಿರ್ವಹಣಾಧಿಕಾರಿ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

* ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಕಡ್ಡಾಯವಾಗಿ ಕನ್ನಡದಲ್ಲೇ ಮಾಹಿತಿ ನೀಡಬೇಕು. ಈ ಬಗ್ಗೆ ಪಾಲಿಕೆ ವ್ಯಾಪ್ತಿಯಲ್ಲಿ ನರ್ಲಕ್ಷ್ಯ ತೋರುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು

–ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಅಂಕಿ ಅಂಶ

* 18,000 ರಾಜ್ಯ ವಿವಿಧ ಬ್ಯಾಂಕುಗಳಲ್ಲಿ ಇರುವ ಒಟ್ಟು ಸಿಬ್ಬಂದಿ

* 1,560 ಕನ್ನಡಿಗರ ಸಂಖ್ಯೆ

* 16,440 ಕನ್ನಡೇತರ ಸಿಬ್ಬಂದಿ ಸಂಖ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !