ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಎಪಿಎಂಸಿ: ಆದಾಯಕ್ಕಿಂತ ವೆಚ್ಚವೇ ಅಧಿಕ

₹ 1.50ರಿಂದ 35 ಪೈಸೆಗೆ ಇಳಿದ ಶುಲ್ಕ, ಪ್ರತಿ ದಿನ ಶೇ 10ರಷ್ಟು ಮಾತ್ರ ಆದಾಯ ಸಂಗ್ರಹ
Last Updated 23 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಸರ್ಕಾರ ಎಪಿಎಂಸಿ ಶುಲ್ಕವನ್ನು ಕಡಿತಗೊಳಿಸಿದ ಮೇಲೆ ಮುಕ್ಕಾಲು ಪಾಲು ಆದಾಯ ನಿಂತುಹೋಗಿದೆ. ಪರ್ಯಾಯ ಮೂಲಗಳು ಇಲ್ಲದ ಕಾರಣ, ಮಾರುಕಟ್ಟೆ ಪ್ರಾಂಗಣದಲ್ಲಿ ಹೆಚ್ಚಕ್ಕೆ ಕಡಿವಾಣ ಹಾಕಿ, ಲೆಕ್ಕ ಸರಿದೂಗಿಸಬೇಕಾದ ಅನಿವಾರ್ಯತೆ ಬಂದಿದೆ.

ಕಲಬುರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಳೆದ ವರ್ಷ ₹ 8.40 ಕೋಟಿ ಆದಾಯ ಬಂದಿತ್ತು. ಆದರೆ, ಈ ವರ್ಷ ನವೆಂಬರ್‌ 23ರವರೆಗೆ ಕೇವಲ ₹ 3 ಕೋಟಿ ಮಾತ್ರ ಬಂದಿದೆ. ಅಳೆದು– ತೂಗಿ ಲೆಕ್ಕ ಹಾಕಿದರೂ ಮುಂದಿನ ಮಾರ್ಚ್‌ವರೆಗೂ ಹೆಚ್ಚೆಂದರೆ ಇನ್ನೂ ಒಂದು ಕೋಟಿ ಬರಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಈ ಹಿಂದೆ ₹ 1.50 ಇದ್ದ ಮಾರುಕಟ್ಟೆ ಶುಲ್ಕವನ್ನು ರಾಜ್ಯ ಸರ್ಕಾರ 35 ಪೈಸೆಗೆ ಇಳಿಸಿದೆ. ಹಳೆಯ ಶುಲ್ಕ ಆಕರಿಸುತ್ತಿದ್ದ ಸಂದರ್ಭದಲ್ಲಿ ಪ್ರತಿ ತಿಂಗಳು ₹ 1 ಕೋಟಿಗೂ ಅಧಿಕ ಆದಾಯ ಇತ್ತು. ಹಂಗಾಮು ಇಲ್ಲದ ಸಂದರ್ಭದಲ್ಲಿ ಕೂಡ ಕನಿಷ್ಠ ₹ 60 ಲಕ್ಷ ಬರುತ್ತಿತ್ತು. ದಾಲ್‌ಮಿಲ್‌ಗಳು ನಿರಂತರ ಕ್ರಿಯಾಶೀಲವಾಗಿದ್ದ ಕಾರಣ ಅಲ್ಲಿನ ಸೆಸ್‌ ಕೂಡ ಮಾರುಕಟ್ಟೆಗೆ ಹೆಚ್ಚಿನ ಆದಾಯ ತಂದು ಕೊಡುತ್ತಿತ್ತು. ಆದರೆ, ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲ ಮಿಲ್‌ಗಳೂ ಬಂದ್‌ ಆಗಿದ್ದು, ವಹಿವಾಟು ಸಂಪೂರ್ಣ ನಿಂತ ಕಾರಣ ಕನಿಷ್ಠ ಆದಾಯ ಕೂಡ ಬಂದಿಲ್ಲ. ‌

ಈ ಕಳೆದ ವರ್ಷ ದಿನವೊಂದಕ್ಕೆ ಬರುತ್ತಿದ್ದ ಆದಾಯದ ಶೇ 10ರಷ್ಟು ಮಾತ್ರ ಈಗ ಬರುತ್ತಿದೆ. ಅಂದರೆ, ತಿಂಗಳಿಗೆ ₹ 19ರಿಂದ 20 ಲಕ್ಷ ಮಾತ್ರ ಸಂಗ್ರಹವಾಗುತ್ತಿದೆ. ಇದರಿಂದಾಗಿ ಮಾರುಕಟ್ಟೆಯ ಆದಾಯಕ್ಕಿಂತ ಶೇ 30ರಷ್ಟು ಹೆಚ್ಚುವರಿ ವೆಚ್ಚವಾಗುತ್ತಿದೆ.

ವೆಚ್ಚಕ್ಕೆ ಕಡಿವಾಣ: ಆದಾಯ ಕಡಿಮೆ ಆಗಿದ್ದರಿಂದ ವೆಚ್ಚವನ್ನು ಕಡಿಮೆ ಮಾಡಿ, ಆದಾಯಕ್ಕೆ ಸರಿದೂಗುವಂತೆ ಮಾಡಲು ವಿವಿಧ ಕ್ರಮ ಕೈಗೊಳ್ಳಲಾಗಿದೆ. ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಕಡಿತ, ಸ್ವಚ್ಛತಾ ವೆಚ್ಚದಲ್ಲಿ ಕಡಿತ, ಇಂಧನ ಬಳಕೆ, ವಿದ್ಯುತ್‌ ಬಿಲ್, ಕಚೇರಿ ವ್ಯವಹಾರ ವೆಚ್ಚ... ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಸಾಧ್ಯವಾದಷ್ಟು ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಆದರೆ, ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಆಧಾರ ಇಲ್ಲವಾಗಿದೆ ಎಂಬುದು ಮಾರುಕಟ್ಟೆ ಅಧಿಕಾರಿಗಳ ಮಾಹಿತಿ.

35 ಪೈಸೆಯೂ ಬಳಕೆಗೆ ಸಿಗುವುದಿಲ್ಲ: ಸದ್ಯ ಆಕರಿಸುತ್ತಿರುವ 35 ಪೈಸೆ ಸೆಸ್‌ನಲ್ಲಿ ಎಲ್ಲವನ್ನೂ ಮಾರುಕಟ್ಟೆ ವೆಚ್ಚಕ್ಕೆ ಬಳಸಿಕೊಳ್ಳುವಂತಿಲ್ಲ. ಅದರಲ್ಲಿ ಶಾಸನಬದ್ಧ ವಂತಿಗೆ ಕಟ್ಟಿ ಉಳಿದ ಹಣ ಮಾತ್ರ ಮಾರುಕಟ್ಟೆಗೆ ಲಭ್ಯವಾಗುತ್ತದೆ. ಅಂದರೆ; ಆವರ್ತ ನಿಧಿ, ಕೃಷಿ ಮಾರಾಟ ಮಂಡಳಿ ನಿಧಿ ಸೇರಿದಂತೆ ಎಲ್ಲ ಆವರ್ತ ನಿಧಿಗಳಿಗೂ ಪಾವತಿ ಮಾಡುವ ಹಣದಲ್ಲಿ ಕಡಿತ ಮಾಡಿಲ್ಲ. 35 ಪೈಸೆಯಲ್ಲಿ ಇದೆಲ್ಲವೂ ಪಾವತಿಯಾಗಿ ಕೊನೆಗೆ ಉಳಿಯುವ 14 ಪೈಸೆ ಮಾತ್ರ ಮಾರುಕಟ್ಟೆಯ ಬಳಕೆಗೆ ಸಿಗುತ್ತಿದೆ.

ನಿರ್ವಹಣಾ ವೆಚ್ಚ ಅಗತ್ಯ

ಕಲಬುರ್ಗಿ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಹೊರೆ ತಪ್ಪಿಸಲು ರಾಜ್ಯ ಸರ್ಕಾರ ಕೈಗೊಂಡ ತೆರಿಗೆ ಕಡಿತ ಕ್ರಮ ಸ್ವಾಗತಾರ್ಹವಾದುದು. ಆದರೆ, ಎಪಿಎಂಸಿಗಳ ನಿರ್ವಹಣೆಗೂ ಆದಾಯ ಬೇಕಾಗುತ್ತದೆ. ಎಪಿಎಂಸಿಗಳು ಬದುಕಿದ್ದರೆ ಮಾತ್ರ ರೈತರ ಬದುಕು ಸಾಧ್ಯ. ಆದ್ದರಿಂದ ಮಾರುಕಟ್ಟೆಗಳ ಗಾತ್ರದ ಆಧಾರದ ಮೇಲೆ ಸರ್ಕಾರ ನಿರ್ವಹಣಾ ವೆಚ್ಚ ನೀಡಬೇಕು ಎಂಬುದು ಎಪಿಎಂಸಿ ಸಿಬ್ಬಂದಿ ವರ್ಗದ ಕೋರಿಕೆ.

ಸದ್ಯ ಸಂಗ್ರಹಿಸಲಾಗುತ್ತಿರುವ 35 ಪೈಸೆ ಶುಲ್ಕದಲ್ಲಿ ಶಾಸನಬದ್ಧ ವಂತಿಗೆಗಳನ್ನು ತೆಗೆದುಹಾಕಿ, ಎಲ್ಲವೂ ಎಪಿಎಂಸಿ ನಿರ್ವಹಣೆಗೇ ಮೀಸಲಾಗುವಂತೆ ಮಾಡಬೇಕು. ಇದರಿಂದ ಕೂಡ ಕಾರುಕಟ್ಟೆಗಳನ್ನು ನಷ್ಟದಿಂದ ಪಾರು ಮಾಡಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT