ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮೊಳಗಿದ ಭೀಮಘರ್ಜನೆ, ತಡರಾತ್ರಿಯವರೆಗೆ ಮೆರವಣಿಗೆ

ಡಾ.ಬಿ.ಆರ್. ಅಂಬೇಡ್ಕರ್ 131ನೇ ಜಯಂತಿ ಅಂಗವಾಗಿ ವಿವಿಧೆಡೆ ಅನ್ನಸಂತರ್ಪಣೆ
Last Updated 15 ಏಪ್ರಿಲ್ 2022, 5:01 IST
ಅಕ್ಷರ ಗಾತ್ರ

ಕಲಬುರಗಿ: ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವದ ಅಂಗವಾಗಿ ಗುರುವಾರ ನಗರದ ವಿವಿಧ ಭಾಗಗಳಿಂದ ಸಂಜೆ ಹೊರಟ ಮೆರವಣಿಗೆಗಳು ತಡರಾತ್ರಿಯವರೆಗೆ ಜಗತ್ ವೃತ್ತವನ್ನು ತಲುಪಿದವು.

ಹೀರಾಪುರ, ತಾರಫೈಲ್, ರಾಜಾಪುರ, ಸುಂದರ ನಗರ ಸೇರಿದಂತೆ ವಿವಿಧ ಭಾಗಗಳಿಂದ ಬಂದ ಮೆರವಣಿಗೆಗಳಲ್ಲಿ ಮಹಿಳೆಯರು, ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದ್ದರು. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಹೊರಟ ಸಹಸ್ರಾರು ಜನರುಳ್ಳ ಮೆರವಣಿಗೆಗಳು ಕವಿ ಸಿದ್ದಲಿಂಗಯ್ಯ ಅವರ, ‘ಹೋರಾಟದ ಸಾವಿರಕ್ಕೆ ಸಾವಿರಾರು ನದಿಗಳು...‘ ಎಂಬಂತೆ ಕಾಣಿಸಿದವು.

ಡಾ.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಮುಖ್ಯ ಮೆರವಣಿಗೆಯು ಕೇಂದ್ರ ಬಸ್ ನಿಲ್ದಾಣದಿಂದ ಆರಂಭವಾಯಿತು. ಪ್ರಮುಖ ಆಕರ್ಷಣೆಯಾಗಿ ಅಲಂಕೃತ ಒಂಟೆಗಳು, ಕುದುರೆಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗೌತಮ ಬುದ್ಧ ತಮ್ಮ ಶಿಷ್ಯರಿಗೆ ಬೋಧಿಸುತ್ತಿರುವ ಹಾಗೂ ಅವರ ಹಿಂದೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಳೆತ್ತರದ ಪುತ್ಥಳಿ ಹೊಂದಿದ ಸ್ತಬ್ದಚಿತ್ರಗಳು ಗಮನ ಸೆಳೆದವು.

ಜಗ್ಗಲಿಗೆ ಮೇಳ, ಹಲಗೆ ಮೇಳ, ಹಗ್ಗದ ಕುಣಿತ, ವೀರಗಾಸೆ, ಅಮೃತಸರದಿಂದ ಬಂದಿದ್ದ ಸಿಖ್ ಯುವ ಕಲಾವಿದರು ಪ್ರದರ್ಶಿಸಿದ ರೋಮಾಂಚನಕಾರಿ ಕತ್ತಿವರಸೆ, ಕಣ್ಣು ಮುಚ್ಚಿಕೊಂಡು ಮರ ಕೊಯ್ಯುವ ಗರಗಸದಿಂದ ಬಾಯಲ್ಲಿದ್ದ ತರಕಾರಿಯನ್ನು ಕೊಯ್ಯುವ ದೃಶ್ಯಗಳು ಸಾರ್ವಜನಿಕರನ್ನು ಬೆರಗುಗೊಳಿಸಿದವು.

ಕಲಾತಂಡಗಳು ಮುಂದೆ ಸಾಗುತ್ತಿದ್ದಂತೆಯೇ ಸ್ಪಬ್ದಚಿತ್ರಗಳ ಹಿಂದೆ ಡಾ.ಅಂಬೇಡ್ಕರ್ ಅವರ ಅಭಿಮಾನಿಗಳು, ಅನುಯಾಯಿಗಳು ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭದಲ್ಲಿ ಜೈ ಜೈ ಜೈ ಜೈಭೀಮ್... ಘೋಷಣೆಗಳು ಮೊಳಗಿದವು. ಜಿಲ್ಲೆಯ ವಿವಿಧ ಭಾಗಗಳಿಂದ ಬೆಳಿಗ್ಗೆಯೇ ವಾಹನ ಮಾಡಿಕೊಂಡು ಬಂದಿದ್ದ ಯುವಕರು ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಲಾಖೆ, ಗೌರವಾಧ್ಯಕ್ಷ ಗುಂಡಪ್ಪ ಲಂಡನಕರ್ ಸೇರಿದಂತೆ ಸಮಿತಿಯ ಮುಖಂಡರು ಮುಂಚೂಣಿಯಲ್ಲಿದ್ದರು.

ಅನ್ನಸಂತರ್ಪಣೆ: ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣ, ಸರ್ದಾರ್ ವಲ್ಲಭಭಾಯಿ ವೃತ್ತ, ಜಗತ್ ವೃತ್ತ, ಮೋಹನ್ ಲಾಡ್ಜ್ ಸೇರಿದಂತೆ ಹಲವೆಡೆ ಉಚಿತ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ಇಡೀ ದಿನ ಅನ್ನಸಂತರ್ಪಣೆ ಇದ್ದುದರಿಂದ ಸಾರ್ವಜನಿಕರು ತಮ್ಮ ಹಸಿವು ನೀಗಿಸಿಕೊಂಡರು.

ಸಂಜೆ ತಂಪು ಪಾನಕವನ್ನು ವಿತರಿಸಲಾಯಿತು. ಕಾರ್ಯಕರ್ತರು ಶಿಸ್ತಿನಿಂದ ನಿಂತು ಹಸಿದು ಬಂದವರಿಗೆ ಊಟ, ನೀರು ನೀಡಿ ಸತ್ಕರಿಸಿದರು. ಅಲ್ಲಿಯೇ ಬಿಸಿ ಬಿಸಿಯಾದ ಪುಲಾವ್, ಅನ್ನ ಸಾರು ತಯಾರಿಸಿ ವಿತರಿಸಲಾಯಿತು.

ಭಾರಿ ಬಿರುಗಾಳಿ
ಕಲಬುರಗಿಯಲ್ಲಿ ಗುರುವಾರ ಸಂಜೆ ಭಾರಿ ಬಿರುಗಾಳಿ ಬೀಸಿತು. ಇದರಿಂದಾಗಿ ರಸ್ತೆಯಲ್ಲಿ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರರು ಪಕ್ಕಕ್ಕೆ ವಾಹನ ನಿಲ್ಲಿಸಿ ನಿಂತರು. ಮರಗಳಲ್ಲಿನ ಹೂಗಳು, ರೆಂಬೆಗಳು ಕ್ಷಣಾರ್ಧದಲ್ಲಿ ಕಿತ್ತು ಬಿದ್ದವು.

ಗಾಳಿ ವೇಗವಾಗಿ ಬೀಸುತ್ತಿದ್ದುದರಿಂದ ಮುಂದೆ ಹೋಗಲು ತೋಚದೇ ವಾಹನ ಸವಾರರು ನಿಂತಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಿತು. ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಜಗತ್ ವೃತ್ತಕ್ಕೆ ತೆರಳುತ್ತಿದ್ದ ಕಲಾತಂಡಗಳು ಮೆರವಣಿಗೆಯೂ ಗಾಳಿಯ ಹೊಡೆತಕ್ಕೆ ಸಿಲುಕಿಕೊಂಡಿತು. ಅದೇ ಸಮಯಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು.

ಮೆರವಣಿಗೆ ಮುಗಿದ ಬಳಿಕ ಜಗತ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲು ಹಾಕಿದ್ದ ಶಾಮಿಯಾನಕ್ಕೂ ಬಿರುಗಾಳಿಯಿಂದಾಗಿ ಹಾನಿಯಾಗಿದೆ. ಬಿರುಗಾಳಿ ಬೀಸಿದ ಬಳಿಕ ಕೆಲ ಹೊತ್ತು ಜಿಟಿ ಜಿಟಿ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT