ಸೋಮವಾರ, ನವೆಂಬರ್ 30, 2020
26 °C
ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ಮುಂದುವರಿದ ಲಾಬಿ; ನ.15ರೊಳಗೆ ನೇಮಕ ಸಾಧ್ಯತೆ

ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಹುದ್ದೆ: ಅಗಸರ, ಮೈಲಾರಪ್ಪ ಮಧ್ಯೆ ಪೈಪೋಟಿ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವರ್ಷದ ಹಿಂದೆಯೇ ತೆರವಾಗಿರುವ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಪ್ರೊ.ದಯಾನಂದ ಅಗಸರ ಹಾಗೂ ಪ್ರೊ. ಬಿ.ಸಿ. ಮೈಲಾರಪ್ಪ ಅವರ ಹೆಸರುಗಳು ಮುಂಚೂಣಿಯಲ್ಲಿದ್ದು, ನವೆಂಬರ್ 15ರೊಳಗಾಗಿ ಕುಲಪತಿ ನೇಮಕವಾಗುವ ಸಾಧ್ಯತೆ ಇದೆ.

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕುಲಪತಿ ನೇಮಕ ಪರಿಣಾಮ ಬೀರಬಹುದು ಎಂಬ ಆತಂಕದಿಂದ ನೇಮಕ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಬಿಜೆಪಿಗೆ ಆಪ್ತರಾದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಮೈಲಾರಪ್ಪ ಅವರನ್ನೇ ಕುಲಪತಿಯನ್ನಾಗಿ ನೇಮಕ
ಮಾಡಲಾಗುತ್ತಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಮಾತುಗಳು ವಿ.ವಿ. ಅಂಗಳದಲ್ಲಿ ಇತ್ತೀಚಿನವರೆಗೂ ಹಬ್ಬಿದ್ದವು. ಆದರೆ, ಪಟ್ಟುಬಿಡದ ಗುಲಬರ್ಗಾ ವಿ.ವಿ. ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ದಯಾನಂದ ಅಗಸರ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಆರ್‌ಎಸ್‌ಎಸ್‌ ಪ್ರಮುಖರೊಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಕುಲಪತಿ ಹುದ್ದೆಯನ್ನು ತಮಗೇ ಕೊಡಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ, ಇದೀಗ ವಿ.ವಿ. ಚುಕ್ಕಾಣಿಯನ್ನು ದಯಾನಂದ ಅಗಸರ ಹಿಡಿಯುತ್ತಾರೋ, ಮೈಲಾರಪ್ಪ ಕೈವಶ ಮಾಡಿಕೊಳ್ಳುತ್ತಾರೋ ಎಂಬ ಕುತೂಹಲ ಶುರುವಾಗಿದೆ.

ಏತನ್ಮಧ್ಯೆ ಇದೇ 20ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ನಡೆಸಲು ಉದ್ದೇಶಿಸಲಾಗಿದ್ದು, ನೂತನ ಕುಲಪತಿಗಳ ನೇತೃತ್ವದಲ್ಲಿ ನಡೆಯುತ್ತದೋ ಅಥವಾ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅವರು ನಡೆಸುತ್ತಾರೆಯೋ ಎಂಬ ಜಿಜ್ಞಾಸೆಯೂ ನಡೆದಿದೆ.

ಕುಲಪತಿ ಹುದ್ದೆಯ ಆಕಾಂಕ್ಷಿಯೊಬ್ಬರು ಸಂದರ್ಶನಕ್ಕೆ ತಮ್ಮನ್ನು ಪರಿಗಣಿಸಿಲ್ಲ ಎಂದು ಆರೋಪಿಸಿ ಹೈಕೋರ್ಟ್‌ ಮೆಟ್ಟಿಲು ಏರಿದ್ದರಿಂದ ಮತ್ತೊಮ್ಮೆ ಸಂದರ್ಶನ ನಡೆಸುವಂತೆ ಶೋಧನಾ ಸಮಿತಿಗೆ ನ್ಯಾಯಪೀಠವು ಸೂಚಿಸಿತ್ತು. ಆ ಪ್ರಕ್ರಿಯೆಯೂ ಮುಗಿದು ಮೂವರ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಅವರ ಪೈಕಿ ಅಗಸರ ಹಾಗೂ ಮೈಲಾರಪ್ಪ ಅವರು ಹೆಚ್ಚು ಪ್ರಭಾವ ಬೀರುತ್ತಿದ್ದಾರೆ.

ಯಾರೇ ಕುಲಪತಿಯಾದರೂ ಮೊದಲ ಆದ್ಯತೆಯನ್ನು ಬೋಧಕ ಹಾಗೂ ಬೋಧಕ ಸಿಬ್ಬಂದಿಯ ನೇಮಕಾತಿಗೆ ನೀಡಲೇಬೇಕಾಗಿದೆ. ಇಲ್ಲದಿದ್ದರೆ ವಿದ್ಯಾರ್ಥಿಗಳು–ಪ್ರಾಧ್ಯಾಪಕರ ಅನುಪಾತ ಕಡಿಮೆಯಾಗಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಅನುದಾನವನ್ನೇ ಬಂದ್ ಮಾಡಿದರೂ ಅಚ್ಚರಿಯಲ್ಲ ಎಂದು ಗುಲಬರ್ಗಾ ವಿ.ವಿ. ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರೊಬ್ಬರು ಆತಂಕದಿಂದ ಹೇಳಿದರು.

ಗೌರವ ಡಾಕ್ಟರೇಟ್‌ಗೆ 20 ಅರ್ಜಿ

ನವೆಂಬರ್ 20ರಂದು ನಡೆಯಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿ ಪಡೆಯಲು 20 ಅರ್ಜಿಗಳು ಬಂದಿದ್ದು, ಅವುಗಳನ್ನು  ತಜ್ಞರ ಸಮಿತಿ ಎದುರು ಮಂಡಿಸುವ ನಿರ್ಧಾರವನ್ನು ಮಂಗಳವಾರ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಮಿತಿ ಆಯ್ಕೆ ಮಾಡಿದ ಹೆಸರುಗಳನ್ನು ವಿ.ವಿ. ಕುಲಾಧಿಪತಿಗಳೂ ಆದ ರಾಜ್ಯಪಾಲರಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ವಿ.ವಿ. ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ‘ಪ್ರಜಾವಾಣಿ’ಗೆ ತಿಳಿಸಿದರು.

1 ಸಾವಿರ ಆಸನ ಸಾಮರ್ಥ್ಯದ ಸಭಾಂಗಣದಲ್ಲಿ ಕೋವಿಡ್‌ ಪ್ರಯುಕ್ತ 250 ಜನರಿಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಪಿಎಚ್‌.ಡಿ., ವಿವಿಧ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳು 200 ಜನರಿದ್ದು, ವಿವಿಧ ನಿಕಾಯಗಳ ಡೀನರು ಹಾಗೂ ಆಹ್ವಾನಿತರು 50 ಜನರಿಗೆ ಅವಕಾಶ ನೀಡುವ ಚಿಂತನೆ ಇದೆ. ಬೆಂಗಳೂರಿನ ಐಸೆಕ್‌ನ ನಿರ್ದೇಶಕ ಪ್ರೊ.ಮಹಾದೇಶ್ವರನ್ ಅವರು ಆನ್‌ಲೈನ್‌ ಮೂಲಕ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು