ಭಾನುವಾರ, ಆಗಸ್ಟ್ 25, 2019
23 °C
‘ಮಹಾದೇವಿಯಕ್ಕಗಳ ಸಮ್ಮೇಳನ–12’ ಸಮಾರೋಪ, ಗಣ್ಯ ಮಹಿಳೆಯರಿಗೆ ಸನ್ಮಾನ

‘ಕಾಯಕದಲ್ಲಿದೆ ಮಾನವೀಯತೆ ತುಡಿತ’

Published:
Updated:
Prajavani

ಕಲಬುರ್ಗಿ: ‘ಲಿಂಗದ ಮಹತ್ವ ಹೇಳಿಕೊಟ್ಟ ಬಸವಾದಿ ಶರಣರೇ ಲಿಂಗವ ಪೂಜಿಸಿ ಫಲವೇನಯ್ಯ ಎಂದೂ ಹೇಳಿದ್ದಾರೆ. ಕಾಯಕ ಹಾಗೂ ದಾಸೋಹ ತತ್ವಗಳ ಆಚರಣೆಯಿಂದ ಮಾತ್ರ ಸಮ ಸಮಾಜ ಸಾಧ್ಯ ಎಂಬ ತತ್ವ ಇದರಲ್ಲಿ ಅಡಗಿದೆ’ ಎಂದು ಪ್ರಾಧ್ಯಾಪಕಿ ಡಾ.ಶಾರದಾ ಜಾಧವ ಹೇಳಿದರು.

ಬಸವ ಸಮಿತಿಯ ಅಕ್ಕನ ಬಳಗಿಂದ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಮಹಾದೇವಿಯಕ್ಕಗಳ ಸಮ್ಮೇಳನ–12’ದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಸಮಾರೋಪ ಭಾಷಣ ಮಾಡಿದರು.

‘ಬಸವಣ್ಣ ಎಂಬ ಹೆಸರೇ ಒಂದು ಸ್ಫೂರ್ತಿಯ ಸೆಲೆ. ಬಸವಣ್ಣ ಮತ್ತು ಬವಸವಾದಿ ಶರಣರ ಚಿಂತನೆ, ಆಲೋಚನೆಗಳು ದೂರಗಾಮಿಯಾಗಿದ್ದವು. ಅವುಗಳನ್ನು ಅರಿತರೆ ಸಾಲದು, ಆಚರಣೆಗೆ ತರಬೇಕು’ ಎಂದು ಹೇಳಿದರು.

‘12ನೇ ಶತಮಾನದಲ್ಲಿಯೇ ಅಸಮಾನತೆ, ಕಂದಾಚಾರ, ಮೂಢ ನಂಬಿಕೆ ವಿರುದ್ಧ ಹೋರಾಡಿದ ಶರಣರು, ಮನುಷ್ಯ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ತಂದುಕೊಟ್ಟುರು. ಸ್ತ್ರೀಯರಿಗೆ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯದ ಸಿಹಿ ನೀಡಿದವರು. ಪ್ರತಿಯೊಂದು ವಚನವೂ ಕೊನೆಗೆ ಮಾನವೀಯ ಮೌಲ್ಯದ ಆಶಯವನ್ನೇ ಹೇಳುತ್ತದೆ. ವಚನಗಳ ಅಧ್ಯಯನ ಮಾಡಿದರೆ ಸಾಕು; ಪರಿಪೂರ್ಣ ಮನುಷ್ಯತ್ವದ ಅರಿವಾಗುತ್ತದೆ’ ಎಂದು ಹೇಳಿದರು.

ಪ್ರೊ.ಶಾಂತಲಾ ನಿಷ್ಠಿ, ಪ್ರೊ.ಪೂರ್ಣಿಮಾ ಪಾಟೀಲ, ಪ್ರೊ.ಚಿತ್ರಲೇಖಾ, ಪ್ರೊ.ಮಂಗಳಾ ಉಪ್ಪಿನ್, ಮೀನಾಕುಮಾರಿ, ಮಂಜುಳಾ ಜಾನೆ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಅಧ್ಯಕ್ಷೆ ದಾಕ್ಷಾಯಿಣಿ ಅವ್ವ, ಬಸವ ಸಮಿತಿಯ ಅಕ್ಕ ಬಳಗದ ಅಧ್ಯಕ್ಷೆ ವಿಲಾಸವತಿ ಖೂಬಾ, ಜಯಶ್ರೀ ದಂಡೆ, ಅನುಸೂಯಾ ನಡಕಟ್ಟಿ, ಶರಣಮ್ಮ ಕಲಬುರ್ಗಿ, ಶಿವಲೀಲಾ ಶೀಲವಂತ ಇದ್ದರು.

ಸಮ್ಮೇಳನದ ಪ್ರಯುಕ್ತ ಬೆಳಿಗ್ಗೆಯಿಂದ ಸಂಜೆಯವರೆಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶರಣರ ಹಾಡು, ಜಾನಪದ ಗಾಯನ, ರೂಪಕ, ದರ್ಶನ, ಕೋಲಾಟ, ವಚನ ಗಾಯನ, ನೃತ್ಯಾಭಿನಯ  ಕಾರ್ಯಕ್ರಮಗಳು ಮನಸೂರೆಗೊಂಡವು. ವಿವಿಧ ವಿಷಯಗಳು ಕುರಿತು ಪರಿಣತರು ಗೋಷ್ಠಿಗಳಲ್ಲಿ ವಿಚಾರ ಮಂಡಿಸಿದರು.

Post Comments (+)