ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನದಾಸೋಹ, ಜ್ಞಾನದಾಸೋಹ ನೀಡಿದ ಮಠಗಳು’

ದಾಸೋಹ ಸೂತ್ರಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರೊ.ಮಹೇಶ್ವರಯ್ಯ
Last Updated 14 ನವೆಂಬರ್ 2019, 16:43 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದಲ್ಲಿರುವ ಮಠಗಳು ಇಲ್ಲದಿದ್ದರೆ ಲಕ್ಷಾಂತರ ಬಡ ಮಕ್ಕಳು ಶಿಕ್ಷಣವನ್ನು ಪೂರೈಸಲು ಆಗುತ್ತಿರಲಿಲ್ಲ. ಸಿದ್ಧಗಂಗಾ ಮಠ ಹಾಗೂ ಶರಣಬಸವೇಶ್ವರ ದಾಸೋಹ ಮಹಾಸಂಸ್ಥಾನ ಸೇರಿದಂತೆ ಹಲವು ಮಠಗಳು ಮಕ್ಕಳಿಗೆ ಜ್ಞಾನದಾಸೋಹ ಹಾಗೂ ಅನ್ನದಾಸೋಹವನ್ನು ನೀಡಿವೆ ಎಂದುಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ ಮಹೇಶ್ವರಯ್ಯ ಅಭಿಪ್ರಾಯಪಟ್ಟರು.

ಶರಣಬಸವ ವಿಶ್ವವಿದ್ಯಾಲಯ ಆವರಣದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಗುರುವಾರ ಶರಣಬಸವ ವಿಶ್ವವಿದ್ಯಾಲಯದ ಶರಣಬಸವೇಶ್ವರ ಕಲಾ ಮತ್ತು ವಿಜ್ಞಾನ ಕಾಲೇಜು, ಶರಣಬಸವೇಶ್ವರ ವಾಣಿಜ್ಯ ಕಾಲೇಜು, ಗೋದುತಾಯಿ ಮಹಿಳಾ ಕಾಲೇಜು, ಎಸ್.ಎಸ್.ಕೆ. ಬಸವೇಶ್ವರ ಯು.ಜಿ. ಮತ್ತು ಪಿ.ಜಿ. ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ದಾಸೋಹ ಸೂತ್ರಗಳ ಒಂದು ದಿನದ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು ಬರೆದ ದಾಸೋಹ ಸೂತ್ರಗಳು ಅಧ್ಯಾತ್ಮಿಕತೆ, ಸಾಮಾಜಿಕ ಸಮಾನತೆ, ಆರ್ಥಿಕ ಪ್ರಗತಿ ಮತ್ತು ಜೀವನದ ಮೌಲ್ಯವನ್ನು ಒಳಗೊಂಡಿವೆ.ಅಪ್ಪ ಅವರು ಬರೆದ ಮಹಾದಾಸೋಹ ಸೂತ್ರಗಳು ಸಮಾಜದ ಸೇವೆ ಮತ್ತು ಸಮರ್ಪಣೆಯ ಹಾಗೂ ಆಧ್ಯಾತ್ಮಿಕ ಆಲೋಚನೆಯ ಅತ್ಯುತ್ತಮ ಅಂಶಗಳನ್ನು ಒಳಗೊಂಡಿವೆ ಎಂದು ಹೇಳಿದರು.

‘ದಾಸೋಹದ ಪರಿಕಲ್ಪನೆ ಈಗಾಗಲೇ ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿರುವುದನ್ನು ಕಾಣುತ್ತೇವೆ. ಸಸ್ಯಗಳು, ಪಕ್ಷಿಗಳು ಮತ್ತು ಪ್ರಾಣಿಗಳು ಪರಸ್ಪರ ಸಹಾಯ ಮಾಡುತ್ತವೆ. ಇತರರ ಅಗತ್ಯಗಳನ್ನು ಪೂರೈಸುವುದನ್ನು ಮಹಾದಾಸೋಹ ಸೂತ್ರಗಳಲ್ಲಿ ನೈಜವಾಗಿ, ಅತೀ ಸುಂದರವಾಗಿ ವಿವರಿಸಲಾಗಿದೆ. ದಾಸೋಹ ಸೂತ್ರಗಳಲ್ಲಿ ಆಹಾರ, ಬಟ್ಟೆ, ಆಶ್ರಯ, ಹಣ ಮತ್ತು ಜ್ಞಾನದಂತಹ ಮೂಲ ಅಗತ್ಯ ಸಂತೃಪ್ತಿ ಮತ್ತು ಸಂತೋಷದ ಬದುಕು ಸಾಗಿಸಲು ಸಹಕಾರಿಯಾಗಿವೆ’ ಎಂದು ತಿಳಿಸಿದರು.

ಉತ್ತರ ಪ್ರದೇಶದ ಲಖನೌನ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಪಕ ಡಾ.ಮನಿಷ್‌ ಕುಮಾರ್ ಗೌರವ ಮಾತನಾಡಿ, ನಾಲ್ಕು ವರ್ಷಗಳ ಭಾರತೀಯ ಜ್ಞಾನಪರಂಪರೆಯಲ್ಲಿ ಹಲವು ಭಾಷೆಗಳನ್ನು ವಿದ್ವಾಂಸರು ಜೀವನದ ವಿವಿಧ ಸ್ತರಗಳ ಬಗ್ಗೆ ತಮ್ಮ ಚಿಂತನೆಗಳನ್ನು ಮಂಡಿಸಿದ್ದಾರೆ. ಸಂಸ್ಕೃತ, ಪಾಲಿ, ಬಂಗಾಲಿ, ಕಾಶ್ಮೀರಿ, ಡೋಗ್ರಾ, ಹಿಂದಿ, ಪಂಜಾಬಿ, ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಆಗಿ ಹೋದ ಲೇಖಕರು ತಾತ್ವಿಕ ಹಾಗೂ ಸಾಹಿತ್ಯಿಕ ಕೊಡುಗೆಯನ್ನು ನೀಡಿದ್ದಾರೆ. 4ನೇ ಶತಮಾನದ ಭರತಮುನಿಯಿಂದ 21ನೇ ಶತಮಾನದ ಗಾಯತ್ರಿ ಚಕ್ರವರ್ತಿ ಸ್ಪಿವಕ್ ವರೆಗೆ ವಿಭಿನ್ನ ಚಿಂತನೆಗಳು ಭಾರತದ ಜ್ಞಾನ ಸಂಪತ್ತನ್ನು ಹೆಚ್ಚಿಸಿವೆ’ ಎಂದರು.

ಉತ್ತರ ಭಾರತದ ಸಂತ ಕಬೀರದಾಸರು ಹಾಗೂ ದಕ್ಷಿಣ ಭಾರತಕ್ಕೆ ಸೇರಿದ ಡಾ.ಶರಣಬಸವಪ್ಪ ಅಪ್ಪ ಅವರು ರಚಿಸಿದ ದಾಸೋಹ ಸೂತ್ರಗಳಿಗೆ ಸಾಕಷ್ಟು ಸಾಮ್ಯಗಳಿವೆ. ವಿಭಿನ್ನ ಕಾಲಘಟ್ಟದಲ್ಲಿ ಬರೆದರೂ ತತ್ವಶಾಸ್ತ್ರದ ಅಂಶಗಳು ಒಂದೇ ಇರುವುದು ಸೋಜಿಗ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಹೊಂದಿದ್ದ ಅಪ್ಪ ಅವರು ಕನ್ನಡದ ಬಗ್ಗೆ ಅಭಿಮಾನ ಹೊಂದಿದ್ದಾರೆ. ಅಪ್ಪ, ದಾಕ್ಷಾಯಣಿ ಅಪ್ಪ, ಅವರ ಪುತ್ರ ದೊಡ್ಡಪ್ಪ ಅಪ್ಪ ಅವರ ಜನ್ಮದಿನ ನವೆಂಬರ್‌ನಲ್ಲೇ ಬಂದಿದೆ. ಮದುವೆ ವಾರ್ಷಿಕೋತ್ಸವವೂ ಇದೇ ತಿಂಗಳು ಇದೆ. ಮುಂಬರುವ ದಿನಗಳಲ್ಲಿ ಕನ್ನಡ ವಿಭಾಗದಿಂದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತದೆ ಎಂದರು.

ವಿ.ವಿ. ಕುಲಪತಿ ಡಾ.ನಿರಂಜನ ನಿಷ್ಠಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT