ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಗಳ ಮಧ್ಯೆ ಎಪಿಎಂಸಿ ವಹಿವಾಟು

66 ಎಕರೆ ವ್ಯಾಪ್ತಿಯ ಕೃಷಿ ಮಾರುಕಟ್ಟೆ ಸ್ಥಳಾಂತರಕ್ಕೆ ಚಿಂತನೆ
Last Updated 21 ಸೆಪ್ಟೆಂಬರ್ 2020, 10:30 IST
ಅಕ್ಷರ ಗಾತ್ರ

ಕಲಬುರ್ಗಿ: ಈ ಭಾಗದ ಅತಿ ದೊಡ್ಡ ಮಾರುಕಟ್ಟೆಯಾದ ಕಲಬುರ್ಗಿ ಗಂಜ್‌ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯತ್ತ ಮುಖ ಮಾಡಿದೆ.

ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಹೊರಡಿಸಿದ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯಿಂದ ವರ
ಮಾನದ ರೂಪದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬರಬೇಕಿದ್ದ ಸೆಸ್‌ನಲ್ಲಿ ಕಡಿತವಾಗಿದ್ದು ಅಭಿವೃದ್ಧಿ ಚಟುವಟಿಕೆಗಳಿಗೆ ತಡೆ ಬಿದ್ದಂತಾಗಿದೆ.

ದೇಶದಲ್ಲೇ ಅತಿ ಹೆಚ್ಚು ತೊಗರಿ ಉತ್ಪಾದನೆ ಮಾಡುವ ಜಿಲ್ಲೆಗಳ ಪೈಕಿ ಕಲಬುರ್ಗಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಜೊತೆಗೆ, ದಾಲ್‌ ಮಿಲ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ನಿತ್ಯ ನೂರಾರು ಜನ ಕಮಿಷನ್ ಏಜೆಂಟರು, ಹಮಾಲರು ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಸೇರಿರುತ್ತಾರೆ. ಬಂದವರಿಗೆ ವಿಶ್ರಾಂತಿ ಪಡೆದುಕೊಳ್ಳಲು ತಂಗುದಾಣ ಇಲ್ಲ.

ರೈತ ಭವನ ಇದೆಯಾದರೂ ಅದನ್ನು ಕಾರ್ಯಕ್ರಮ ನಡೆಸಲು, ಸಭೆ ಏರ್ಪಡಿಸಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಮಹಿಳೆಯರ ಶೌಚಾಲಯ ವ್ಯವಸ್ಥೆಯೂ ಸರಿಯಾಗಿಲ್ಲ. ದೂರದ ಊರುಗಳಿಂದ ಕೃಷಿ ಉತ್ಪನ್ನಗಳನ್ನು ಹೊತ್ತು ತರುವ ಲಾರಿಗಳು, ಗೂಡ್ಸ್ ವಾಹನಗಳನ್ನು ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ.

ಜಿಲ್ಲೆಯ ಚಿಂಚೋಳಿ, ಆಳಂದ, ಅಫಜಲಪುರದಲ್ಲಿರುವ ಎಪಿಎಂಸಿಗಳಲ್ಲಿ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಚರಂಡಿ ಸಮಸ್ಯೆ ಕಾಡುತ್ತಿದೆ. ರೈತರ ತಂಗುದಾಣಗಳೂ ಹೆಚ್ಚಾಗಿ ಬಳಕೆಯಾಗುತ್ತಿಲ್ಲ.

ತೊಗರಿ, ವಿವಿಧ ಬಗೆಯ ಕಾಳು ಕಡಿಗಳನ್ನು ಕಲಬುರ್ಗಿ ಎಪಿಎಂಸಿಗೆ ತಂದು ಮಾರಾಟಕ್ಕೆ ತರುತ್ತಾರೆ. ಮುಂಚೆಯೇ ಅಡತಿ ಅಂಗಡಿ ಮಾಲೀಕರೊಂದಿಗೆ ಮಾತನಾಡಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ ತಕ್ಷಣ ರೈತರು ತಮ್ಮ ಊರುಗಳಿಗೆ ಮರಳುತ್ತಾರೆ. ಆದರೆ, ಇಲ್ಲಿಯೇ ಇರುವ ವ್ಯಾಪಾರಿಗಳು, ಹಮಾಲರ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಹೆಸರಿಗೆ ಮಾತ್ರ ಇದ್ದು, ಯವಾಗಲೂ ದುರಸ್ತಿಯಲ್ಲೇ ಇರುತ್ತವೆ ಎಂಬುದು ಹಮಾಲರ ಸಂಘಟನೆಯ ಮುಖಂಡರ ಆರೋಪ.

ಇತ್ತೀಚೆಗೆ ಎಪಿಎಂಸಿ ಆವರಣದಲ್ಲಿ ಹಲವು ಮೂಲಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ₹ 20 ಕೋಟಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಮಳೆ ಬಂದರೆ ಉತ್ಪನ್ನಗಳು ಹಾಳಾಗದಂತೆ ಬೃಹತ್ ಪ್ರಮಾಣದ ಶೆಡ್‌ಗಳನ್ನು ಅಳವಡಿಸಲಾಗಿದ್ದು, ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಆದಾಗ್ಯೂ, ಶೌಚಾಲಯ, ಕುಡಿಯುವ ನೀರು, ರಸ್ತೆಯಂತಹ ಮೂಲಸೌಕರ್ಯಗಳ ಕೊರತೆ ಬಗೆಹರಿಸಬೇಕು ಎನ್ನುತ್ತಾರೆ ರೈತ ಮುಖಂಡ ರಾಘವೇಂದ್ರ ಗುರುಜಾಳಕರ.

‘ಸೌಲಭ್ಯಗಳಿಂದ ದೂರ’

ಎಪಿಎಂಸಿಗೆ ನಿತ್ಯ ಸಾವಿರಾರು ಜನ ರೈತರು, ವ್ಯಾಪಾರಿಗಳು, ಕಮಿಷನ್ ಏಜೆಂಟರು, ಹಮಾಲಿಗಳು ಬರುತ್ತಾರೆ. ಅವರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ಘಟಕ ಇದೆಯಾದರೂ ಯಾವಾಗಲೂ ದುರಸ್ತಿಯಲ್ಲಿ ಇರುತ್ತದೆ. ರೈತ ಭವನದಲ್ಲಿರುವ ಶೌಚಾಲಯ ಬಳಕೆ ಮಾಡಲು ಆಗದಷ್ಟು ಕೆಟ್ಟು ಹೋಗಿದೆ. ಹೀಗಾಗಿ, ಕುಡಿಯುವ ನೀರು, ಶೌಚಾಲಯ ಸಮಸ್ಯೆ ಆದಷ್ಟು ಶೀಘ್ರವೇ ಬಗೆಹರಿಸಬೇಕು.

–ಮಾರುತಿ ಮಾನಪಡೆ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ

***

‘ಉಗ್ರಾಣ ವ್ಯವಸ್ಥೆ ಇಲ್ಲ’

ನಿತ್ಯ ಕೋಟ್ಯಂತರ ರೂಪಾಯಿ ಕೃಷಿ ಉತ್ಪನ್ನಗಳ ವಹಿವಾಟು ನಡೆಯುತ್ತಿದ್ದರೂ ರೈತರ ಉತ್ಪನ್ನಗಳನ್ನು ಶೇಖರಿಸಿ ಇಡಲು ಸಂಗ್ರಹಾಗಾರ ಇಲ್ಲ. ಶೀಥಲೀಕರಣ ಘಟಕವೂ ಇಲ್ಲ. ಇದರಿಂದ ರೈತರ ಉತ್ಪನ್ನಗಳು ಬೇಗ ಹಾಳಾಗುತ್ತವೆ. ತುರ್ತಾಗಿ ಧಾನ್ಯಗಳ ಉಗ್ರಾಣ ಮತ್ತು ಶೀಥಲೀಕರಣ ಘಟಕಗಳನ್ನು ಆರಂಭಿಸಬೇಕು.

ಶಿವಕುಮಾರ ಘಂಟಿ, ಅಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ಅಧ್ಯಕ್ಷ

***

‘ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ’

ನಾನು ಕಾರ್ಯದರ್ಶಿಯಾಗಿ ವಹಿಸಿಕೊಂಡ ಬಳಿಕ ಹಲವಾರು ಅಭಿವೃದ್ಧಿ ಕಾರ್ಯಗಳು ಎಪಿಎಂಸಿಯಲ್ಲಿ ಆಗಿವೆ. ರೈತ ಭವನವನ್ನು ರೈತ ಸಂಘಟನೆಗಳ ಬಳಕೆಗೆ ಕೋರಿಕೆ ಮೇರೆಗೆ ಕೊಡುತ್ತೇವೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಿದ್ದೇವೆ. ಆದರೆ, ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆಯ ಬಳಿಕ ವ್ಯಾಪಾರಿಗಳಿಂದ ಬರುತ್ತಿದ್ದ ಸೆಸ್‌ ಪ್ರಮಾಣದಲ್ಲಿ ಶೇ 70ರಷ್ಟು ಕಡಿಮೆಯಾಗಿದ್ದರಿಂದ ಇನ್ನು ಮೇಲೆ ನಿರ್ವಹಣೆ ಕಷ್ಟವಾಗಲಿದೆ.

–ಶೈಲಜಾ ಬಾಗೇವಾಡಿ, ಎಪಿಎಂಸಿ ಕಾರ್ಯದರ್ಶಿ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT