ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ಹಗರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ವಿಶೇಷ ಅಭಿಯೋಜಕರ ನೇಮಕ: ಆರಗ

Last Updated 6 ಮೇ 2022, 5:51 IST
ಅಕ್ಷರ ಗಾತ್ರ

ಕಲಬುರಗಿ: 545 ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅನುವಾಗುವಂತೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕಟಿಸಿದರು.

ನಗರದ ತಾಜ ಸುಲ್ತಾನಪುರದಲ್ಲಿರುವ ಕೆಎಸ್ಆರ್ ಪಿ 6ನೇ ಪಡೆಯ ಹೆಚ್ಚುವರಿ ತರಬೇತಿ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ವಿಶೇಷ ಮೀಸಲು ಪೊಲೀಸ್ ಕಾನ್ ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ 4ನೇ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಈ ಹಿಂದೆ ಅನೇಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದ್ದರೂ ತನಿಖೆ ಮಾಡಿರಲಿಲ್ಲ. ಒಂದು ವೇಳೆ ತನಿಖೆಯಾಗಿದ್ದರೆ ಈ ಪ್ರಕರಣ ನಡೆಯುತ್ತಿರಲಿಲ್ಲ. ಆದರೆ ಈ ವಿಷಯ ಗೊತ್ತಾದ ಎರಡು ಗಂಟೆಯೊಳಗೆ ವಿಶೇಷ ತಂಡ ರಚಿಸಿ ತನಿಖೆಗೆ ನಿರ್ದೇಶಿಸುವ ಮುಖಾಂತರ ಬದ್ಧತೆ ತೋರಿಸಿದ್ದೇವೆ. ಇಲ್ಲಿಯವರೆಗೆ 48 ಜನರನ್ನು ಬಂಧಿಸಲಾಗಿದೆ. ತನಿಖೆ ಆಳವಾಗಿ ನಡೆಯುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ನಿಶ್ಚಿತ ಎಂದರು.

ಪೊಲಿಸ್ ಇಲಾಖೆ ಬಲವರ್ಧನೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಠಾಣೆಗಳ ಅಭಿವೃದ್ಧಿಗೆ ₹ 200 ಕೋಟಿ ಬಿಡುಗಡೆ ಮಾಡಲಾಗಿದೆ. 400 ವಿಧಿವಿಜ್ಞಾನ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗುವುದು. ನಿವೃತ್ತ ಸಿಬ್ಬಂದಿಗೆ ವೈದ್ಯಕೀಯ ವೆಚ್ಚ ಭರಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಪ್ರಕಟಿಸಿದರು.

ಬುಡಕ್ಕೆ ಬಂದಿದೆ: ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೋಟಿಸ್ ನೀಡಿದ್ದರೂ ತನಿಖೆಗೆ ಸಹಕರಿಸುತ್ತಿಲ್ಲ. ಅವರ ಆಪ್ತರೇ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಅವರ ಬುಡಕ್ಕೆ ಬಂದಿದೆ. ಹೀಗಾಗಿ ಬರೀ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ಬಳಿ ಇದ್ದ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದರು.

ಅಡ್ಡದಾರಿ ಹಿಡಿಯಬೇಡಿ: ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಪರಿಶ್ರಮದಿಂದ ಇಲಾಖೆಗೆ ಸೇರ್ಪಡೆಯಾಗಿದ್ದೀರಿ, ಹೀಗಾಗಿ ಮನಸ್ಸು ಹಾಗೂ ದೈಹಿಕವಾಗಿ ಎರಡು ವಿಧದಿಂದ ಗಟ್ಟಿಯಾಗಿ ಸೇವೆ ಸಲ್ಲಿಸಬೇಕು. ಪ್ರಮುಖವಾಗಿ ಯಾವುದೇ ಸಂದರ್ಭದಲ್ಲಿ ಅಡ್ಡದಾರಿ ಹಿಡಿಯಬೇಡಿ. ಅಡ್ಡ ದಾರಿ ಹಿಡಿದರೆ ವೈಯಕ್ತಿಕವಲ್ಲದೇ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕೆಎಸ್ಆರ್ ಪಿ ಕಮಾಂಡೆಂಟ್ ಹಾಗೂ ಹೆಚ್ಚುವರಿ ತರಬೇತಿ ಶಾಲೆಯ ಪ್ರಾಂಶುಪಾಲ ಬಸವರಾಜ ಜಿಳ್ಳೆ ವರದಿ ವಾಚನ ಮಾಡಿದರು.

ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಕಲಬುರಗಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸ್ಪಿ ಇಶಾ ಪಂತ್ ಭಾಗವಹಿಸಿದ್ದರು.

209 ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT