ಕಲಬುರಗಿ: ‘ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕಷ್ಟು ಗೌರವ ಧನ ನೀಡದೆ ಅನ್ಯಾಯ ಮಾಡುತ್ತಿದೆ’ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ರಾಜ್ಯ ಸಮಿತಿ ಸದಸ್ಯೆ ಎಚ್.ಉಮಾದೇವಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಬೆಳಿಗ್ಗೆಯಿಂದ ಸಂಜೆವರೆಗೆ ಆಶಾ ಕಾರ್ಯಕರ್ತೆಯರಿಂದ ಹತ್ತಾರು ಕೆಲಸ ಮಾಡಿಸಿಕೊಳ್ಳುವ ಸರ್ಕಾರವು, ಅವರಿಗೆ ಪೂರ್ಣ ಪ್ರಮಾಣದಲ್ಲಿ ಪ್ರೋತ್ಸಾಹಧನ ಕೊಡುತ್ತಿಲ್ಲ. ನಮ್ಮನ್ನು ಕೂಡ ಸರ್ಕಾರಿ ನೌಕರರಂತೆ ಪರಿಗಣಿಸಿ, ಸೌಲಭ್ಯ ನೀಡಬೇಕು. ಕನಿಷ್ಠ ಕಾರ್ಮಿಕರ ಮಾನ್ಯತೆಯಾದರೂ ನೀಡಲಿ’ ಎಂದು ಒತ್ತಾಯಿಸಿದರು.
‘ಆಶಾ ಕಾರ್ಯಕರ್ತೆಯರು ಗೌರವಧನಕ್ಕೆ ಕೆಲಸ ಮಾಡುತ್ತಿರುವುದರಿಂದ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮ್ಮ ದುಡಿಮೆ ಮತ್ತು ಶಕ್ತಿಯನ್ನು ಶೋಷಣೆಗೆ ಒಳಪಡಿಸುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮತ್ತೊಂದು ಬಗೆಯ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಸೇವೆಗಳಿಗಾಗಿ ನೇಮಿಸಿಕೊಂಡು ಸರ್ಕಾರದ ಹಲವು ಸಮೀಕ್ಷೆಗಳು, ಯೋಜನೆಗಳ ಅನುಷ್ಠಾನಕ್ಕೆ ಹಚ್ಚುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೂ ನಾವೇ ಬೇಕು. ಆದರೆ, ಪ್ರೋತ್ಸಾಹ ಧನ ಕೇಳುವಂತಿಲ್ಲ. ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ₹15,000 ವೇತನ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.
‘ಬಂಡವಾಳಶಾಹಿಗಳು ತಮ್ಮ ಸರಕು ಮತ್ತು ಸೇವೆಗಳ ಮಾರಾಟ ಹೆಚ್ಚಳಕ್ಕೆ ಮಹಿಳೆಯರನ್ನು ಬಳಸಿಕೊಂಡು ಅಶ್ಲೀಲ ಬಗೆಯ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಸಣ್ಣ ಮಕ್ಕಳಿಂದ ವೃದ್ಧರವರೆಗಿನ ಮನಸ್ಸು ಮಲಿನವಾಗುತ್ತಿದೆ. ಇದರಿಂದ ಅಪರಾಧ ಕೃತ್ಯಗಳು ಹೆಚ್ಚಳವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಶರ್ಮಾ ಮಾತನಾಡಿ, ‘ಆಶಾ ಕಾರ್ಯಕರ್ತೆಯರ ವೇತನ ಮತ್ತು ಸೌಲಭ್ಯಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ತಾಲ್ಲೂಕು, ಜಿಲ್ಲಾ ಸಮ್ಮೇಳನದ ಮೂಲಕ ರಾಜ್ಯ ಸಮ್ಮೇಳನಕ್ಕೆ ಸಿದ್ಧರಾಗುತ್ತಿದ್ದೇವೆ. ರಾಜ್ಯ ಸಮ್ಮೇಳನದಲ್ಲಿ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಲಾಗುವುದು’ ಎಂದರು.
ಸಂಘಟನೆಯ ಪ್ರಮುಖರಾದ ವಿ.ಜಿ.ದೇಸಾಯಿ, ಎಂ.ಜಿ.ರಾಘವೇಂದ್ರ, ಶಿವಲಿಂಗಮ್ಮ ಹಾಜರಿದ್ದರು. ಮಳೆಯ ನಡುವೆಯೂ ವಿವಿಧ ತಾಲ್ಲೂಕುಗಳ ನೂರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
- ಪದಾಧಿಕಾರಿಗಳ ಆಯ್ಕೆ
ಇದೇ ವೇಳೆ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿಲಾಯಿತು. ವಿ.ಜಿ.ದೇಸಾಸಿ (ಗೌರವಾಧ್ಯಕ್ಷ) ಶಿವಲಿಂಗಮ್ಮ ನಂದೂರ (ಅಧ್ಯಕ್ಷೆ) ಸುಗಂಧಾ ಚಿತ್ತಾಪುರ ನಾಗವೇಣಿ ಚಿಂಚೋಳಿ ತಾಯಮ್ಮ ಜೇವರ್ಗಿ ಲಕ್ಷ್ಮಿ ಮಳಖೇಡ ಭಾಗ್ಯಶ್ರೀ ಕಡಗಂಚಿ ಕವಿತಾ ಮಣ್ಣೂರು (ಉಪಾಧ್ಯಕ್ಷರು) ಗೀತಾ ಜೇವರ್ಗಿ (ಕಾರ್ಯದರ್ಶಿಗಳು) ಮಹಾಸತಿ ಚಿತ್ತಾಪುರ ಯಶೋಧಾ ಚಿಂಚೋಳಿ ವಿಜಯಲಕ್ಷ್ಮಿ ಕಮಲಾಪುರ ನಾಗಮ್ಮ ಮದನಾ ದೇವಮ್ಮ ಕೋರಳ್ಳಿ (ಸಹ ಕಾರ್ಯದರ್ಶಿಗಳು) ಹಾಗೂ 13 ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.