ಮಂಗಳವಾರ, ಜೂನ್ 28, 2022
26 °C

ವಂದೆ ಮಾತರಂ ಗೀತೆಗೆ ವಿರೋಧ ಸಲ್ಲ‌; ಅಡ್ಡಂಡ ಕಾರ್ಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಸ್ವಾತಂತ್ರ್ಯದ ಹೋರಾಟಕ್ಕೆ ಸ್ಫೂರ್ತಿಯಾಗಿದ್ದ ವಂದೇ ಮಾತರಂ ಗೀತೆಯಲ್ಲಿನ ಶೌರ್ಯದ ಸಾಲುಗಳಿಗೆ ಕತ್ತರಿ ಹಾಕಲಾಗಿದೆ’ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆ ವತಿಯಿಂದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ನಗರದ ಡಾ.ಎಸ್‌.ಎಂ ಪಂಡಿತ ರಂಗಮಂದಿರದಲ್ಲಿ ನಡೆದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ್ದ ವಂದೇ ಮಾತರಂ ಗೀತೆ ಹಾಡಲು ಈಗ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿದ್ದ ವೀರತ್ವದ ಸಾಲುಗಳನ್ನೂ ತೆಗೆದು ಹಾಕಲಾಗಿದೆ. ಇದರ ಜತೆಗೆ 1857ರ ಸ್ವಾತಂತ್ರ್ಯ ಸಂಗ್ರಾಮವನ್ನು ಸಿಪಾಯಿ ದಂಗೆ ಎಂದು ಸುಳ್ಳು ಹೇಳಿ ಇತಿಹಾಸ ತಪ್ಪಾಗಿ ಅರ್ಥೈಸಿದ್ದಾರೆ. ದೇಶದಲ್ಲಿ ಒಂದೇ ಕುಟುಂಬ ಅಧಿಕಾರದಲ್ಲಿ ಇರುವಂತೆ ನೋಡಿಕೊಳ್ಳುವುದಾಗಿತ್ತು’ ಎಂದರು.

‘ಪರಾಕ್ರಮ ಪರಂಪರೆಯ ಭಾರತದ ಚರಿತ್ರೆಯನ್ನು ನಮಗೆ ತಪ್ಪಾಗಿ ಪಾಠ ಮಾಡಿ, ನಮ್ಮನ್ನು ಹೇಡಿಗಳಾಗಿ ಬಿಂಬಿಸಲಾಗಿದೆ. ನಮ್ಮ ಮಕ್ಕಳಿಗೆ ಈಗ ದೇಶದ ಕ್ಷಾತ್ರ ತೇಜಸ್ಸಿನ ಬಗ್ಗೆ ಬೋಧಿಸುವ ಸಮಯ ಬಂದಿದೆ. ಹೆಡಗೇವಾರ್, ವೀರ ಸಾವರ್ಕರ್‌ ಅವರು ರಾಷ್ಟ್ರದ ಕೀರ್ತಿಪುರುಷರು’ ಎಂದು ಅಭಿಪ್ರಾಯಪಟ್ಟರು.

‘ಹೆಡಗೇವಾರ್ ಯಾರು ಎಂದು ಕಲುಬುರಗಿ ಜಿಲ್ಲೆಯ ನಾಯಕರೊಬ್ಬರು ಪ್ರಶ್ನಿಸಿದ್ದಾರೆ. ದೇಶ ಸೇವೆಗಾಗಿ ಕೋಟ್ಯಾಂತರ ಸ್ವಯಂ ಸೇವಕರನ್ನು ರೂಪಿಸಿ, ಆರ್‌ಎಸ್‌ಎಸ್‌ನ ಮುಖ್ಯಸ್ಥರೇ ಹೆಡಗೇವಾರ್. ಕಾಂಗ್ರೆಸ್ ಸದಸ್ಯರಾಗಿ, ನಾಗಪುರದಲ್ಲಿ ಕಾರ್ಯದರ್ಶಿಯಾಗಿ ವಂದೇ ಮಾತರಂ ಗೀತೆ ಹಾಡಿ ಜೈಲಿಗೆ ಹೋಗಿದ್ದವರು’ ಎಂದು ಅವರು ತಿಳಿಸಿದರು.

ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ‘ಭಾರತ ಮಾತೆಯನ್ನು ಗೌರವಿಸುವುದರ ಜತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸೋಣ’ ಎಂದರು.

ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಮಾತನಾಡಿದರು. ಜಿಲ್ಲಾಧಿಕಾರಿ ಯಶ್ವಂತ ವಿ. ಗುರಕರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾದ ಶಿವರುದ್ರಪ್ಪ ಬ್ರಹ್ಮಪುರ, ಶಾಮರಾವ ಮಹಾಗಾಂವ ಮತ್ತು ವೆಂಕಟರಾವ ಕಲಬುರಗಿ ಅವರನ್ನು ಸನ್ಮಾನಿಸಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡದ ವೀರಭೂಮಿ‌ ನೀಡಿದ ಕೊಡುಗೆಯನ್ನು ಸ್ಮರಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಲೇಖಕ ಶಂಬುಲಿಂಗ ವಾಣಿ, ಶಿಕ್ಷಕ ಮಹೇಶ ಬಸರಕೋಡ್ ಇತರರು ಇದ್ದರು.

‘ಜಿಲ್ಲೆಯಲ್ಲಿ 75 ಕೆರೆ ನಿರ್ಮಾಣ’

‘ದೇಶದ ಸ್ವಾತಂತ್ರ್ಯಕ್ಕೆ 75 ವರ್ಷ ತುಂಬಿದ ಪ್ರಯುಕ್ತ ಕಲಬುರಗಿ ಜಿಲ್ಲೆಯಲ್ಲಿ 75 ಕೆರೆಗಳನ್ನು ನಿರ್ಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗೆ ಆ ಕೆರೆಗಳ ಸುತ್ತ ಹೋರಾಟಗಾರರ ಹೆಸರಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವಂತೆಯೂ ತಿಳಿಸಿದ್ದಾರೆ. ಹಾಗಾಗಿ, ಇದರ ಯಶಸ್ಸಿಗೆ ಎಲ್ಲರೂ ಕಾರ್ಯೋನ್ಮುಖರಾಗಬೇಕಿದೆ’ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.

‘ಸ್ವಾತಂತ್ರ್ಯಕ್ಕಾಗಿ ಮಡಿದವರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದರ ಜತೆಗೆ ದೇಶದ ಇತಿಹಾಸದ ಬಗ್ಗೆ ಇನ್ನೊಬ್ಬರಲ್ಲಿ ಅರಿವು ಮೂಡಿಸಬೇಕು. ವೀರ ಸಾವರ್ಕರ್ ಕಠಿಣ ಜೈಲು ಶಿಕ್ಷೆ ಅನುಭವಿಸಿದ್ದ ಸ್ಥಳಕ್ಕೆ ಸಂಸದರು, ಶಾಸಕರು ಸೇರಿ ಎಲ್ಲರೂ ಒಮ್ಮೆಯಾದರೂ ಭೇಟಿ ನೀಡಬೇಕು’ ಎಂದರು.

ಕಲಾ ತಂಡಗಳ ಮೆರಗು

ಸರ್ದಾರ್ ವಲ್ಲಭಭಾಯಿ ಪಟೇಲ ವೃತ್ತದಿಂದ ರಂಗ ಮಂದಿರದವರೆಗಿನ ಮೆರವಣಿಗೆಗೆ ಮಹಿಳೆಯರು ಹೊತ್ತ ಪೂರ್ಣಕುಂಬ ಕಳಸ, ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ವಿದ್ಯಾರ್ಥಿಗಳ ಜಾಥಾ, ನಿಂಗಪ್ಪ ಪೂಜಾರಿ ತಂಡದ ಡೊಳ್ಳು ಕುಣಿತ, ಶರಣಪ್ಪ ಮಾಂಗ ತಂಡದ ಹಲಗೆ ವಾದನ, ಚಂದ್ರಕಾಂತ ಡಿಗ್ಗೆ ತಂಡದ ಚಿಟ್ಟಿ ಮೇಳ, ಮಳೆಪ್ಪ ಅಫಜಲಪುರ ತಂಡದ ಹೆಜ್ಜೆ ಮೇಳ, ಶಾಂತಾಬಾಯಿ ತೀರ್ಥತಾಂಡಾ ಮತ್ತು ಸಂಗಡಿಗರ ಬಂಜಾರ ನೃತ್ಯವು ಕಳೆಕಟ್ಟಿದವು. ಪಾರ್ವತಿ ಉರ್ಕಿಮಠ ಅವರ ದೇಶಭಕ್ತಿ ಗೀತೆಗಳಿಗೆ ಕೇಳುಗರು ತಲೆದೂಗಿದರೇ ಸ್ನೇಹಾ ಹಳಿಮನಿ ಮತ್ತು ತಂಡದವರ ಸಾಮೂಹಿಕ ನೃತ್ಯ ನೋಡುಗರ ಗಮನ ಸೆಳೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು