ಭೀಮವಾದ–ಮನುವಾದ ಮಧ್ಯೆ ಹೋರಾಟ

ಬುಧವಾರ, ಏಪ್ರಿಲ್ 24, 2019
32 °C
ಮಾನವ ಬಂಧುತ್ವ ವೇದಿಕೆಯ ಅನಂತ ನಾಯಕ ಹೇಳಿಕೆ

ಭೀಮವಾದ–ಮನುವಾದ ಮಧ್ಯೆ ಹೋರಾಟ

Published:
Updated:
Prajavani

ಕಲಬುರ್ಗಿ: ‘ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿ, ಮನುಸ್ಮೃತಿಯನ್ನು ಜಾರಿಗೊಳಿಸುವ ಹುನ್ನಾರ ನಡೆಸಿದ್ದಾರೆ. ಇದು ಭೀಮವಾದ ಮತ್ತು ಮನುವಾದದ ಮಧ್ಯದ ಹೋರಾಟಕ್ಕೆ ಕಾರಣವಾಗಿದೆ’ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ನಾಯಕ ಅನಂತ ನಾಯಕ ಹೇಳಿದರು.

ನಗರದ ಜಗತ್ ವೃತ್ತದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಜಯಂತ್ಯುತ್ಸವ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಬಿಜೆಪಿಯವರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿಧಾನದ ಹಾಳೆಗಳನ್ನು ಸುಟ್ಟು ಹಾಕಿರಬಹುದು. ಆದರೆ, ನಮ್ಮೆದೆಯೊಳಗಿನ ಸಂವಿಧಾನಕ್ಕೆ ಬೆಂಕಿ ಹಚ್ಚಲು ಸಾಧ್ಯವಿಲ್ಲ. ಸಂವಿಧಾನವನ್ನು ವಿರೋಧಿಸುವವರಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಏ.18 ಮತ್ತು 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರನ್ನು ತಿರಸ್ಕರಿಸುವ ಮೂಲಕ ಸಂವಿಧಾನವನ್ನು ಉಳಿಸಬೇಕು’ ಎಂದರು.

‘ನಾವು ಬುದ್ಧನ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳೋಣ. ಅಂಬೇಡ್ಕರ್‌ರ ಸಂವಿಧಾನದ ಆಶಯದಂತೆ ಬದುಕು ಸಾಗಿಸೋಣ. ಜನವಿರೋಧಿ ನೀತಿಗಳನ್ನು ಜಾರಿಗೆ ತರಲು ಹವಣಿಸುತ್ತಿರುವ ಬಿಜೆಪಿಯನ್ನು ತಿರಸ್ಕರಿಸೋಣ. ಮನುಸ್ಮೃತಿ ಜಾರಿಯಾದರೆ ಶಿಕ್ಷಣ, ಉದ್ಯೋಗಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಆದ್ದರಿಂದ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸ ಮಾಡೋಣ’ ಎಂದು ತಿಳಿಸಿದರು.

ಬೀದರ್‌ನ ಕೌಠಾ (ಬಿ) ಮಠದ ಸಿದ್ಧರಾಮ ಬೆಲ್ದಾಳ ಶರಣರು ಮಾತನಾಡಿ, ‘ವಿದ್ಯುತ್ ದೀಪಗಳ ಬೆಳಕಿಗಿಂತ ಭೀಮ ಬೆಳಕು ಹೆಚ್ಚು ಪ್ರಜ್ವಲವಾಗಿದೆ. ಅಸಮಾನತೆ, ಶೋಷಣೆ, ತಾರತಮ್ಯದ ಕತ್ತಲೆಯನ್ನು ಹೊಡೆದೋಡಿಸಲು ಭೀಮ ಬೆಳಕನ್ನು ಬಳಸೋಣ. ಕಾನೂನು ಮತ್ತು ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂದು ಹೇಳಿರುವ ಅಂಬೇಡ್ಕರ್‌ ಅವರು ನವ ಭಾರತದ ಶಿಲ್ಪಿಯಾಗಿದ್ದಾರೆ. ನಾವೆಲ್ಲರೂ ಅವರ ತತ್ವ, ಆದರ್ಶಗಳನ್ನು ಪಾಲಿಸೋಣ’ ಎಂದು ಹೇಳಿದರು.

‘ಸಂವಿಧಾನ ಉಳಿಯಬೇಕು ಎಂದರೆ ನೀವೆಲ್ಲ ಮೈಕೊಡವಿ ಎದ್ದು ನಿಲ್ಲಬೇಕು. ಸಂವಿಧಾನ ವಿರೋಧಿಗಳಿಗೆ ಬುದ್ಧಿ ಕಲಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ನಮ್ಮೆಲ್ಲರ ಹೆಮ್ಮೆ ಎಂದು ಹೇಳಿಕೊಳ್ಳಬೇಕು’ ಎಂದರು.

ಅಣದೂರಿನ ಭಂತೆ ಜ್ಞಾನಸಾಗರ, ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಭಂತೆ ಸಂಘಾನಂದ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಜಯಂತ್ಯುತ್ಸವ ಸಮಿತಿ ಗೌರವ ಅಧ್ಯಕ್ಷ ಡಾ.ವಿಠ್ಠಲ ದೊಡ್ಡಮನಿ, ಅಧ್ಯಕ್ಷ ಅವಿನಾಶ ದೊಡ್ಡಮನಿ, ಕಾರ್ಯಾಧ್ಯಕ್ಷ ಪ್ರಕಾಶ ಔರಾದಕರ್, ಪ್ರಧಾನ ಕಾರ್ಯದರ್ಶಿ ದಿನೇಶ ದೊಡ್ಡಮನಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ಚಿಮ್ಮಾಇದ್ಲಾಯಿ, ಕೋಶಾಧ್ಯಕ್ಷ ವಿಕಾಸ ಎಸ್.ಕರಣಿಕ, ಮುಖಂಡರಾದ ದೇವೇಂದ್ರ ಸಿನ್ನೂರ, ಸಂತೋಷ ಹಾದಿಮನಿ, ರಾಣೋಜಿ ದೊಡ್ಡಮನಿ, ನಾಗೇಂದ್ರ ಉಪಳಾಂವಕರ್, ಸಿದ್ಧಾರ್ಥ ಚಿಮ್ಮಾಇದ್ಲಾಯಿ ಇದ್ದರು.

ಸುರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !