ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮಾಸಿಕ ₹ 12 ಸಾವಿರ ಗೌರವಧನಕ್ಕೆ ಒತ್ತಾಯಿಸಿ ಪ್ರತಿಭಟನೆ

Last Updated 25 ಅಕ್ಟೋಬರ್ 2021, 16:12 IST
ಅಕ್ಷರ ಗಾತ್ರ

ಕಲಬುರಗಿ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತುರಾಜ್ಯದ ಪ್ರೋತ್ಸಾಹಧನ ಮತ್ತುಗೌರವಧನ ಸೇರಿಸಿ ವಿವಿಧ ರಾಜ್ಯಗಳಂತೆ ಕನಿಷ್ಟ ₹ 12 ಸಾವಿರ ನಿಗದಿ ಮಾಡಬೇಕು. ಅವರ ಕಾರ್ಯಕ್ಷೇತ್ರದ ಜನಸಂಖ್ಯೆಗೆ ಅನುಗುಣವಾಗಿ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕೋವಿಡ್–19 ನಿಯಂತ್ರಣ ಚಟುವಟಿಕೆಗಳಲ್ಲಿ ಡಾಟಾ ತುಂಬಿಸುವುದು, ಲಸಿಕಾ ಕೇಂದ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು, ಗಂಟಲು ದ್ರವ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾಗಳನ್ನು ಭಾಗಿ ಮಾಡಿಕೊಳ್ಳುತ್ತಿದ್ದಾರೆ. ನಗರ ಪ್ರದೇಶದ ಆಶಾಗಳನ್ನು ಕೋರ್ಟ್, ರೈಲು–ಬಸ್ ನಿಲ್ದಾಣಗಳಲ್ಲಿ, ವಿವಿಧ ಪರೀಕ್ಷಾ ಕೇಂದ್ರಗಳಿಗೆ ಬೆಳಗಿನಿಂದ ಸಂಜೆವರೆಗೆ ನಿಯೋಜಿಸುವರು. ಇದಕ್ಕೆ ಇವರೇ ಸಾರಿಗೆ ವೆಚ್ಚ ಭರಿಸಿ ಹೋಗಬೇಕು. ಯಾವುದೇ ಭತ್ಯೆ ನೀಡದೇ ಬರಿ ಕೈಯಲ್ಲಿ ಮರಳಬೇಕಾಗಿದೆ ಎಂದು ಆರೋಪಿಸಿದರು.

ಕೋವಿಡ್‌ ಅವಧಿಯಲ್ಲಿಯ ವಿಶೇಷ ಕೆಲಸಗಳಿಗೆ ವಿಶೇಷ ಮಾಸಿಕ ಭತ್ಯೆ ₹ 5 ಸಾವಿರವನ್ನು ರಾಜ್ಯದಿಂದ ಘೋಷಿಸಬೇಕು. ಅಥವಾ ವಿವಿಧ ವಿಶೇಷ ಕೆಲಸಗಳಿಗೆ ದಿನಭತ್ಯೆ, ಪ್ರಯಾಣ ಭತ್ಯೆಯಾಗಿ ದಿನಕ್ಕೆ ₹ 500 ನೀಡಬೇಕು. ರಾಜ್ಯದಾದ್ಯಂತ ಆಶಾಗಳಿಗೆ ಹೆಚ್ಚುತ್ತಿರುವ ಒತ್ತಡ ತಗ್ಗಿಸಬೇಕು. ಕೋವಿಡ್ ಲಸಿಕೆ ಕೆಲಸ, ಪದೇ ಪದೇ ಲಸಿಕೆ ಹಾಕಿಸಿಕೊಂಡವರ ಸರ್ವೆಗಳು, ಕೋವಿಡ್–19 ರೋಗಿಗಳ ಸರ್ವೆ, ಇಲಾಖೆಯ ವಿವಿಧ ಸರ್ವೆಗಳು, ತಾಯಿ–ಮಗು ಆರೈಕೆ ಕೆಲಸಗಳು, ಗ್ರಾಮ ನೈರ್ಮಲ್ಯದ ಕೆಲಸಗಳು ಇತ್ಯಾದಿ ಇವುಗಳಲ್ಲಿ ನಿಗದಿತ ದಿನಗಳಂದು ನಿಗದಿತ ಕೆಲಸ ಮಾಡಲು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರಿಗೆ ಈ–ಸಮೀಕ್ಷೆ ಮಾಡಲು ಕೂಡಲೇ ಮೊಬೈಲ್, ಟ್ಯಾಬ್‌ ಜೊತೆ ಇಂಟರ್ನೆಟ್ ಡಾಟಾ ಒದಗಿಸಬೇಕು. ಆಶಾ ಕಾರ್ಯಕರ್ತೆಯರಲ್ಲಿಯಾರಿಗೆ ಮೊಬೈಲ್, ಟ್ಯಾಬ್ ಬಳಸಲು ಆಗುವುದಿಲ್ಲವೊ ಅಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.
ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ ಸೇವೆಯಲ್ಲಿರುವ ಆಶಾ ಕಾರ್ಯಕರ್ತೆ ತೀವ್ರ ಕಾಯಿಲೆಗೆ ಒಳಗಾದಲ್ಲಿ ಮತ್ತುಅಪಘಾತಕ್ಕೆ ಈಡಾದಲ್ಲಿ ಅವರಿಗೆ ಉಚಿತ ಚಿಕಿತ್ಸೆ ಮತ್ತು ಪರಿಹಾರ ನೀಡಬೇಕು.

ಕೋವಿಡ್‌ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 20ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಸಾವಿಗೀಡಾಗಿದ್ದಾರೆ. ಈಗಾಗಲೇ ಘೋಷಿಸಿರುವಂತೆ ₹ 50 ಲಕ್ಷ ಪರಿಹಾರವನ್ನು ಕುಟುಂಬಗಳಿಗೆ ಒದಗಿಸಬೇಕು ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಿ. ದೇಸಾಯಿ, ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ, ಜಿಲ್ಲಾ ಮುಖಂಡರಾದ ಭಾಗಣ್ಣ ಬಿ ಬುಕ್ಕಾ, ಮಲ್ಲಿನಾಥ ಸಿಂಘೆ, ಆಶಾ ಕಾರ್ಯಕರ್ತೆಯರಾದ ಜಯಶ್ರೀ ದಂಡೋತಿ, ಮರೆಮ್ಮಾ ಕೊಟಗಾರ, ಭಾಗ್ಯ ಸಾವಳಗಿ, ಮಲ್ಲಮ್ಮಾ ಹೀರಾಪೂರ, ಕವಿತಾ ತೆಗನೂರ, ಯಲ್ಲಮ್ಮಾ ಕಲಬುರಗಿ, ಸುವರ್ಣಾ ಸುಲೇಪೇಟ, ವಿದ್ಯಾವತಿ ಸುಲೇಪೇಟ, ಕವಿತಾ ಮಣ್ಣೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT