ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದೆಯರಿಗೆ ಕನ್ನಡಿಯಾದ ‘ವರ್ಣಿಕಾ’

ಐದು ದಿನಗಳ ಮಹಿಳಾ ರಾಷ್ಟ್ರೀಯ ಕಲಾ ಪ್ರದರ್ಶನಕ್ಕೆ ಚಾಲನೆ, ಪ್ರಶಸ್ತಿ ಪ್ರದಾನ
Last Updated 13 ಮಾರ್ಚ್ 2022, 15:23 IST
ಅಕ್ಷರ ಗಾತ್ರ

ಕಲಬುರಗಿ:ವರ್ಣಿಕಾ ಸಮಕಾಲೀನ ಮಹಿಳಾ ಕಲಾವಿದರ ಸಂಸ್ಥೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ, ನಗರದ ಬಾಪೂಗೌಡ ದರ್ಶನಾಪುರ ರಂಗಮಂದಿರದಲ್ಲಿ ಆಯೋಜಿಸಿದ ಐದು ದಿನಗಳ ಅಖಿಲ ಭಾರತ ಮಹಿಳಾ ರಾಷ್ಟ್ರೀಯ ಕಲಾ ಪ್ರದರ್ಶನ ಕಲಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ರಾಜ್ಯವೂ ಸೇರಿದಂತೆ ಆಂಧ್ರ, ಗುಜರಾತ, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಭಾಗದಿಂದಲೂ ಕಲಾವಿದೆಯರು ಇದರಲ್ಲಿ ಪಾಲ್ಗೊಂಡರು. ವೈವಿಧ್ಯಮಯ ವಿಷಯ, ಚಿಂತನೆಗಳನ್ನು ಒಳಗೊಂಡ 200ಕ್ಕೂ ಹೆಚ್ಚು ಪೇಂಟಿಂಗ್‌ಗಳು ಕಣ್ಣು– ಮನ ಸೆಳೆಯುವಂತಿವೆ.

ಬೆಂಗಳೂರಿನ ಕಲಾವಿದೆರಚನಾ ಗೋಪಾಕುಮಾರ ಅವರು ಬಿಡಿಸಿದ ಸಮಕಾಲೀನ ವಸ್ತು ಹೊಂದಿದ ಎರಡು ಪೇಂಟಿಂಗ್‌ಗಳು ತೀರ್ಪುಗಾರರ ಮನ ಸೆಳೆದವು. ಮೀನಿಗೆ ಗಾಳ ಹಾಕುವ ಹಕ್ಕಿ, ಅದನ್ನು ತದೇಕಚಿರತ್ತದಿಂದ ನೋಡುವ ಜೋಡಿಬೆಕ್ಕು ಬಳಸಿ ಮಾಡಿದ ’ಕ್ಯಾಟಸ್ಟ್ರೊಫಿ‘ ಕಲಾಕೃತಿ ಮನೋಜ್ಞವಾಗಿದೆ. ಪ್ರಾಣಿ, ಪಕ್ಷಿಗಳ ರಕ್ಷಣೆಯ ಕುರಿತು ಅರಿವು ಮೂಡಿಸುವ ಈ ಕಲಾವಿದೆ ಬೆಕ್ಕನ್ನೇ ತಮ್ಮ ಎಲ್ಲ ಕಲಾಕೃತಿಗಳ ವಸ್ತುಪ್ರಧಾನ ಮಾಡಿಕೊಂಡಿದ್ದು ವಿಶೇಷ.

ಪೌಂಟನ್‌ ಪೆನ್ನಿನಿಂದಲೇ ಅದ್ಭುತ ಕಲಾಕೃತಿಗಳನ್ನು ಚಿತ್ರಿಸಿದ ಕಲಬುರಗಿಯ ಪೂಜಾ ಮಹೇಂದ್ರ ಚಿಂದೆ ಗಮನ ಸೆಳೆದರು. ಯಾವುದೇ ವರ್ಣಗಳನ್ನು ಬಳಸದೇ ಇಂಕ್‌ಪೆನ್ನಿನ ಮಾಧ್ಯಮದಲ್ಲಿ ಅವರು ಬಿಡಿಸಿದ ಪ್ರಕೃತಿಯ ನೋಟ ಪ್ರೇಕ್ಷಕರನ್ನು ಸೆಳೆದವು.

ಯುವ ಕಲಾವಿದೆ ಬೆಂಗಳೂರಿನ ಕಲಾವಿದೆ ಪ್ರಾಚಿ ಸಹಸ್ರಬುದ್ಧೆ ‘ಪ್ರಕೃತಿ ಹಾಗೂ ಹೆಣ್ಣಿನ ಮಧ್ಯೆ ಇರುವ ಸಾಮ್ಯತೆ’ ಕುರಿತು ವರ್ಣಿಸಿದ ಪೇಂಟಿಂಗ್‌ ಇನ್ನೂ ವಿಶೇಷವೆನಿಸುತ್ತದೆ. ಕೆಂಬಣ್ಣದಲ್ಲಿ ಮಿಂದೆದ್ದ ಮರವೊಂದಕ್ಕೆ ಹೆಣ್ಣಿನ ಅಂಗಾಗಳ ರೂಪ ನೀಡಿದ ಕಲಾವಿದೆ; ಹೆಣ್ಣಿನ ಸಹನಶೀಲತೆ, ಸಂಕಷ್ಟಕ್ಕೆ ಕನ್ನಡಿ ಹಿಡಿದಿದ್ದಾರೆ.

ಯಾದಗಿರಿಯ ಗಾಯತ್ರಿ ಮಂತ ಅವರ ವಿಷ್ಣು– ಲಕ್ಷ್ಮಿ, ಮಹಿಷಾಸುರ ಮರ್ದಿನಿ ರೇಖಾಚಿತ್ರಗಳೂ ಪ್ರಶಸ್ತಿಗೆ ಪಾತ್ರವಾದವು. ಯಾವುದೇ ವರ್ಣ ಬಳಸದೇ ಕೇವಲ ಪೆನ್ಸಿಲ್‌ ಮಾಧ್ಯಮದಿಂದಲೇ ಏನೆಲ್ಲ ಸಾಧ್ಯತೆಗಳು ಇವೆ ಎಂಬುದಕ್ಕೆ ಇವರ ಕಲಾಕೃತಿಗಳು ಸಾಕ್ಷಿಯಾದವು. ವರ್ಣಗಳಿಗಿಂದ ಹೆಚ್ಚು ಸಾಧ್ಯತೆಗಳು ರೇಖೆಗಳಲ್ಲೇ ಇದೆ ಎಂಬುದು ಅವರ ವಿವರಣೆ.

ಉದ್ಘಾಟನೆ: ವಿಶಿಷ್ಟವಾಗಿ ನಿರ್ಮಿಸಿದ್ದ ವೇದಿಕೆಯಲ್ಲಿ ಪ್ರದರ್ಶನ ಉದ್ಘಾಟಿಸಿದ ಹಿರಿಯ ಕಲಾವಿದ ಜೆ.ಎಸ್‌.ಖಂಡೇರಾವ್‌ ಮಾತನಾಡಿ, ‘ಈ ರೀತಿ ಹೆಣ್ಣುಮಕ್ಕಳೇ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದು ರಾಜ್ಯದಲ್ಲಿ ಇದೇ ಮೊದಲು. ಇಂಥ ಪ್ರಯತ್ನಕ್ಕೆ ಕೈಹಾಕಿದ ‘ವರ್ಣಿಕಾ’ ತಂಡದ ಅಧ್ಯಕ್ಷೆ ಮಹಾಂತೇಶ್ವರ,ಸಂಚಾಲಕಿ ನಯನಾ ಹಾಗೂ ಅವರ ಕಲಾಬಳಗಕ್ಕೆ ಅಭಿನಂದನೆ ಸಲ್ಲಿಸಲೇಬೇಕು. ಯಾವುದೇ ಕಲಾಕೃತಿ ಶ್ರೇಷ್ಠ ಅನ್ನಿಸಲು ಐದು ಅಂಶಗಳು ಮುಖ್ಯ. ಪೇಂಟಿಂಗ್‌ನ ಸ್ಥಳಾವಕಾಶ, ವಿಷಯ, ಆಕಾರ, ಸ್ವರೂಪ ಮತ್ತು ಸಂಯೋಜನೆ ಬಹಳ ಮುಖ್ಯ. ಇಲ್ಲಿ ಪೇಂಟಿಂಗ್‌ನಲ್ಲಿ ಐದೂ ಅಂಶಗಳು ಎದ್ದುಕಾಣುತ್ತಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಲಲಿತಕಲಾ ಅಕಾಡೆಮಿ ಆಡಳಿತಾಧಿಕಾರಿ ಚಿ.ಸು. ಕೃಷ್ಣಶೆಟ್ಟಿ ಮಾತನಾಡಿ, ‘ದೇಶದ ಎಲ್ಲ ಕಾಲೇಜುಗಳ ಪ್ರವೇಶ ಗಮನಿಸಿದರೆ ಶೇ 70ರಷ್ಟು ಮಹಿಳೆಯರೇ ಇದ್ದಾರೆ. ಲೆಕ್ಕಾಚಾರದ ಪ್ರಕಾರ ಮುಂದಿನ ದಿನಗಳಲ್ಲಿ ಮಹಿಳೆಯರೇ ಈ ದೃಶ್ಯಕಲಾಲೋಕ ಆಳುವುದರಲ್ಲಿ ಸಂದೇಹವಿಲ್ಲ’ ಎಂದರು.

ಸಂಸ್ಥೆ ಅಧ್ಯಕ್ಷೆ ಮಹಾಂತೇಶ್ವರಿ ಎ. ಕಂಠಿ, ಸಂಚಾಲಕಿ ನಯನಾ ಬಾಬುರಾವ್‌ ವೇದಿಕೆ ಮೇಲಿದ್ದರು. ವರ್ಣ ಕಿರಣ ಧರ್ಮಗಿರಿ ಸ್ವಾಗತಗೀತೆ ಹಾಡಿದರು. ವಿದ್ಯಾಪ್ರಸಾದ ಹಾಗೂ ಪೂಜಾ ಚಿಂದೆ ನಿರೂಪಿಸಿದರು.

ಮಾರ್ಚ್‌ 17ರವರೆಗೂ ಈ ಪೇಂಟಿಂಗ್‌ ಪ್ರದರ್ಶನ ಇರುತ್ತದೆ. ಐದೂ ದಿನಗಳವರೆಗೆ ನಿರಂತರ ಕಲಾ ಸಂವಾದ ಕೂಡ ಇದೆ.

*

ಪ್ರಶಸ್ತಿ ಪಡೆದ ಕಲಾವಿದೆಯರು

ಆಂಧ್ರಪ್ರದೇಶದ ವರ್ಣಚಿತ್ರ ಕಲಾವಿದೆ ಬಿ.ಪದ್ಮರೆಡ್ಡಿ ಅವರಿಗೆ ‘ವರ್ಣಶ್ರೀ ವರ್ಣಿಕಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅತ್ಯುತ್ತಮ ಮುದ್ರಣ ಕಲಾಕೃತಿ ಪ್ರಶಸ್ತಿಯನ್ನು ನಿಶಾ ಧಿನ್ವಾ (ರಾಜಸ್ತಾನ), ರಚನಾ ಗೋಪಾ ಕುಮಾರ (ಬೆಂಗಳೂರು), ಅನುಶ್ರೀ ಕಯಾಲ್ (ಪಶ್ಚಿಮ ಬಂಗಾಳ), ನೀತಾ ಮಹಾದೇವ ವ್ಯವಹಾರೆ (ಅಖಿಲಖೇಡ್), ಅತ್ಯುತ್ತಮ ವರ್ಣಚಿತ್ರ ಪ್ರಶಸ್ತಿ– ಪೂಜಾ ಅಶೋಕ ಪಲಸಂಬಿಕರ್ (ಮುಂಬೈ), ನಂದಿನಿ ತಾಲೂಕ್ದರ್ (ಪಶ್ಚಿಮ ಬಂಗಾಳ), ಉಮಾ ರಾಯ್ (ಪಶ್ಚಿಮ ಬಂಗಾಳ), ಪೂನಮ್ ರಾಜು ಬಸವ (ಗದಗ), ಅರ್ಪಿತಾ ಆರ್.ಜಿ (ಬೆಂಗಳೂರು). ಅತ್ಯುತ್ತಮ ರೇಖಾಚಿತ್ರ ಪ್ರಶಸ್ತಿ– ಗಾಯತ್ರಿ ಮಂತ (ಯಾದಗಿರಿ), ಜಾಸ್ಮಿನ್ ಕೌರ್ (ದೆಹಲಿ). ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿ– ಋತುಜಾ ದಿಲೀಪ್ ಜಂಗಮ (ಮುಂಬೈ) ಅವರಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT