ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಭ್ರಷ್ಟ ಅಧಿಕಾರಿಗಳಿಗೆ ಸಚಿವರ ಸಾಥ್’

ಶ್ರೀರಾಮ ಸೇನೆ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆರೋಪ
Published : 24 ಸೆಪ್ಟೆಂಬರ್ 2024, 16:02 IST
Last Updated : 24 ಸೆಪ್ಟೆಂಬರ್ 2024, 16:02 IST
ಫಾಲೋ ಮಾಡಿ
Comments

ಕಲಬುರಗಿ: ‘ಯಾದಗಿರಿ ಜಿಲ್ಲೆಯ ಶಹಾಪುರ ಉಗ್ರಾಣದಿಂದ 6,677 ಕ್ವಿಂಟಾಲ್ ಪಡಿತರ (ಅನ್ನಭಾಗ್ಯ) ನಾಪತ್ತೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಧಿಕಾರಿಯೊಬ್ಬರಿಗೆ ಕಲಬುರಗಿ ಜಿಲ್ಲೆಯಲ್ಲಿ ಸ್ಥಾನ ನೀಡುವ ಮೂಲಕ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭ್ರಷ್ಟರಿಗೆ ಸಾಥ್ ನೀಡಿದ್ದಾರೆ’ ಎಂದು ಶ್ರೀರಾಮ ಸೇನೆ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದರು.

‘ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಆ ಪಟ್ಟಿಯಲ್ಲಿ ಈ ಹಿಂದೆ ಯಾದಗಿರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಆಗಿದ್ದ ಭೀಮರಾಯ ಮಸಳಿ ಅವರೂ ಆರೋಪಿಯಾಗಿದ್ದಾರೆ. ಭೀಮರಾಯ ಅವರು ಪ್ರಸ್ತುತ ಕಲಬುರಗಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾಗಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪೊಲೀಸರಿಗೆ ದೂರು ನೀಡಿದ ಅಧಿಕಾರಿಯೇ ದೋಷಾರೋಪ ಪಟ್ಟಿಯಲ್ಲಿ 14ನೇ ಆರೋಪಿಯಾಗಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯನ್ನು ಕಲಬುರಗಿಗೆ ಕರೆ ತಂದವರು ಯಾರು? ಎಂಬುದು ಬಹಿರಂಗಪಡಿಸಬೇಕು’ ಎಂದು ಹೇಳಿದರು.

‘ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಮಣಿಕಂಠ ರಾಠೋಡ ಅವರನ್ನು ಬಂಧಿಸಿ 60 ದಿನ ಜೈಲಿನಲ್ಲಿ ಇರಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿಯನ್ನು ಯಾವಾಗ ಜೈಲಿಗೆ ಕಳುಹಿಸುತ್ತೀರಾ? ಬೇರೆಯವರ ಮೇಲಿನ 30, 40 ಪ್ರಕರಣಗಳ ಬಗ್ಗೆ ಮಾತನಾಡುವ ಸಚಿವರಿಗೆ ಅಕ್ಕಿ ಕಳ್ಳರು, ಭ್ರಷ್ಟ ಅಧಿಕಾರಿಗಳ ಮಾಹಿತಿ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಹಿಂದೂ ಸಂಘಟನೆಗಳ ಬಗ್ಗೆ ಗಂಟೆಗಟ್ಟಲೇ ಮಾತನಾಡುವ ಸಚಿವರು ಹನಿ ಟ್ರ್ಯಾಪ್ ಪ್ರಕರಣವನ್ನು ಎರಡು ಮಾತಿನಲ್ಲಿ ಹೇಳಿ ಮುಗಿಸುತ್ತಾರೆ. ದಲಿತ ಸಂಘಟನೆ ಹೆಸರಲ್ಲಿ ಮಾತನಾಡುವರ ಬಗ್ಗೆ ಬಾಯಿಯೇ ತೆರೆಯುವುದಿಲ್ಲ’ ಎಂದರು.

‘ಪ್ರಿಯಾಂಕ್ ಅವರು ಬಸವಣ್ಣನಿಂದಲೇ ಸಮಾಜ ಸುಧಾರಣೆ ಆಗಲಿಲ್ಲ ಎಂದಿದ್ದು ಸರಿಯಲ್ಲ. ನಿಮ್ಮ ಕೈಯಿಂದ ಆಗದಿದ್ದರೆ ರಾಜೀನಾಮೆ ನೀಡಿ. ನಿಮ್ಮ ನಿಷ್ಕ್ರಿಯತೆ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಶರಣರು, ಸಂತರ ಹೆಸರಗಳನ್ನು ಬಳಸಿಕೊಳ್ಳಬೇಡಿ. ಬಸವಣ್ಣನವರ ಕುರಿತ ನಿಮ್ಮ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT