ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಕಲಬುರಗಿಯಲ್ಲಿ ಕಾರ್ಯಕ್ರಮ
Last Updated 31 ಮೇ 2022, 13:09 IST
ಅಕ್ಷರ ಗಾತ್ರ

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಲಬುರಗಿ ಸೇರಿದಂತೆ ದೇಶದ ವಿವಿಧೆಡೆ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂವಾದ ನಡೆಸಿದರು.

ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದ ಫಲಾನುಭವಿ ಮಹಿಳೆ ಸಂತೋಷಿ, ಕಲಬುರಗಿ ತಾಲ್ಲೂಕಿನ ಬೇಲೂರಿನ ನೀಲಕಂಠ ಬಿರಾದಾರ, ಚಿಂಚೋಳಿ ತಾಲ್ಲೂಕು ಕೋಡ್ಲಿಯ ಅಣ್ಣಾರಾವ ಪೆದ್ದಿ ಹಾಗೂ ಆಳಂದ ತಾಲ್ಲೂಕಿನ ಬೆಣ್ಣೆಶಿರೂರು ಗ್ರಾಮದ ಅಲ್ಲಮಪ್ರಭು ಭಾಗವಹಿಸಿದ್ದರು.

ಸಂವಾದದ ಬಳಿಕ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ನವ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಆ ದಿಸೆಯಲ್ಲಿ ನಾವು ಸಾಗಿದ್ದೇವೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಜನರ ಸೇವಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಹಿಂದೆಲ್ಲ ಯಾವುದೇ ಸರ್ಕಾರಿ ಯೋಜನೆಗಳು ಪಡೆಯಬೇಕಾದರೆ ಅಂದಿನ ವ್ಯವಸ್ಥೆಯೇ ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಇದೀಗ ಆ ವ್ಯವಸ್ಥೆಯ ಸಮಸ್ಯೆಗೆ ಸಂಪೂರ್ಣ ಇತಿಶ್ರೀ ಹಾಡಲಾಗಿದೆ. ತಂತ್ರಜ್ಞಾನದ ಮೂಲಕ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇವೆ. ಕೇಂದ್ರದಿಂದ ಕಳುಹಿಸುವ ಯಾವುದೇ ಯೋಜನೆಯ ಅನುದಾನ ಫಲಾನುಭವಿಯ ಖಾತೆಗೆ ನೇರವಾಗಿ ಜಮೆ ಆಗುತ್ತದೆ. 50 ಕೋಟಿ ಜನರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ನೀಡಲಾಗಿದೆ. 80 ಲಕ್ಷ ಜನರು ಪ್ರಧಾನಮಂತ್ರಿ ಬಿಮಾ ಯೋಜನೆಯಡಿ ವಿಮೆ ಸೌಲಭ್ಯ ಪಡೆದಿದ್ದಾರೆ. 45 ಲಕ್ಷ ಜನರ ಜನ–ಧನ್ ಖಾತೆ ತೆರೆಯಲಾಗಿದೆ‘ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಹೇಳಿಕೊಂಡರು.

ಪ್ರಧಾನಮಂತ್ರಿ ಅವರು ಹಿಮಾಚಲ ಪ್ರದೇಶದ ಶಿಮ್ಲಾದಿಂದ ಕೇಂದ್ರ ಪುರಸ್ಕೃತ ವಿವಿಧ ಯೋಜನೆ, ಕಾರ್ಯಕ್ರಮಗಳ ದೇಶದಾದ್ಯಂತ ಫಲಾನುಭವಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಕೇಂದ್ರಾಡಳಿತ ಪ್ರದೇಶ ಲಡಾಕ್‌ನ ಲೇಹ್ ಜಿಲ್ಲೆಯ ತಾಶಿ ತಂಡೂಪ್, ಬಿಹಾರದ ಬಂಕಾ ಜಿಲ್ಲೆಯ ಲಲಿತಾದೇವಿ, ತ್ರಿಪುರಾದ ಪಶ್ಚಿಮ್ ತ್ರಿಪುರಾ ಜಿಲ್ಲೆಯ ಪಂಕಜ್ ಸಲಾನಿ, ಜಿಲ್ಲೆಯ ಸಂತೋಷಿ ಹಾಗೂ ಗುಜರಾತ್ ರಾಜ್ಯದ ಮೆಹಸಾನಾ ಜಿಲ್ಲೆಯ ಅರವಿಂದ ಕುಮಾರ ಅವರೊಂದಿಗೆ ಪ್ರಧಾನಮಂತ್ರಿ ಆವಾಸ್, ಜಲ ಜೀವನ್ ಮಿಷನ್, ಒನ್ ನೇಷನ್ ಒನ್ ರೇಷನ್, ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಇನ್ನಿತರ ಯೋಜನೆಗಳಿಂದಾದ ಲಾಭದ ಕುರಿತು ಮಾಹಿತಿ ಪಡೆದರು.

ಕೇಂದ್ರ ಸರ್ಕಾರದ ಒಂಬತ್ತು ಸಚಿವಾಲಯದ 16 ಜನಪರ ಯೋಜನೆಗಳು ದೇಶದ ಬಡ ಜನರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಹಿನ್ನೆಲೆಯಲ್ಲಿ ವಿಡಿಯೊ ಸಂವಾದ ಕಾರ್ಯಕ್ರಮಕ್ಕೆ ‘ಗರೀಬ್ ಕಲ್ಯಾಣ ಸಮ್ಮೇಳನ’ ಎಂದು ಹೆಸರಿಸಲಾಗಿತ್ತು.

ಕಲಬುರಗಿಯಲ್ಲಿ ಜರುಗಿದ ಕಾರ್ಯಕ್ರದಮಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ಟಿಸಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ, ಕೃಷ್ಣ ಕಾಡಾ (ಭೀಮರಾಯನಗುಡಿ) ಅಧ್ಯಕ್ಷ ಶರಣಪ್ಪ ತಳವಾರ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯ ಉಪ ಕಾರ್ಯದರ್ಶಿ ಅರುಣ ಕೆಂಭಾವಿ, ಐಎಎಸ್ ಅಧಿಕಾರಿ ಹರ್ಷಾ ಮಂಗ್ಲಾ, ಜಿಲ್ಲಾ ಪಂಚಾಯಿತಿ ಸಿಇಓ ಡಾ. ಗಿರೀಶ್ ಡಿ. ಬದೋಲೆ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಕಮಿಷನರ್ ಶಂಕರ ವಣಿಕ್ಯಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ವಿವಿಧ ಯೋಜನೆಯ ಫಲಾನುಭವಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT