ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಿ: ಬಿ.ಎಲ್.ಸಂತೋಷ್

ಪಕ್ಷದ ಮುಖಂಡರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೂಚನೆ
Last Updated 30 ಡಿಸೆಂಬರ್ 2022, 15:43 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮೂರು ತಿಂಗಳಲ್ಲಿ ಎದುರಾಗಲಿದ್ದು, ಅಲ್ಲಿಯವರೆಗೂ ವಿಶ್ರಾಂತಿ ತೆಗೆದುಕೊಳ್ಳದೇ ಅಹರ್ನಿಶಿ ಶ್ರಮಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.

ನಗರದಲ್ಲಿ ಶುಕ್ರವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಬಿಜೆಪಿಯ ಒಂಬತ್ತು ಮಂಡಲಗಳ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಹಾಗೂ ಮಂಡಲಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಪಕ್ಷದ ನಾಯಕರು, ಕಾರ್ಯಕರ್ತರು ಪದೇ ಪದೇ ಬೆಂಗಳೂರಿಗೆ ಹೋಗುವುದನ್ನು ಬಿಟ್ಟು, ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿದ್ದು ಕೆಲಸ ಮಾಡಬೇಕು. ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಕೇಸರಿ ಪತಾಕೆ ಹಾರಬೇಕು. ಹೀಗಾಗಿ ನಾವೆಲ್ಲರೂ ಬೂತ್‌ಗಳ ಕಡೆಗೆ ಹೆಚ್ಚು ಕೇಂದ್ರಿಕೃತವಾಗಿ ಕಾರ್ಯನಿರ್ವಹಿಸಬೇಕು. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ 104 ಸ್ಥಾನಗಳು ಮಾತ್ರ ಬಂದಿವೆ. ಆದರೆ ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಶ್ರಮಿಸಿ’ ಎಂದು ಹೇಳಿದರು.

ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಕಳೆದ ಬಾರಿ ಅಲ್ಪ ಮತಗಳಲ್ಲೇ ಸೋಲು ಕಂಡಿದ್ದೇವೆ. ಈ ಬಾರಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲೇಬೇಕು. ಅದಕ್ಕಾಗಿ ಈಗಿನಿಂದಲೇ ಮತದಾರರನ್ನು ಭೇಟಿ ಮಾಡಿ ಮನವೊಲಿಸಬೇಕು. ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರ ನಿಧನದ ಪ್ರಯುಕ್ತ ವೇದಿಕೆಯಲ್ಲಿ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ್ ಜಾಧವ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ಟಿಸಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ ಸುಭಾಷ್ ಗುತ್ತೇದಾರ, ವಿಧಾನಪರಿಷತ್ ಸದಸ್ಯರಾದ ಬಾಬುರಾವ ಚಿಂಚನಸೂರ, ಬಿ.ಜಿ. ಪಾಟೀಲ, ಸುನೀಲ್ ವಲ್ಯಾಪುರ, ಶಶೀಲ್ ನಮೋಶಿ, ‍ಪಕ್ಷದ ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಈಶ್ವರ ಸಿಂಗ್ ಠಾಕೂರ್, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ವೇದಿಕೆಯಲ್ಲಿದ್ದರು.

ಶಾಸಕ ಮತ್ತಿಮಡು ಗೈರು: ಪ್ರಸ್ತುತ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ಬಿ.ಎಲ್. ಸಂತೋಷ್ ಅವರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT